ನರೇಗಾ ಸಮಗ್ರ ಅನುಷ್ಠಾನವಾಗಲಿ
ಮಾಲೂರು: ನರೇಗಾ ಯೋಜನೆಯು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿರುವುದರಿಂದ ಗ್ರಾಮ ಪಂಚಾಯ್ತಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾ ಪಂ ಅಧ್ಯಕ್ಷ ಪುಟ್ಟಸ್ವಾಮಿ ಕಿವಿಮಾತು ಹೇಳಿದರು.
ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಭವನದಲ್ಲಿ ನಿರ್ಮಲ ಭಾರತ ಅಭಿಯಾನ ಹಾಗೂ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ಗ್ರಾಪಂ ಜನಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿದ ಅವರು ಮಾತನಾಡಿದರು.
ನಿಮ್ಮ ಗ್ರಾಮಕ್ಕೆ ನೀವೇ ಸಿಎಂ: ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ ಗ್ರಾಮಕ್ಕೆ ಅವಶ್ಯವಾಗಿರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಬಹುದು ಎಂದ ಪುಟ್ಟಸ್ವಾಮಿ ರವರು ಯಥೇಚ್ಚಾ ಹಣ ಬರುವ ನರೇಗಾ ಯೋಜನೆಯಿಂದ ನಿಮ್ಮ ಗ್ರಾಮಕ್ಕೆ ನೀವೇ ಮುಖ್ಯಮಂತ್ರಿಗಳು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ತಯಾರಿಸಿ ನರೇಗಾ ಯೋಜನೆ ಮೂಲರ ಸಂಪೂರ್ಣಗೊಳಿಸುವ ಮೂಲಕ ಗ್ರಾಮ ಸರಕಾರ ನಡೆಸಿರಿ ಎಂದರು.
ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿ: ತಾಲೂಕಿನಲ್ಲಿ 40 ಸಾವಿರ ಬಡ ಕುಟುಂಬಗಳಲ್ಲಿ ಕೇವಲ 13 ಸಾವಿರ ಕುಟುಂಬಗಳು ಮಾತ್ರ ಶೌಚಾಲಯ ಹೊಂದಿರುವುದು ಬೇಸರದ ಸಂಗತಿಯಾಗಿದ್ದು,ಮನೆ-ಮನೆಗೆ ಎರಡು-ಮೂರು ಮೊಬೈಲ್ ಇರುವ ಇಂದಿನ ಕಾಲದಲ್ಲಿ ಮನೆಗೊಂದು ಶೌಚಾಲಯ ಇಲ್ಲದಿರುವುದು ಖೇದಕರ.
ನರೇಗಾ ಯಶಸ್ವಿಗೆ ಶ್ರಮಿಸಿ: ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಬದ್ರಿನಾಥ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿರುವ ನರೇಗಾ ಯೋಜನೆ ಯಶಸ್ವಿಯಾಗದಿರಲು ಜನತೆಗೆ ಮಾಹಿತಿ ಕೊರತೆಯೇ ಕಾರಣ ಎಂದು ಅಂದಾಜಿಸಿರುವ ಕೇಂದ್ರ ಸರ್ಕಾರವು ಪ್ರಮುಖವಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅರಿವು ಮೂಡಿಸಬೇಕೆಂಬ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ನರೇಗಾದಲ್ಲಿ ಜಿಲ್ಲೆ ಬಹಳ ಹಿಂದೆ: ಕೋಲಾರ ಜಿಲ್ಲೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ 29ನೇ ಸ್ಥಾನದಲ್ಲಿದ್ದು, ಪಟ್ಟಿಯಲ್ಲಿ ಸ್ಥಾನವನ್ನು ಮೇಲೆರಿಸಲು ಅಧಿಕಾರಿಗಳ ಜತೆಯಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು.ರಾಜಕೀಯ ಹಸ್ತಕ್ಷೇಪವಿಲ್ಲದೇ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ನರೇಗಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದರು.
ತಾಪಂ ಮಾಜಿ ಅಧ್ಯಕ್ಷ ಗೋಪಾಲ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು.
ತಾ.ಪಂ.ಸದಸ್ಯೆ ಮಂಜುಳಾ, ಮುನಿಕೃಷ್ಣಪ್ಪ, ಆಶಾ ರಾಜಪ್ಪ, ಯೋಜನಾಧಿಕಾರಿ ಮುನಿಸ್ವಾಮಿ ನಾಯ್ದು, ಫಣೇಂದ್ರ,ತೋಟಾಗಾರಿಕೆ ಸಹಾಯಕ ನಿರ್ದೇಶಕ ಆನಂದ್, ರಂಗಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

