6 ಉಪನ್ಯಾಸಕರ ವರ್ಗಾವಣೆ; ವಿದ್ಯಾರ್ಥಿಗಳಲ್ಲಿ ತಲ್ಲಣ
ಕೋಲಾರ: ನಗರದ ಸರ್ಕಾರಿ ಬಾಲಕರ ಕಾಲೇಜಿನ ಆರು ಮಂದಿ ಉಪನ್ಯಾಸಕರನ್ನು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ವರ್ಗಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳು ತಲ್ಲಣಗೊಂಡಿದ್ದಾರೆ.
ಕಳೆದ ತಿಂಗಳು ಕಾಲೇಜಿಗೆ ಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ಲೋಪದ ಪರಿಣಾಮ ಕಾಲೇಜಿನ ಉಪನ್ಯಾಸಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿದೆ ಎಂಬ ಮಾತು ಕೇಳಿ ಬಂದ ಬೆನ್ನಲ್ಲೇ ಆರು ಮಂದಿ ಉಪನ್ಯಾಸಕರನ್ನು ವರ್ಗಾವಣೆ ಮಾಡಿರುವುದರಿಂದ ಉಪನ್ಯಾಸಕರ ಕೊರತೆ ಉಂಟಾಗುವ ಸಾಧ್ಯತೆಗಳಿವೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಠ-ಪ್ರವಚನದ ಜೊತೆಗೆ ಕಾಲೇಜಿನ ಬಗ್ಗೆ ಕಾಳಜಿ ಹೊಂದಿದ್ದ ಉಪನ್ಯಾಸಕರನ್ನು ಮಾತ್ರ ಎತ್ತಂಗಡಿ ಮಾಡಿರುವ ಹಿಂದೆ ಕಾಣದ ಕೈಗಳ ಕೈವಾಡ ಇರುಬಹುದೆಂದು ಅನುಮಾನ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಇದೇ ಕಾಲೇಜಿನಲ್ಲಿ ಹೆಚ್ಚು ವರ್ಷಗಳಿಂದ ಇರುವ ಉಪನ್ಯಾಸಕರನ್ನು ಏಕೆ ಎತ್ತಂಗಡಿ ಮಾಡಿಲ್ಲವೆಂದು ಪ್ರಶ್ನಿಸಿದ್ದಾರೆ.
ಕಾಲೇಜಿನಲ್ಲಿ ಫಲಿತಾಂಶ ಕುಸಿತಕ್ಕೆ ಉಪನ್ಯಾಸಕರು ಮಾತ್ರ ಕಾರಣವಲ್ಲ, ವಿದ್ಯಾರ್ಥಿಗಳ ತಪ್ಪು ಇದೆ, ಇಂಗ್ಲೀಷ್ನಲ್ಲಿ ಕಡಿಮೆ ಅಂಕ ಪಡೆಯುವುದಕ್ಕೆ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಲ್ಲಿನ ನಿರಾಸಕ್ತಿಯು ಕಾರಣವಾಗಿದೆ. ಹಾಗೆಂದು ಒಂದು ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿರುವುದನ್ನು ಆಧಾರವಾಗಿಟ್ಟುಕೊಂಡು ಉಪನ್ಯಾಸಕರನ್ನು ವರ್ಗಾವಣೆ ಮಾಡುವುದರಿಂದ ಕಾಲೇಜಿನ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗುತ್ತದೆ ಎಂದು ತಿಳಿಸಿದ್ದಾರೆ.
ತಮಗೆ ಬೇಕಾದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಖಾಯಂ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದು ಸರಿಯಲ್ಲ, ಅತಿಥಿ ಉಪನ್ಯಾಸಕರಿಗೆ ಕಡಿಮೆ ವೇತನ ನೀಡುವುದರಿಂದ ಪಾಠ-ಪ್ರವಚನವನ್ನು ಶ್ರದ್ಧೆಯಿಂದ ಮಾಡಲು ಸಾಧ್ಯವಾಗುವುದೇ ಎಂದು ಪ್ರಶ್ನಿಸಿದ್ದಾರೆ.
ಲೋಕಾಯುಕ್ತರು ಬಂದು ಹೋದ ಮೇಲೆ ಕಾಲೇಜಿನ ಸ್ಥಿತಿ ಸುಧಾರಿಸುತ್ತಿದೆ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಸ್ವೌಮ್ಯತೆ ಹೆಚ್ಚಿದೆ, ಪ್ರತಿ ಗುರುವಾರ ವಿದ್ಯಾರ್ಥಿ ಸಮಾವೇಶದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಚರ್ಚೆಗಳಾಗುತ್ತಿವೆ. ಹೀಗಿದ್ದರೂ ಕಾಲೇಜು ಶಿಕ್ಷಣ ಇಲಾಖೆಯು ಉಪನ್ಯಾಸಕರನ್ನು ವರ್ಗಾವಣೆ ಮಾಡುವ ಮೂಲಕ ವಿದ್ಯಾರ್ಥಿಗಳ ಪ್ರಗತಿ ಕುಂಠಿತಕ್ಕೆ ಎಡೆ ಮಾಡಿದೆ ಎಂದಿರುವ ವಿದ್ಯಾರ್ಥಿಗಳು, ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ಉಪನ್ಯಾಸಕರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಕಾಲೇಜಿನ ಪ್ರಾಂಶುಪಾಲರು ವಿಫಲರಾಗಿದ್ದಾರೆ. ವರ್ಗಾವಣೆಗೊಂಡಿರುವ ಉಪನ್ಯಾಸಕರ ಜಾಗಕ್ಕೆ ಉತ್ತಮ ರೀತಿಯಲ್ಲಿ ಪಾಠ ಪ್ರವಚನ ಮಾಡುವ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವವರನ್ನು ನೇಮಿಸದಿದ್ದರೆ ವಿದ್ಯಾರ್ಥಿಗಳು ಬೀದಿ ಪಾಲಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

