ಪತ್ನಿ, ಪುತ್ರಿ ಕೊಲೆ ಆರೋಪಿಗೆ ಜನಪ್ರತಿನಿಧಿಗಳ ಆಶ್ರಯ
ಕನ್ನಡಪ್ರಭ ವಾರ್ತೆ, ಕೋಲಾರ, ಸೆ.3
ಹೆಚ್ಚಿನ ವರದಕ್ಷಿಣೆ ಮತ್ತು ಎರಡನೇ ಮದುವೆಗಾಗಿ ಹೆಂಡತಿ ಮತ್ತು ಪುಟ್ಟ ಮಗಳನ್ನು ಕೊಂದು ಪರಾರಿಯಾಗಿರುವ ಆರೋಪಿ ಎಸ್.ಕೆ. ಸಂತೋಷ್ಕುಮಾರ್ನನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ತರುವ ಸಲುವಾಗಿ ಸೆ.5 ರಂದು ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ವಿ. ಗೀತಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 14 ದಿನಗಳಿಂದ ಕೊಲೆ ಆರೋಪಿಯ ಶೀಘ್ರ ಬಂಧನಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸದಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದರು.
ಆರೋಪಿಯ ವಿರುದ್ಧ ಎಫ್.ಐ.ಆರ್ ದಾಖಲು ಆಗಿ 54ದಿನ ಕಳೆದರೂ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆಯು ಹಾರಿಕೆ ಉತ್ತರ ನೀಡುತ್ತಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಇಲ್ಲವೇ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳಾಗಲಿ ಇತ್ತ ಸುಳಿಯದಿರುವುದು ಗಮನಿಸಿದರೆ ಇವರೆಲ್ಲ ಆರೋಪಿಯ ರಕ್ಷಣೆಗಾಗಿ ನಿಂತಿದ್ದಾರೆಂಬ ಅನುಮಾನ ಮೂಡುತ್ತಿದೆ ಎಂದು ತಿಳಿಸಿದರು.
ಜಿಲ್ಲೆ ಎಸ್ಪಿ ಡಾ. ರಾಮ್ನಿವಾಸ್ ಸಫಟ್ ಅವರು ಒಂದು ದಿನ ಸಹ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಸಮಸ್ಯೆ ವಿಚಾರಿಸಿಲ್ಲ, ಇಲಾಖೆಯ ಕೆಳ ಹಂತದ ಅಧಿಕಾರಿಗಳನ್ನು ಕಳುಹಿಸಿ ಜವಾಬ್ದಾರಿ ಮರೆಯುತ್ತಿದ್ದಾರೆ, ಅನುಭವದ ಕೊರತೆ ಅವರಲ್ಲಿದೆ, ಪುಸಕ್ತ ಓದಿದರೆ ಸಾಲದು ಎಂದು ಟೀಕಿಸಿದರು.
ಗೃಹ ಸಚಿವರ ಭೇಟಿ: ಆರೋಪಿ ಸಂತೋಷ್ಕುಮಾರನನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿರುವುದನ್ನು ಸೋಮವಾರ ಗೃಹ ಸಚಿವ ಕೆ.ಜೆ. ಜಾರ್ಜ್ ಗಮನಕ್ಕೆ ತರಲಾಗಿದೆ. ಘಟನೆಯ ಬಗ್ಗೆ ನನಗೇನು ಗೊತ್ತಿಲ್ಲವೆಂದು ಸಚಿವರು ನೀಡಿದ ಉತ್ತರದಿಂದ ಅಚ್ಚರಿ ಉಂಟಾಯಿತು. ಜಿಲ್ಲಾ ಪೊಲೀಸರು ಪ್ರಗತಿಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡದಿರುವುದು ಗಮನಿಸಿದರೆ ಇಲಾಖೆಯ ವೈಫಲ್ಯ ಎದ್ದು ಕಾಣುತ್ತದೆ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಯತ್ನಿಸಬೇಕಾಗಿತ್ತು. ಹಾಗೆಯೇ ಜನಪ್ರತಿನಿಧಿಗಳು ಸಹ ಹೆಣ್ಣು ಮಗಳ ಸಾವಿನ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಆರೋಪಿಯ ಬಂಧನಕ್ಕೆ ಸ್ಪಷ್ಟ ಸೂಚನೆ ನೀಡಬೇಕಾಗಿತ್ತೆಂದು ಅಭಿಪ್ರಾಯಪಟ್ಟರು.
ಗೃಹ ಸಚಿವರು ಜನವಾದಿ ಮಹಿಳಾ ಸಂಘಟನೆಯ ಮುಖಂಡರು ಮತ್ತು ಮೃತರ ಕುಟುಂಬ ವರ್ಗದಿಂದ ಎಲ್ಲ ರೀತಿಯ ಮಾಹಿತಿ ಪಡೆದಿದ್ದಾರೆ. ಆರೋಪಿಯ ವಿರುದ್ಧ ಕ್ರಮಕ್ಕೆ 24 ಗಂಟೆಗಳ ಭರವಸೆ ನೀಡಿದ್ದಾರೆ. ಒಂದು ವೇಳೆ ಭರವಸೆ ಈಡೇರದಿದ್ದರೆ ಸೆ.5 ರಂದು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸಿಪಿಐ ವಿರುದ್ಧ ಆರೋಪ: ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಮುಖಂಡ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ, ಆರೋಪಿಯನ್ನು ಕೂಡಲೇ ಬಂಧಿಸದಿದ್ದರೆ ಮುಖ್ಯಮಂತ್ರಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ಧ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.
ಸೆ.5ರಂದು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಿರುವ ಪ್ರತಿಭಟನೆಗೆ ಜಿಲ್ಲೆಯ ಸಮಸ್ತ ಜನತೆ ಸಹಕಾರ ನೀಡಬೇಕೆಂದು ಅವರು ಕರೆ ನೀಡಿದರು.
ಕೋಲಾರ ಸಿಪಿಐ ರಮೇಶ್ ಅವರು ಕೊಲೆ ಆರೋಪಿಯನ್ನು ಬಂಧಿಸುವುದಾಗಿ ಹೇಳಿ ದೂರುದಾರರ ಕಾರಿನಲ್ಲೇ 8 ದಿನ ಎಲ್ಲಾ ಕಡೆ ಸುತ್ತಾಡಿ ಕಾಲಹರಣ ಮಾಡಿದ್ದಾರೆ, ನೊಂದವರಿಂದಲೇ ಕಾರಿಗೆ ಇಂಧನ ಹಾಕಿಸಿ ಹಣ ಖರ್ಚು ಮಾಡಿಸಿದ್ದಾರೆಯಾದರೂ ಆರೋಪಿಯನ್ನು ಹಿಡಿಯಲು ಸಾಧ್ಯವಾಗಿಲ್ಲವೆಂದು ಟೀಕಿಸಿದರು.
ಸಮತಾ ಸೈನಿಕ ದಳದ ಮುಖಂಡ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಭಯೋತ್ಪಾದಕರನ್ನು ಸದೆ ಬಡಿಯುವ ಶಕ್ತಿ ನಮ್ಮ ದೇಶದ ಪೊಲೀಸರಿಗೆ ಇದೆ. ಆದರೆ, ಕೊಲೆ ಆರೋಪಿಯನ್ನು ಬಂಧಿಸಲು ಕೋಲಾರದ ಪೊಲೀಸರಿಗೆ ಏಕೆ ಸಾಧ್ಯವಾಗುತ್ತಿಲ್ಲವೆಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ನ ಎ.ವಿ. ರಮೇಶ್, ಆಟೋ ಚಾಲಕರ ಸಂಘದ ಮುಖಂಡ ಮಂಜುನಾಥ್, ಅಂಚೆ ಅಶ್ವತ್ಥ್, ಮಂಜುಳಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

