ಬಾಲಕರ ಕಾಲೇಜಿನಲ್ಲಿ ವರ್ಗಾವರ್ಗಿ ಭರಾಟೆ
ಕನ್ನಡಪ್ರಭ ವಾರ್ತೆ, ಕೋಲಾರ, ಸೆ.7
ನಗರದ ಸರ್ಕಾರಿ ಬಾಲಕರ ಕಾಲೇಜಿನ ಉಪನ್ಯಾಸಕರನ್ನು ಸರ್ಕಾರ ಕಂತುಗಳ ಪ್ರಕಾರ ವರ್ಗಾವಣೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಸೂತಕದ ಛಾಯೆ ಆವರಿಸಿದೆ.
ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಕಾಲೇಜಿನ ಪ್ರಾಂಶುಪಾಲ ಪ್ರೊ. ವೆಂಕಟೇಸು ಸೇರಿದಂತೆ ಒಟ್ಟು 7 ಬೋಧಕ ವರ್ಗದವರನ್ನು ವರ್ಗಾವಣೆ ಮಾಡಿದ್ದು, ಇನ್ನು ಕೆಲವರು ವರ್ಗಾವಣೆಗೊಳ್ಳುವ ಸಾಧ್ಯತೆಗಳಿವೆ.
ಕಾಲೇಜಿನ ವೇಳೆ ಇಲಾಖೆಯ ನಿಯಮಾನುಸಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಗಿಯುತ್ತದೆ. ಆದರೆ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಪ್ರಾಂಶುಪಾಲರು ಬೆಳಿಗ್ಗೆ 9 ರಿಂದ ತರಗತಿಗಳನ್ನು ನಡೆಸುವಂತೆ ಉಪನ್ಯಾಸಕರಿಗೆ ಸೂಚಿಸಿದ್ದರು.
ಇದರಿಂದಾಗಿ ಬಹುತೇಕ ಉಪನ್ಯಾಸಕರು ಕಾಲೇಜಿಗೆ 9 ಗಂಟೆಗೆ ಆಗಮಿಸಿ 9.45ರವರೆಗೆ ಒಂದು ತರಗತಿ ಮುಗಿಸಿ ನಂತರ ಪ್ರಾಂಶುಪಾಲರ ಕಚೇರಿಗೆ ಬಂದು ಹಾಜರಾತಿ ಪುಸಕ್ತದಲ್ಲಿ ಸಹಿ ಮಾಡುವುದನ್ನು ಮಾಡಿಕೆ ಮಾಡಿಕೊಂಡಿದ್ದರು.
ಆದರೆ ಕಳೆದ ಜುಲೈ 29 ರಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಬೆಳಿಗ್ಗೆ 9.30ಕ್ಕೆ ಕಾಲೇಜಿಗೆ ಭೇಟಿ ನೀಡಿದಾಗ ಹಾಜರಾತಿ ಪುಸಕ್ತದಲ್ಲಿ ಯಾಮೊಬ್ಬ ಉಪನ್ಯಾಸಕರ ಸಹಿ ಇಲ್ಲದಿರುವುದನ್ನು ಕಂಡು ಕೆಂಡಾ ಮಂಡಲರಾಗಿದ್ದರಲ್ಲದೆ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದರು.
ಇದರಿಂದಾಗಿ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಬೋಧಕ-ಬೋಧಕೇತರರಿಗೆ ನೋಟೀಸ್ ಜಾರಿ ಮಾಡಿ ವಿವರಣೆ ಕೇಳಿದ್ದರು.
ಈ ನಡುವೆ ಬಂದಿಬ್ಬರು ಉಪನ್ಯಾಸಕರು ವರ್ಗಾವಣೆ ಕೋರಿ ಮನವಿ ಮಾಡಿಕೊಂಡಿದ್ದರು ಹಾಗಾಗಿ ಅವರಿಬ್ಬರನ್ನು ಕೇಳಿದ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರಿನ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಬಂಗಾರಪೇಟೆಯವರಾದ ನದೀಮ್ ಎಂಬುವರು ಕೆಜಿಎಫ್ ಸರ್ಕಾರಿ ಕಾಲೇಜಿಗೆ ವರ್ಗಾವಣೆ ಕೇಳಿದ್ದರು. ಆದರೆ ಶಿಕ್ಷಣ ಇಲಾಖೆಯವರು ಕೋಲಾರ ಸರ್ಕಾರಿ ಬಾಲಕರ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಮುರಳಿಧರ್ ಅವರನ್ನು ಬಾಗೇಪಲ್ಲಿಗೆ ವರ್ಗಾವಣೆ ಮಾಡಿ ನದೀಮ್ ಅವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ ಬಂಗಾರಪೇಟೆಗೆ ಹತ್ತಿರವಿದ್ದು ನದೀಮ್ ಅವರನ್ನು ಕೆಜಿಎಫ್ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ರಘು ಅವರ ನಿಧನದಿಂದ ಖಾಲಿ ಇರುವ ಜಾಗಕ್ಕೆ ನಿಯೋಜಿಸಿ ಡಾ.ಮುರಳಿಧರ್ ಅವರನ್ನು ಕೋಲಾರದಲ್ಲೇ ಉಳಿಸಬಹುದಾಗಿತ್ತು ಎನ್ನುವ ವಿದ್ಯಾರ್ಥಿಗಳು ಕಾಲೇಜಿನ ಹಿತದೃಷ್ಟಿಯಿಂದ ವರ್ಗಾವಣೆ ರದ್ದು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅದೇ ರೀತಿ ಕಾಲೇಜಿನಲ್ಲಿ ನುಡಿ ಮಂಟಪ ಸ್ಥಾಪಿಸಿ ನಿರಂತರ ಚಟುವಟಿಕೆಗಳಿಗೆ ಕಾರಣಿಭೂತರಾಗಿದ್ದ ಕನ್ನಡ ಪ್ರಾಧ್ಯಪಕ ರಮೇಶ್ ಅವರನ್ನು ಶಿಡ್ಲಘಟ್ಟಕ್ಕೆ ವರ್ಗಾವಣೆ ಮಾಡಿರುವುದಕ್ಕೂ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ಬೋಧಕರು ಪ್ರಭಾವ ಬಳಸಿ ಕಾಲೇಜಿನಲ್ಲಿ ಉಳಿದುಕೊಂಡಿದ್ದಾರೆ. ಅಂತಹವರ ವಿರುದ್ಧ ಯಾವುದೇ ನಿರ್ಧಾರ ಕೈಗೊಳ್ಳದ ಸರ್ಕಾರ ಕಾಲೇಜಿನ ಹಿತ ಕಾಪಾಡುತ್ತಿರುವ ಉಪನ್ಯಾಸಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಸರಿಯಲ್ಲ, ಲೋಕಾಯುಕ್ತರ ಭೇಟಿ ನಂತರ ಒಂದಿಷ್ಟು ಬದಲಾವಣೆ ಆಗಿದೆ. ಆದರೆ ,ಉತ್ತಮ ರೀತಿಯಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದ ಉಪನ್ಯಾಸಕರ ವರ್ಗಾವಣೆ ಮಾಡಿರುವುದು ನ್ಯಾಯ ಸಮ್ಮತವಲ್ಲ, ಬೋಧಕರ ವರ್ಗಾವಣೆಯ ನಂತರ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ತರಗತಿಗಳಲ್ಲಿ ಕುಳಿತುಕೊಳ್ಳದಂತಾಗಿದೆ. ಸೂತಕದ :ದಾಯೆ ಅವರಿಸಿದ್ದು ಅದಷ್ಟು ಬೇಗನೆ ಉನ್ನತ ಶಿಕ್ಷಣ ಸಚಿವರು ಕಾಲೇಜಿಗೆ ಕಾಯಕಲ್ಪ ನೀಡುವ ಮೂಲಕ ಸಮಸ್ಯೆ ನಿವಾರಣೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

