ಕೋಲಾರ

ಗಣೇಶ ಮೂರ್ತಿ ವಿಸರ್ಜನೆಗೆ ತಾತ್ಕಾಲಿಕ ಹೊಂಡ

Published On :

ಕ.ಪ್ರ. ವಾರ್ತೆ   ಕೋಲಾರ   ಸೆ.8
ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಈ ಬಾರಿಯೂ ನಗರದ ಕೋಲಾರಮ್ಮ ಕೆರೆಯಲ್ಲಿ ತಾತ್ಕಾಲಿಕ ಹೊಂಡವನ್ನು ನಿರ್ಮಿಸಲಾಗಿದೆ.
ನಗರದ ಹೃದಯ ಭಾಗದ ವೇಣುಗೋಪಾಲಸ್ವಾಮಿ ಪುಷ್ಕರಣಿಯಲ್ಲಿ ನೀರಿನ ಕೊರತೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಕೋಲಾರಮ್ಮ ಕೆರೆಯಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರಸಭೆಯಿಂದ ಕ್ರಮ ಕೈಗೊಳ್ಳಲಾಗಿದೆ.
ಕೋಲಾರಮ್ಮ ಕೆರೆಯಲ್ಲಿ ಹೊಂಡ ನಿರ್ಮಿಣಕ್ಕೆ ಸುಮಾರು 3.50 ಲಕ್ಷ ವೆಚ್ಚ ಮಾಡಲಾಗಿದೆ. ಇದೇ ಜಾಗದಲ್ಲಿ ಶಾಶ್ವತ ಹೊಂಡ ನಿರ್ಮಾಣಕ್ಕೆ ನಗರಸಭೆಯಲ್ಲಿ 11 ಲಕ್ಷ ಅನುದಾನ ಮೀಸಲಿಡಲಾಗಿದೆ. ಆದರೂ ನೀರಾವರಿ ಇಲಾಖೆಯವರು ಅನುಮತಿ ನೀಡದಿರುವುದರಿಂದ ಯೋಜನೆ ನೆನೆಗುದಿಗೆ ಬಿದ್ದಿದೆ.
ಕೆರೆಯಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದರೂ ಮೌನವಾಗಿರುವ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊಂಡ ನಿರ್ಮಿಸುವುದಕ್ಕೆ ಅವಕಾಶ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆರೆಯಲ್ಲಿ ಕಾಯಂ ಹೊಂಡ ನಿರ್ಮಾಣವಾಗುವುದರಿಂದ ಗೌರಿ-ಗಣೇಶ ವಿಸರ್ಜನೆಗೆ ಮಾತ್ರವಲ್ಲದೆ, ಅಂತರ್ಜಲ ಅಭಿವೃದ್ಧಿಗೆ ಅನುಕೂಲವಾಗುವುದರಿಂದ ನೀರಾವರಿ ಇಲಾಖೆಯವರು ಅನುಮತಿ ನೀಡಬೇಕೆಂಬ ಒತ್ತಾಯ ಜನತೆಯಿಂದ ಕೇಳಿ ಬಂದಿದೆ.
14 ಅಡಿ ಆಳದ ಹೊಂಡ: ಹಾಲಿ ನಿರ್ಮಿಸಿರುವ ತಾತ್ಕಾಲಿಕ ಹೊಂಡಕ್ಕೆ ನಗರಸಭೆಯವರು ಟ್ಯಾಂಕರ್ ಮೂಲಕ ಹಾಗೂ ಕೊಳವೆ ಬಾವಿಯ ಮೂಲಕ ನೀರು ಹರಿಸುತ್ತಿದ್ದಾರೆ. ಹೊಂಡದಲ್ಲಿ ನೀರು ಇಂಗದಿರಲೆಂದು ಪಾಲಿಥೀನ್ ಶೀಟ್ಗಳನ್ನು ಹೊದಿಸಲಾಗಿದೆ. 55 ಅಡಿ ಅಗಲ, 85 ಅಡಿ ಉದ್ದ ಹಾಗೂ 14 ಅಡಿ ಆಳದ ಹೊಂಡವನ್ನು ಸಿದ್ಧಪಡಿಸಲಾಗಿದ್ದು ಸುಮಾರು 11 ಲಕ್ಷ ಲೀಟರ್ ನೀರನ್ನು ಹೊಂಡದಲ್ಲಿ ಶೇಖರಿಸಲಾಗುತ್ತಿದೆ.
ಹೊಂಡದ ಸುತ್ತಲು ಬೇಲಿ ನಿರ್ಮಿಸಲಾಗಿದೆ, ರಾತ್ರಿ ವೇಳೆ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಬರುವವರಿಗೆ ತೊಂದರೆ ಆಗದಂತೆ ವಿದ್ಯುತ್, ಪೊಲೀಸ್ ರಕ್ಷಣೆ, ಬಳಸಿದ ಹೂವು, ಬಾಳೆ ಗಿಡ, ಎಲೆ, ಇತ್ಯಾದಿ ತ್ಯಾಜ್ಯಗಳನ್ನು ಹಾಕಲು ಕಸದ ಬುಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೊಂಡದಲ್ಲಿ ಸಾರ್ವಜನಿಕರು ಇಳಿಯದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, 1 ತೆಪ್ಪ, 1 ಕ್ರೈನ್ ಅದರಲ್ಲಿ ಕಾರ್ಯನಿರ್ವಹಿಸಲು ತಲಾ 4 ಸಿಬ್ಬಂದಿ ಹಾಗೂ 4 ಮಂದಿ ಅನುಭವಿ ಈಜುಗಾರರನ್ನು ನಿಯೋಜಿಸಲಾಗಿದೆ ಎಂದು ನಗರಸಭೆ ಆಯುಕ್ತ ಕೆ.ಎನ್. ಜಗದೀಶ್ ತಿಳಿಸಿದ್ದಾರೆ.
ಮೊಬೈಲ್ ಸೇವೆ: ನಗರದ ವಿವಿಧ ಬಡಾವಣೆಯಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಸಮಸ್ಯೆ ಉಂಟಾಗದಂತೆ ನಗರಸಭೆಯಿಂದ ಮೊಬೈಲ್ ವಾಹನದ ವ್ಯವಸ್ಥೆ ಮಾಡಲಾಗಿದೆ. ಸೆ.9ರಂದು ಸಂಜೆ 6ರಿಂದ ರಾತ್ರಿ 10 ಗಂಟೆಯವರೆಗೆ ಮೊಬೈಲ್ ವಾಹನ ನಗರದ ಪಾಲಸಂದ್ರ ಬಡಾವಣೆಯಿಂದ ಹೊರಟು, ಕಾರಂಜಿಕಟ್ಟೆ, ಕೀಲುಕೋಟೆ, ಕಿಲಾರಪೇಟೆ, ಕುವೆಂಪು ನಗರ, ಬ್ರಾಹ್ಮಣರ ಬೀದಿ, ಎಂ.ಜಿ. ರಸ್ತೆ, ಜಯನಗರ, ಬಿಇಎಂಎಲ್ ಲೇಔಟ್ನಲ್ಲಿ ಸಂಚರಿಸಲಿದ್ದು ಸಾರ್ವಜನಿಕರು ತಮ್ಮ ಬಡಾವಣೆಗೆ ಮೊಬೈಲ್ ವಾಹನ ಬಂದಾಗ ಮೂರ್ತಿ ನೀಡಿದಲ್ಲಿ ಅದನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.