ಕೋಲಾರ

ಪರಿಸರಸ್ನೇಹಿ ಗಣಪತಿಯ ಉತ್ಸವ ಜನಸ್ನೇಹಿಯಾಗಲಿ

Published On :

ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಎಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು, ಒಂದು ಕಡೆ ಸಾರ್ವಜನಿಕರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸಬಾರದು. ಜತೆಗೆ ಯಾವುದೇ ರೀತಿ ಅಹಿತಕರ ಘಟನೆಗಳಿಗೆ, ಗಲಭೆಗಳಿಗೆ ಆಸ್ಪದ ನೀಡಬಾರದೆಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದರೆ, ಮತ್ತೊಂದೆಡೆ ಧಾರ್ಮಿಕ ಆಚರಣೆಯ ನೆಪದಲ್ಲಿ ಪರಿಸರಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಇಲಾಖೆ ಕೋರಿದೆ.
ಮೂರ್ತಿ ಪ್ರತಿಷ್ಠಾಪನೆ: ಸಾಮಾನ್ಯವಾಗಿ ಎಲ್ಲೆಡೆ ಆಕರ್ಷಕ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂಬ ಭಾವನೆ ಹೊಂದಲಾಗಿರುತ್ತದೆ. ಆದರೆ, ಬಹು ಆಕರ್ಷಣೆಯ ಉದ್ದೇಶವನ್ನಿಟ್ಟುಕೊಂಡು ತಯಾರಿಸಿರುವ ಪ್ಲಾಸ್ಟರ್ ಆಪ್ ಪ್ಯಾರಿಸ್ನಂತಹ ಗಣಪತಿ ಮೂರ್ತಿಗಳಿಗೆ ಸೀಸ ಸೇರಿದಂತೆ ಪ್ರಮುಖ ಮಾರಕ ಅಂಶ ಹೊಂದಿರುವ ಬಣ್ಣ ಬಳೆಯಲಾಗಿರುತ್ತದೆ. ಇಂತಹ ಗಣೇಶನ ಮೂರ್ತಿಗಳನ್ನು ಕೆರೆ, ಬಾವಿ, ತೊರೆ ಮತ್ತು ನದಿಗಳಲ್ಲಿ ವಿಸರ್ಜಿಸಿದ ಮೂರ್ತಿ ಕರಗಿದ ನಂತರ ಬಣ್ಣದಲ್ಲಿ ಮಿಶ್ರಣವಾಗಿರುವ ಸೀಸ ಸೇರಿದಂತೆ ನೀರಿನ ಮಾಲಿನ್ಯಕ್ಕೆ ಕಾರಣವಾಗುವ, ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರುವ  ಅಂಶಗಳು ನೀರಿಗೆ ಸೇರುತ್ತವೆ. ಇಂತಹ ನೀರನ್ನು ಸೇವಿಸಿದಾಗ ಕ್ಯಾನ್ಸರ್ ಸೇರಿದಂತೆ ಮಾರಕ ಕಾಯಿಲೆಗಳು ಹರಡಿ ದೈಹಿಕ ಆರೋಗ್ಯ ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿಗೆ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಒತ್ತು ಕೊಡಬೇಕು. ಈ ಮೂಲಕ ಗಣೇಶ ಚತುರ್ಥಿ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವ ವಾತಾವರಣ ನಿರ್ಮಾಣ ಮಾಡಬೇಕೆಂದು ಕೋರಿದೆ.
ಕೆರೆ, ಕುಂಟೆಗಳು ಮಲಿನವಾಗುವುದನ್ನು ತಪ್ಪಿಸುವ ಸಲುವಾಗಿ ಗಣಪತಿಮೂರ್ತಿ ವಿಸರ್ಜನೆಗೆ ಜಿಲ್ಲೆಯಲ್ಲಿ ನೀರಿನ ತಾಣ ಗುರುತಿಸಿದ್ದು, ನಿಗದಿಪಡಿಸಿರುವ ಕಡೆ ಮಾತ್ರ ವಿಸರ್ಜನೆ ಮಾಡಬೇಕಾಗಿದೆ. ಚಿಕ್ಕಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಗೌರಿಬಿದನೂರು ರಸ್ತೆಯಲ್ಲಿರುವ ಧರ್ಮರಾಯನ ಕೆರೆ, ಕಂದವಾರ ಕೆರೆ, ಗೌರಿಬಿದನೂರು ಪುರಸಭೆ ವ್ಯಾಪ್ತಿಯಲ್ಲಿ ಕಲ್ಲೂಡಿ ಕೆರೆ, (ಕಲ್ಲೂಡಿ ಗ್ರಾಮ ಪಂಚಾಯಿತಿ) ಆಂಜನೇಯ ದೇವಸ್ಥಾನದ ಹತ್ತಿರ, ಬಾಗೇಪಲ್ಲಿ ಪುರಸಭೆಯು ಗಡಿದಂ ಕೆರೆ, (ನ್ಯಾಷನಲ್ ಕಾಲೇಜು ಹತ್ತಿರ) ಚಿತ್ರಾವತಿ ನಾಲೆ, ಗುಡಿಬಂಡೆ ಪಟ್ಟಣ ಪಂಚಾಯಿತಿ ಗುಡಿಬಂಡೆ ಕೆರೆ, ಶಿಡ್ಲಘಟ್ಟ ಪುರಸಭೆಯು ಅಮ್ಮನಕೆರೆ ಹಾಗೂ ಚಿಂತಾಮಣಿ ನಗರಸಭೆಯು ಬೆಂಗಳೂರು ರಸ್ತೆಯಲ್ಲಿರುವ ಓಟಿ ಕೆರೆ ನಿಗದಿಪಡಿಸಲಾಗಿದೆ. ಅಲ್ಲದೆ, ಗ್ರಾಮೀಣ ಭಾಗದ ಪ್ರದೇಶದಲ್ಲೂ ಬಳಕೆಯಲ್ಲಿರುವ ನೀರಿನ ಮೂಲಗಳಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಕಡಿವಾಣ ಹಾಕಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಬಕೆಟ್ನಲ್ಲಿ ಸಂಚಾರಿ ವಿಸರ್ಜನಾ ವಾಹನ ಅಥವಾ ಕೆರೆಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜಿಸಬೇಕು. ಪೂಜಿಸಿದ ಗಣೇಶ ಮೂರ್ತಿಗಳ ವಿಸರ್ಜನೆಗೆ ಮೊದಲು ಅಲಂಕಾರಿಕ ವಸ್ತುಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಬೇರ್ಪಡಿಸಬೇಕು.
ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸ್ಥಳಗಳಲ್ಲಿ ಘನತ್ಯಾಜ್ಯ ವಸ್ತು ಸುಡುವುದಕ್ಕೆ ಅವಕಾಶವಿಲ್ಲ. ಸಾರ್ವಜನಿಕರು ಗಣೇಶ ಮೂರ್ತಿಗಳಿಗೆ ಅಲಂಕರಿಸಲು ಪ್ಲಾಸ್ಟಿಕ್ನಿಂದ ಮಾಡಿದ ಕೃತಕ ವಸ್ತು ಬಳಸಬಾರದು. ನೈಸರ್ಗಿಕವಾದ ಹೂವು, ಹತ್ತಿ ಮುಂತಾದವುಗಳನ್ನು ಬಳಸಬೇಕು. ಇನ್ನೂ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಜಾಗವನ್ನು ಗುರುತಿಸುವುದಲ್ಲದೆ ಹಬ್ಬದ ದಿನಗಳಲ್ಲಿ ಸಂಚಾರಿ ವಿಸರ್ಜನಾ ವಾಹನದ ವ್ಯವಸ್ಥೆ ಕಲ್ಪಿಸಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.