ಆರೋಪಿ ಸಂತೋಷ್ ಕುಟುಂಬದವರ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಸೆ. 4
ಪತ್ನಿ ಮತ್ತು ಮಗಳ ಸಾವಿನ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿರುವುದರಿಂದ ನನ್ನ ಮಗ ತಲೆ ಮರಿಸಿಕೊಂಡಿದ್ದು, ಎಲ್ಲಿ ಹೋಗಿದ್ದಾನೋ ದೇವರಾಣೆ ನಮಗೆ ಗೊತ್ತಿಲ್ಲ, ಅವನಿಗಾಗಿ ನಾವು ಸಹ ಕಾದು ಕುಳಿತಿದ್ದೇವೆ, ನಮ್ಮ ಮನೆಗೆ ಬಂದರೆ ಇಲ್ಲವೇ ಎಲ್ಲಿಯಾದರೂ ಕಾಣಿಸಿದಲ್ಲಿ ನಾವೇ ಪೊಲೀಸರಿಗೆ ಒಪ್ಪಿಸುತ್ತೇವೆ, ದಯವಿಟ್ಟು ಪೊಲಿಸರು ನಮ್ಮ ಮನೆಗಳ ಮುಂದೆ ಬಂದು ಮಾನಸಿಕ ಹಿಂಸೆ ನೀಡುವುದು ತಡೆಯಿರಿ ಎಂದು ಆರೋಪಿ ಎಸ್.ಕೆ. ಸಂತೋಷ್‌ಕುಮಾರ್ ಅವರ ತಂದೆ-ತಾಯಿ ಹಾಗೂ ಸಂಬಂಧಿಕರು ಜಿಲ್ಲಾ ಪೊಲೀಸ್ ವಷ್ಠರಿಗೆ ಮನವಿ ಮಾಡಿದ್ದಾರೆ.
ಕಳೆದ 15 ದಿನದಿಂದ ಸಂತೋಷ್‌ಕುಮಾರ್ ಬಂಧನಕ್ಕೆ ಒತ್ತಾಯಿಸಿ ಕೆಲವರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ, ಯಾವುದೇ ತಪ್ಪು ಮಾಡದ ನಮ್ಮನ್ನು ಬಂಧಿಸಿ ವಿಚಾರಣೆಗೆ ಒತ್ತಾಯಿಸುತ್ತಿದ್ದಾರೆ, ಪೊಲೀಸರು ಪ್ರತಿದಿನ ರಾತ್ರಿ ನಮ್ಮ ಮನೆಗಳಿಗೆ ಬಂದು ಬಾಗಿಲು ತಟ್ಟಿ ನಮ್ಮನ್ನು ಎಬ್ಬಿಸಿ ಹತ್ತಾರು ಪ್ರಶ್ನೆಗಳು ಕೇಳುವ ಮೂಲಕ ಮಾನಸಿಕ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ.
ಜಮೀಲ್ ಬಳಿ ಗೋಳು: ನನ್ನ ಮಗ ಸಂತೋಷ್‌ಕುಮಾರ್ ಬದುಕಿದ್ದಾನೋ, ಸತ್ತಿದ್ದಾನೋ ಗೊತ್ತಾಗುತ್ತಿಲ್ಲ, ಎಲ್ಲಿದ್ದರೂ ಬೇಗನೆ ಬಾರೋ ಎಂದು ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದೇವೆ, ನಾವಂತೂ ಸೊಸೆ ಮತ್ತು ಮೊಮ್ಮಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡಿಲ್ಲ, ಏಕೆ ಅವರಿಬ್ಬರು ಸತ್ತರು ಎಂಬುದು ಅರ್ಥವಾಗುತ್ತಿಲ್ಲ. ಮಗನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಒತ್ತಡಕ್ಕೆ ಮಣಿದು ಪೊಲೀಸರು ನಮಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಅನುಮಾನದಿಂದ ನೋಡುತ್ತಿದ್ದಾರೆ, ನೆಮ್ಮದಿ ಹಾಳಾಗುತ್ತಿದೆ, ನಾವು ತಪ್ಪಿತಸ್ಥರು ಎಂದು ತಮ್ಮ ಬಳಿ ಏನಾದರೂ ಸಾಕ್ಷಿಗಳು ಇದ್ದರೆ ಇಲ್ಲೇ ನಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಗುಂಡಿಟ್ಟು ಕೊಲ್ಲಿ ಎಂದು ಆರೋಪಿಯ ತಂದೆ ಶ್ರೀನಿವಾಸಪುರ ತಾಲೂಕಿನ ಶಾಗತ್ತೂರು ಗ್ರಾಮದ ಎಸ್.ಆರ್. ಕೃಷ್ಣಪ್ಪ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಬಳಿ ಗೋಳಾಡಿದರು.
ತಪ್ಪು ಮಾಡಿಲ್ಲ: ಆರೋಪಿಯ ಸುಮಾರು ನೂರಕ್ಕೂ ಹೆಚ್ಚು ಮಂದಿ ಸಂಬಂಧಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ನೋವು ತೋಡಿಕೊಂಡರು. ಕೆಲ ವಕೀಲರು ಈ ಸಂದರ್ಭದಲ್ಲಿ ಮಾತನಾಡಿ, ಸಂತೋಷ್‌ಕುಮಾರ್ ಕೊಲೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಆದರೂ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾನೆ, ಊರಿಗೆ ಬಂದು ತನ್ನ ಕಷ್ಟ ಹೇಳಿಕೊಂಡಿದ್ದರೆ ನಾವೇ ಪೊಲೀಸರಿಗೆ ಒಪ್ಪಿಸಿ ನಂತರ ಜಾಮೀನು ಮೇಲೆ ಬಿಡುಗಡೆ ಮಾಡಿಸುತ್ತಿದ್ದೇವು, ಕಳೆದ 55 ದಿನಗಳಿಂದ ನಾಪತ್ತೆ ಆಗಿರುವುದು ನಮಗೆ ಅನುಮಾನ ಮೂಡಿಸಿದೆ ಎಂದರು. ಮನವಿ ಅಲಿಸಿದ ಎಎಸ್ಪಿ ಜಾಮೀಲ್, ನಿರಾಪರಾಧಿಗಳಿಗೆ ತೊಂದರೆ ನೀಡುವ ಉದ್ದೇಶ ನಮಗಿಲ್ಲ, ಒತ್ತಡ ಹೆಚ್ಚಿರುವುದರಿಂದ ಆರೋಪಿಯ ಬಂಧನಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ, ಸಂತೋಷ್‌ಕುಮಾರ್ ತಾನು ಕೊಲೆ ಮಾಡಿಲ್ಲವೆಂಬ ನಂಬಿಕೆ ಇದ್ದಲ್ಲಿ ಪೊಲೀಸರಿಗೆ ಶರಣಾಗಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬಹುದಾಗಿದೆ, ಆತ ಮಾಡಿದ ತಪ್ಪಿಗೆ ನಿಮಗೆ ತೊಂದರೆ ನೀಡುವುದಿಲ್ಲವೆಂದು ಭರವಸೆ ನೀಡಿದ ನಂತರ ಶಾಗತ್ತೂರಿನಿಂದ ಬಂದಿದ್ದ ಆರೋಪಿಯ ಕಡೆಯವರು ನಿರ್ಗಮಿಸಿದರು.
ಇತ್ತ ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಗುರುವಾರದಿಂದ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿರುವುದರಿಂದ ಪೊಲೀಸರಿಗೆ ತಲೆ ಬಿಸಿ ಹೆಚ್ಚಾಗುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

