ಕೋಲಾರ

ಕೋಳಿ ಸಾಕಾಣಿಕೆದಾರರ ಸಾಲ ಮನ್ನಾ; ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಕೋಲಾರ, ಸೆ.3
ಕೋಳಿ ಸಾಕಾಣಿಕೆದಾರರ ಸಾಲ ಮನ್ನಾ ಮಾಡಲು ಹಾಗೂ ಸಬ್ಸಿಡಿ ಮುಂದುವರೆಸಲು ಒತ್ತಾಯಿಸಿ ಕೋಲಾರ ಜಿಲ್ಲಾ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಕೋಳಿ ಸಾಕಾಣಿಕೆದಾರರು ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮುಖೇನ ಆಗಮಿಸಿ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಾಂಸದ ಕೋಳಿ ಸಾಕಾಣಿಕೆದಾರರು ವಿವಿಧ ಬ್ಯಾಂಕುಗಳಿಂದ ಕೋಳಿ ಸಾಕಲು ಸಾಲ ಪಡೆದಿದ್ದಾರೆ. 10 ಸಾವಿರ ಕೋಳಿ ಸಾಕಾಣಿಕೆ ಮಾಡಿದರೆ 70 ರಿಂದ 80 ಸಾವಿರ ರು.ಲಾಭ ಸಿಗುತ್ತದೆ ಎಂದು ಕಂಪನಿಗಳು ಹೇಳಿದ್ದರಿಂದ ರೈತರು ಸಾಲ ಮಾಡಿ ಕೋಳಿ ಸಾಕಾಣೆ ಮಾಡಿದ್ದಾರೆ. ಆದರೆ, ಕಂಪನಿಯವರು ಹೇಳಿದ ಪ್ರಕಾರ ಲಾಭ ಸಿಗುವ ಬದಲು ನಷ್ಟ ಉಂಟಾಗಿರುವುದರಿಂದ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಕೋರಿದ್ದರೂ ಬೇಡಿಕೆ ಈಡೇರಿಲ್ಲವೆಂದು ಕೋಳಿ ಸಾಕಾಣಿದಾರರ ಸಂಘದ ಮುಖಂಡರು ದೂರಿದ್ದಾರೆ.
ಕೋಳಿ ಸಾಕಾಣಿಗಾಗಿ ರೈತರು ತಮ್ಮ ಜಮೀನುಗಳನ್ನು ಬ್ಯಾಂಕಿಗೆ ಒತ್ತೆಯಿಟ್ಟು ಸಾಲ ಪಡೆದಿದ್ದಾರೆ. ಪ್ರಾರಂಭದಲ್ಲಿ ಕೋಳಿ ಸಾಕಾಣಿಕೆಯಿಂದ ಸಿಗುತ್ತಿದ್ದ ಲಾಭ ನಂತರ ಇಳಿಮುಖವಾಗಲು ಕಂಪನಿಗಳು ನೀಡಿದ ಔಷಧಿಗಳು ಕಾರಣವಾಗಿವೆ, ಜೊತೆಗೆ ಬೆಸ್ಕಾಂನವರು ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ಬಿಲ್ಗಾಗಿ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು.
ಕೋಳಿ ಸಾಕಾಣಿಕೆದಾರರಿಗೆ ಮರಿ ನೀಡುತ್ತಿರುವ ಕಂಪನಿಗಳ ಕಿರುಕುಳ ಹೆಚ್ಚಾಗುತ್ತಿರುವುದರಿಂದ ರೈತರು ಕಂಗಾಲು ಆಗಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೋಳಿ ಸಾಕಾಣಿಕಾ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಸಿ. ಮಂಜುನಾಥ್, ಸಂಚಾಲಕ ಸುಗಟೂರು ವಿಶ್ವನಾಥ್, ಖಜಾಂಚಿ ಬಾಸ್ಕರ್, ಕಾರ್ಯದರ್ಶಿ ಚಿಟ್ನಹಳ್ಳಿ ಎಂ. ರಮೇಶ್, ಉಪಾಧ್ಯಕ್ಷ ಮುನೇಗೌಡ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಸರ್ಕಾರಕ್ಕೆ ಮನವಿ ಪತ್ರ ಕಳುಹಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.