ಕೋಲಾರ

ರಸ್ತೆ ಅಪಘಾತ: ಮೂವರ ಸಾವು

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಮುತ್ತೂರು ಗ್ರಾಮದ ಸಮೀಪ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿರುವ ಭೀಕರ ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಅಪರಿಚಿತ ವಾಹನವೊಂದು ಈ ಯುವಕರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಚಿಕ್ಕಬಳ್ಳಾಪುರದ ಭಾರತೀನಗರದ ಕೆ.ಎನ್.ಶುಶಾಂತ್(26), ಚಿಂತಾಮಣಿಯ ದೀಪಕ್(27) ಎಂಬಿಬ್ಬರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ದೊಡ್ಡಬಳ್ಳಾಪುರದ ಕಾರ್ತಿಕ್(25) ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.  ಘಟನೆಗೆ ಕಾರಣವಾಗಿರುವ ವಾಹನ ಅಪಘಾತ ನಡೆದ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ತೀವ್ರ ಶೋಧನೆಯಲ್ಲಿ ತೊಡಗಿದ್ದಾರೆ. ಕಾರ್ತಿಕ್ ಮತ್ತು ಸ್ನೇಹಿತರು 1 ಬೈಕ್‌ನಲ್ಲಿ 3 ಜನ ದೊಡ್ಡಬಳ್ಳಾಪುರ ರೈಲು ನಿಲ್ದಾಣ ಕಡೆಯಿಂದ ಡಿಕ್ರಾಸ್‌ಗೆ ಬರುತ್ತಿದ್ದರು. ಆಗ ಎದುರಾಗಿ ಬಂದಿರುವ ಭಾರೀ ವಾಹನಮೊಂದು  ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರವಷ್ಟೇ ತಾಲೂಕಿನ ನಾರಸಿಂಹನಹಳ್ಳಿ ಬಳಿ ಸ್ಕಾರ್ಪಿಯೋ ವಾಹನಮೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ. ಪೊಲೀಸರು ವಾಹನದ ಶೋಧನೆಯಲ್ಲಿ ತೊಡಗಿದ್ದಾರೆ.
ಬಾಲ ಕಾರ್ಮಿಕ ಶಾಲೆ; ಶಿಕ್ಷಕರ ದಿನ
ಮಾಲೂರು: ಶಾಲಾ ಮಕ್ಕಳಲ್ಲಿ ತಾರತಮ್ಯವೆಸಗದೆ ಶಿಕ್ಷಕರು ಎಲ್ಲರಿಗೂ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಶಿಕ್ಷಕ ಎಸ್. ನಾರಾಯಣಸ್ವಾಮಿ ಹೇಳಿದರು. ಇಲ್ಲಿನ ರೈಲ್ವೇ ನಿಲ್ದಾಣ ಬಳಿಯ ಪರಿವರ್ತನಾ ಬಾಲ ಕಾರ್ಮಿಕ ವಿಶೇಷ ಶಾಲೆಯಲ್ಲಿ ಆಯೋಜಿಸಲಾಗಿದ್ದ ಡಾ. ರಾಧಕೃಷ್ಣನ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ತಮ್ಮ ಸ್ವಂತ ವೇತನದಿಂದ ವಿಶೇಷ ಶಾಲೆ ಮಕ್ಕಳಿಗೆ ಉಚಿತವಾಗಿ ತಟ್ಟೆ-ಲೋಟ ವಿತರಿಸಿ ಮಾತನಾಡುತ್ತ ಗ್ರಾಮೀಣ ಪ್ರದೇಶದ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪೋಷಕರಿಲ್ಲದ ವಿಶೇಷ ಶಾಲೆಯ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಲ್ಲೂ ಸಹ ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮರೆಯಬೇಕು ಎಂದರು. ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗಾಗಿ ವಿಶೇಷ ಶಾಲೆ ನಡೆಸುತ್ತಿರುವ ಇಂತಹ ಸಂಸ್ಥೆಗಳ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು ಎಂದರು. ಸಂಸ್ಥೆಯ ಮುಖ್ಯಸ್ಥ ಟಿ.ಆರ್. ಮುನಿರಾಜು, ಆರ್.ಎಸ್. ನಾಗರಾಜ್, ಬಾಬು, ಸುನೀಲ್, ನೀಲ ಇದ್ದರು.

ಮುದುವತ್ತಿ ಗ್ರಾಮದಲ್ಲಿ ಪಶು ಆರೋಗ್ಯ ಚಿಕಿತ್ಸಾ ಶಿಬಿರ

ಕೋಲಾರ: ತಾಲೂಕಿನ ಮುದವತ್ತಿ ಗ್ರಾಮದಲ್ಲಿ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದಿಂದ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಬರಡು ರಾಸು ತಪಾಸಣೆ ಹಾಗು ಪಶು ಆರೋಗ್ಯ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಕೃಷಿ ವಿಶ್ವವಿದ್ಯಾನಿಲಯ,ಬೆಂಗಳೂರು, ಹಳೆ ವಿದ್ಯಾರ್ಥಿಗಳ ಸಂಘ, ಕೃಷಿ ವಿಶ್ವವಿದ್ಯಾನಿಲಯ  ಬೆಂಗಳೂರು, ರೈತ ಸಂಪರ್ಕ ಕೇಂದ್ರ ,ಕೃಷಿ ಇಲಾಖೆ, ವಕ್ಕಲೇರಿ, ಲಯನ್ ಕ್ಲಬ್, ಮಾರುತಿ ಸೇವಾ ನಗರ, ಬೆಂಗಳೂರು, ಕೃಷಿ ತಂತ್ರಜ್ಞರ ಸಂಘ, ಬೆಂಗಳೂರು, ಪಶು ಚಿಕಿತ್ಸಾಲಯ, ವಕ್ಕಲೇರಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ, ಮುದುವತ್ತಿ ಇವರುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಖ್ಯಾತ ಪಶು ಪ್ರಸೂತಿ ತಜ್ಞರಾದ ಡಾ. ಪಿ. ಮರ್ಗೂಬ್ ಹುಸೇನ್ ಅವರು ಹೈನು ರಾಸುಗಳ ವೈಜ್ಞಾನಿಕ ನಿರ್ವಹಣೆ ಕುರಿತು ನೆರೆದಿದ್ದ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.  ಡಾ. ಪಿ. ಮರ್ಗೂಬ್ ಹುಸೇನ್, ಶಿಬಿರದ ಪ್ರಾಧ್ಯಾಪಕರು ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಖಜಾಂಚಿ ಡಾ. ಬಿ. ಕೃಷ್ಣಮೂರ್ತಿ, ಪಶು ವೈದ್ಯಾಧಿಕಾರಿಗಳಾದ ಡಾ. ವೀಣಾ, ಕೃಷಿ ಅಧಿಕಾರಿ ಮಂಜುನಾಥ್, ಪಿಳ್ಳಪ್ಪ , ಕಾರ್ಯದರ್ಶಿ ಶಿವರಾಜ್ ಕುಮಾರ್, ಟಿ. ನಾರಾಯಣಸ್ವಾಮಿ, ಕೆ.ನಾರಾಯಣಸ್ವಾಮಿ  ಕೃಷ್ಣಪ್ಪ, ಜಂಗಾಲಹಳ್ಳಿ ಶ್ರೀನಿವಾಸ್, ಚಿನ್ನಪ್ಪ, ಸಿರಿ ಕೇರ್ನ್ ಸುರೇಶ್, ಎಚ್.ವಿ. ಶಂಕರಪ್ಪ, ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.