ಸತತ 9 ದಿನಗಳ ಪೂಜೆ, ಮಕ್ಕಳಿಗೆ ಮದುವೆ
ಚಿಕ್ಕಬಳ್ಳಾಪುರ: ಮಳೆಯಿಲ್ಲದೇ ಬೆಳೆಗಳು ಒಣಗಿ ನೀರು ಮತ್ತು ಮೇವಿಗೆ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ಹತಾಶೆಗೊಂಡ ತಾಲೂಕಿನ ಜಾತವಾರ ಸಮೀಪದ ಚೆಲುಮೇನಹಳ್ಳಿಯ ಗ್ರಾಮಸ್ಥರು ಸತತವಾಗಿ 9 ದಿನಗಳ ಕಾಲ ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡಿದಲ್ಲದೇ ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಕಾಕಾತಾಳಿಯವೋ, ಇಲ್ಲವೇ ವಿಪರ್ಯಾಸವೋ ಮಕ್ಕಳಿಗೆ ಮದುವೆ ಮಾಡಿಸಿದ ದಿನದಂದು ಗ್ರಾಮದಲ್ಲಿ ಧಾರಾಕಾರ ಮಳೆ ಸುರಿದಿದೆ.
ಮಳೆಗಾಗಿ ಎದುರು ನೋಡುವ ಜನರು ಮಳೆ ಕೈ ಕೊಟ್ಟ ಸಂದರ್ಭದಲ್ಲಿ ದೇವರ ಆರಾಧನೆ ಕೈಗೊಳ್ಳುವುದು, ಕಪ್ಪೆಗಳು, ಕತೆಗಳು, ಮಕ್ಕಳ ಮದುವೆ ಮಾಡಿಸುವುದು. ಇಲ್ಲವೇ ಶವ ಸಂಸ್ಕಾರ ಯಾತ್ರೆ ಕೈಗೊಳ್ಳುವುದು ಸೇರಿದಂತೆ ನಾನಾ ರೀತಿಯ ಆಚರಣೆ ಕೈಗೊಂಡು ಮಳೆಗಾಗಿ ಪ್ರಾರ್ಥಿಸುವಂತಹುದು ಸಾಮಾನ್ಯವಾಗಿ ಈಗಲೂ ಅನೇಕ ಕಡೆ ನಡೆಯುತ್ತಿದೆ.
ಅದೇ ರೀತಿ ತಾಲೂಕಿನ ಚೆಲುಮೇನಹಳ್ಳಿಯ ಗ್ರಾಮಸ್ಥರು ಕಳೆದ 9 ದಿನಗಳಿಂದ ಗ್ರಾಮದ ದೇವರಿಗೆ ವಿಶೇಷ ಅಭಿಷೇಕ, ಭಜನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡರು. ಪೂಜಾ ಕಾರ್ಯಕ್ರಮ ಆಚರಣೆಯ ಕೊನೆಯ ದಿನ ಗ್ರಾಮದ ಇಬ್ಬರು ಮಕ್ಕಳಾದ ರಾಣಿ ಮತ್ತು ಪುಷ್ಪ ( ಇಬ್ಬರೂ ಹೆಣ್ಣು ಮಕ್ಕಳು, ಹೆಸರು ಬದಲಾಯಿಸಲಾಗಿದೆ) ರವರಿಗೆ ಮದುವೆ ಮಾಡಿಸಿದರು. ರಾಣಿಗೆ ವರನ ವೇಷ, ಪುಷ್ಪಗೆ ವಧುವಿನ ವೇಷ ಹಾಕಿಸಿ, ಗ್ರಾಮದ ದೇವಾಲಯಕ್ಕೆ ಕರೆದುಕೊಂಡು ಬಂದು ವೇದ ಮಂತ್ರಗಳ ಪಠಣದ ನಡುವೆ ಮದುವೆ ಮಾಡಿಸಿದರು. ಆ ನಂತರ ಗ್ರಾಮದಲ್ಲಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡನ್ನು ಹಾಡುತ್ತ ನೂತನ ದಂಪತಿಗಳೊಂದಿಗೆ ಮೆರವಣಿಗೆ ಹೊರಟರು.
ಈ ಸಂದರ್ಭದಲ್ಲಿ ಆಗಾಗ ಮಳೆರಾಯ ಮುನಿಸಿಕೊಳ್ಳುತ್ತಾನೆ. ಇದರಿಂದ ಎಲ್ಲೆಡೆ ಸಮಸ್ಯೆಗಳು ಉದ್ಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡು ಮಳೆರಾಯನನ್ನು ಒಲಿಸಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಣಿದು ಕುಪ್ಪಳಿಸಿದರು: ತಿಂಗಳುಗಟ್ಟಲೇ ಮಳೆಯಿಲ್ಲದೇ ಗ್ರಾಮಸ್ಥರು ಕಂಗಲಾಗಿದ್ದರು. ಈ ನಡುವೆ ತಾವು ಮಳೆಗಾಗಿ ಪ್ರಾರ್ಥಿಸಿ ಪೂಜಾ ಕಾರ್ಯಕ್ರಮಗಳನ್ನು ಅಂತ್ಯಗೊಳಿಸಿದ ಕೊನೆಯ ದಿನದಂದು ಗ್ರಾಮದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು. ಕೊನೆಗೆ ತಮ್ಮ ಪೂಜೆಗೆ ದೇವರು ಒಲಿದು ಬಿಟ್ಟ ಎಂದು ತಮ್ಮ ಮುಗ್ಧತೆ ಪ್ರದರ್ಶಿಸಿದರು.
ಮಳೆಗಾಲದಲ್ಲಿ ಮಳೆ ಬೀಳುವುದರಲ್ಲಿ ಏರುಪೇರು ಉಂಟಾಗುವುದು ಸಹಜ. ಒಮ್ಮೆ ಪ್ರಾರಂಭದಲ್ಲಿ ಮಳೆ ಜೋರಾಗಿ ಬೀಳಬಹುದು. ಇಲ್ಲವೇ ಪ್ರಾರಂಭದ ಕೆಲ ದಿನಗಳಲ್ಲಿ ಕೈ ಕೊಟ್ಟು ಅಂತ್ಯದಲ್ಲಿ ಮಳೆ ಸುರಿಯಬಹುದು.ಈ ವ್ಯತ್ಯಾಸಗಳ ನಡುವೆ ಪೂಜೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಮಳೆಯಾದಾಗ ಪೂಜೆಯ ಫಲ ಎಂದು ಹಲವರು ತಿಳಿದುಕೊಳ್ಳುತ್ತಾರೆ. ಅಲ್ಲದೇ ಸಂಬಂಧವಿಲ್ಲದಿದ್ದರೂ ಕಪ್ಪೆ, ಕತ್ತೆ ಮತ್ತು ಮಕ್ಕಳ ಮದುವೆ ಮಾಡಿಸುವುದು ಸೇರಿದಂತೆ ನಾನಾ ರೀತಿಯ ಆಚರಣೆ ಕೈಗೊಳ್ಳುತ್ತಾರೆ ಎಂದು ಚಿಂತಕ ನಾರಾಯಣಸ್ವಾಮಿ ತಿಳಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

