ಕೋಲಾರ

ಗುರುಗಳ ರಾಜಕೀಯ; ತಲೆ ಎತ್ತದ ಭವನ

Published On :

ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಹಣ ಇದೆ. ಜಾಗ ಇದೆ. ಜತೆಗೆ ಪ್ರಮುಖವಾಗಿ ಎಲ್ಲರ ಸಹಕಾರ ಇದೆ. ಆದರೂ ಕಳೆದ ಕೆಲ ವರ್ಷಗಳ ಹಿಂದೆ ಕೈಗೊಂಡ ನಿರ್ಧಾರದಂತೆ ಇಲ್ಲಿವರೆಗೂ ಚಿಕ್ಕಬಳ್ಳಾಪುರದಲ್ಲಿ ಗುರುಭವನ ನಿರ್ಮಿಸಲು ಸಾಧ್ಯವಾಗಿಲ್ಲ. ಇದಕ್ಕೆ ಬೇರೆಯವರು ಅಡ್ಡಿಪಡಿಸುತ್ತಿರುವುದು ಕಾರಣವಲ್ಲ. ಬದಲಿಗೆ ಸ್ವಯಂ ಶಿಕ್ಷಕರ ನಡುವೆ ನಡೆಯುತ್ತಿರುವ ಭಿನ್ನಮತ, ಕಚ್ಚಾಟ, ಗುಂಪುಗಾರಿಕೆ, ಇಚ್ಛಾಶಕ್ತಿ ಕೊರತೆಯೇ ಗುರುಭವನ ಕಟ್ಟಡ ತಲೆ ಎತ್ತಿ ನಿಲ್ಲುವಂತಾಗಲು ಅಡ್ಡಿಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಗುರುಭವನ ನಿರ್ಮಾಣದ ಪ್ರಸ್ತಾಪ 70 ರ ದಶಕದಲ್ಲಿಯೇ ಕೇಳಿ ಬಂದಿತ್ತು. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಾವರಿ ಸಚಿವರಾಗಿದ್ದ ಲಕ್ಷ್ಮೀಪತಿ ಮತ್ತು ಸ್ಥಳೀಯ ಶಾಸಕರಾಗಿದ್ದ ಎ. ಮುನಿಯಪ್ಪರವರ ಕಾಲದಲ್ಲಿ ಗುರು ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಆ ನಂತರ ಯಾವುದೇ ಬೆಳವಣಿಗಳಾಗಲಿಲ್ಲ. ಕೊನೆಗೆ 90 ರ ದಶಕದಲ್ಲಿ ಚಿಕ್ಕಬಳ್ಳಾಪುರ ಬಿಇಓ ಆಗಿದ್ದ ಪ್ರಹ್ಲಾದಗೌಡರು ಶಿಕ್ಷಕರಿಗೆ ಸಂಬಂಧಪಟ್ಟ ಕಾರ್ಯಕ್ರಮವೊಂದರಲ್ಲಿ ಇಲ್ಲಿ ಗುರುಭವನ ನಿರ್ಮಾಣದ ಅಗತ್ಯತೆಯ ಬಗ್ಗೆ ಗಮನ ಸೆಳೆದಿದ್ದರಿಂದ ಎಚ್ಚೆತ್ತುಕೊಂಡು ಕಟ್ಟಡ ನಿರ್ಮಾಣಕ್ಕೆ ಅನುದಾನ ಕ್ರೋಢೀಕರಣದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸಂಬಂಧಪಟ್ಟ ಜನಪ್ರತಿನಿಧಿಗಳ ಕ್ಷೇತ್ರ ಅಭಿವೃದ್ಧಿ ಅನುದಾನದಲ್ಲಿ ಅಗತ್ಯವಿರುವ ಹಣದ ನೆರವನ್ನು ಪಡೆದುಕೊಳ್ಳುವುದಲ್ಲದೇ ಶಿಕ್ಷಕ ಸಮುದಾಯದಿಂದಲೂ ಹಣ ಸಂಗ್ರಹಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಶಿಕ್ಷಕರು ತಮ್ಮ ತಿಂಗಳ ವೇತನದಲ್ಲಿ ಭವನ ನಿರ್ಮಾಣಕ್ಕಾಗಿ ತಲಾ ಇಂತಿಷ್ಟು ದೇಣಿಗೆ ನೀಡಿದ್ದರು. ಜತೆಗೆ ಜನಪ್ರತಿನಿಧಿಗಳು ಸಹ ಅಗತ್ಯವಿರುವ ಅನುದಾನ ನೀಡುವ ಘೋಷಣೆ ಮಾಡಿದರೂ ಕೇವಲ ಮಾತುಕತೆಗೆ ಸೀಮಿತವಾಯಿತೇ ಹೊರತು ಭವನ ನಿರ್ಮಾಣ ಕೆಲಸದಲ್ಲಾಗಲಿಲ್ಲ. ಈಗಲೂ ಸರ್ಕಾರಿ ಓಲ್ಡ್ ಮಿಡ್ಲ್ ಸ್ಕೂಲ್ ಶಾಲೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಕಲ್ಲು ಅನಾಥವಾಗಿಯೇ ಬಿದ್ದಿದೆ.
ಭೂ ಪೂಜೆಯೇ ಹೆಚ್ಚು: ಗುರುಭವನ ನಿರ್ಮಾಣಕ್ಕೆ ಒಂದಲ್ಲ, ಎರಡಲ್ಲ, ಮೂರು ಬಾರಿ ಭೂಮಿ ಪೂಜೆ ಕೈಗೊಳ್ಳಲಾಗಿದೆ. ಈ ಹಿಂದೆ ಸಚಿವ ಎನ್. ಲಕ್ಷ್ಮೀಪತಿ ಒಮ್ಮೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುಮ್ತಾಜ್ ಅಲಿಖಾನ್ ಎರಡು ಬಾರಿ ಭೂಮಿಪೂಜೆ ನೆರವೇರಿಸಿದ್ದಾರೆ. ಇದೀಗ ಕೇವಲ ವರ್ಷಕ್ಕೊಮ್ಮೆ ಅಂದರೆ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಮಾತ್ರ ನೆನೆಪಿಗೆ ಬರುತ್ತಿದೆ. ಅದೇ ರಾಗ ಅದೇ ಹಾಡು ಎನ್ನುವಂತೆ ಪ್ರತಿ ವರ್ಷ ಮುಂದಿನ ಶಿಕ್ಷಕರ ದಿನಾಚರಣೆ ವೇಳೆಗೆ ಗುರು ಭವನ ನಿರ್ಮಾಣವಾಗಬೇಕೆಂದು ಹೇಳಿಕೊಂಡು ಬರಲಾಗುತ್ತಿದೆಯಷ್ಟೇ. ಕಳೆದ ಬಾರಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ. ನಾರಾಯಣಸ್ವಾಮಿ ಮತ್ತು ಶಾಸಕರಾಗಿದ್ದ ಕೆ.ಪಿ. ಬಚ್ಚೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮಕ್ಕಳನ್ನು ತಿದ್ದಿತೀಡಿ ಸನ್ಮಾರ್ಗದಲ್ಲಿ ನಡೆಸಬೇಕಾದ ಶಿಕ್ಷಕರೇ ಗುರುಭವನ ವಿಷಯದಲ್ಲಿ ಮಕ್ಕಳಂತೆ ಕಚ್ಚಾಡುವುದು ಸರಿಯಲ್ಲ. ಮುಂದಿನ ವರ್ಷದ ಶಿಕ್ಷಕರ ದಿನಾಚರಣೆ ಗುರು ಭವನದಲ್ಲಿ ನಡೆಸಬೇಕೆಂದು ಸಲಹೆ ನೀಡಿದ್ದರು. ಆದರೂ ಈ ವಿಷಯದಲ್ಲಿ ಶಿಕ್ಷಕರ ಕಚ್ಚಾಟ, ಭಿನ್ನಮತ ಹಾಗೆಯೇ ಉಳಿದುಕೊಂಡಿರುವುದು ದುರದೃಷ್ಟಕರವೇ ಸರಿ.   
ಶಿಕ್ಷಕರ ಗಲಾಟೆ: ಮೇಲ್ನೋಟಕ್ಕೆ ಗುರುಭವನ ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳದ ಬಗ್ಗೆ ಶಿಕ್ಷಕರಲ್ಲಿ ಭಿನ್ನಮತ ಉಂಟಾಗಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆಯಾದರೂ ಶಿಕ್ಷಕರ ಸಂಘದಲ್ಲಿನ ಎರಡು ಗುಂಪುಗಳ ನಡುವಿನ ಪ್ರತಿಷ್ಠೆ, ದ್ವೇಷದ ಕಿಡಿಯೇ ಹಿನ್ನಡೆಗೆ ನಿಜವಾದ ಕಾರಣ ಎನ್ನಲಾಗಿದೆ. ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ರಾಜಕಾರಣಿಗಳಂತೆ ಹೋರಾಡುವ ಶಿಕ್ಷಕರು, ಸೋಲು ಗೆಲುವಿನ ನಂತರವೂ ಗಲಾಟೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಏನೇ ಆಗಲಿ ತಮ್ಮ ಅಧಿಕಾರವಧಿಯಲ್ಲಿ ಕೆಲಸವಾಗಬೇಕು. ಅಧಿಕಾರ ತಮ್ಮ ವಿರೋಧಿ ಕೈಯಲ್ಲಿರುವಾಗ ಕೆಲಸ ಮಾಡಲು ಬಿಡಬಾರದು ಎಂದು ಪರಸ್ಪರ ಪಟ್ಟು ಹಿಡಿದುಕೊಂಡು ಬರಲಾಗುತ್ತಿದೆ.
ಒಂದು ಗುಂಪು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುಭವನ ನಿರ್ಮಾಣಕ್ಕೆ ಮುಂದಾದರೆ, ಮತ್ತೊಂದು ಶಿಕ್ಷಕರ ಗುಂಪು ಕಾಲೇಜಿನ ಬಳಿ ನಿರ್ಮಿಸುವುದರಿಂದ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತದೆ. ಬೇರೆ ಕಡೆ ಸ್ಥಳವನ್ನು ಗುರುತಿಸಬೇಕೆಂದು ವಾದಿಸಿದ್ದು ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎರಡು ಬಣಗಳು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿತ್ತು. ಇದು ಪೊಲೀಸ್ ಠಾಣೆಯ ಮೆಟ್ಟಲನ್ನೂ ಏರಿತ್ತು. ಆಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ತೇಪೆ ಹಾಕಿದ್ದರು.
ವರ್ಷಗಳು ಕಳೆದರೂ ಸಹ ಗುರುಭವನ ನಿರ್ಮಾಣಕ್ಕೆ ಅಡ್ಡಿ ಆತಂಕಗಳು ದೂರವಾಗಿಲ್ಲ. ತಮಗೆ ಅನುಕೂಲವಾಗುವ ಭವನ ನಿರ್ಮಾಣದ ವಿಳಂಬಕ್ಕೆ ಶಿಕ್ಷಕರೇ ಕಾರಣರಾಗುವುದು ಬೇಡ. ಈಗಲಾದರೂ ಪ್ರತಿಯೊಬ್ಬರು ತಮ್ಮ ಪ್ರತಿಷ್ಠೆ ಬಿಟ್ಟು ಗುರುಭವನ ನಿರ್ಮಾಣಕ್ಕೆ ಸಹಕರಿಸಬೇಕೆಂದು ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಎಲ್. ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಟ್ಟಾರೆ ಈ ವರ್ಷದಲ್ಲಾದರೂ ದಿಟ್ಟ ಕ್ರಮ ಕೈಗೊಂಡು ಭವನ ನಿರ್ಮಾಣ ಕೆಲಸ ಶುರು ಮಾಡಲಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.


ಈಗಾಗಲೇ ಸಭೆ ಕೈಗೊಂಡು ಚರ್ಚೆ ನಡೆಸಲಾಗಿದೆ. ಶಿಕ್ಷಕರ ದಿನಾಚರಣೆಯ ನಂತರ ಒಂದು ತೀರ್ಮಾನಕ್ಕೆ ಬರಲಾಗುವುದು. ಆದಷ್ಟು ಬೇಗ ಎಲ್ಲರ ಸಹಕಾರದೊಂದಿಗೆ ಗುರುಭವನ ನಿರ್ಮಾಣವಾಗಲಿದೆ.
ಟಿ ಅಜಿತ್ ಪ್ರಸಾದ್, ಉಪ ನಿರ್ದೇಶಕರು,
ಸಾರ್ವಜನಿಕ ಶಿಕ್ಷಣ ಇಲಾಖೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.