ಕಾಲುಬಾಯಿ ಜ್ವರ: 51ಕ್ಕೂ ಹೆಚ್ಚು ಹಸು ಸಾವು
ಕ.ಪ್ರ. ವಾರ್ತೆ ಕೋಲಾರ ಸೆ.10
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಹಸುಗಳಿಗೆ ಕಾಣಿಸಿಕೊಂಡಿರುವ ಕಾಲುಬಾಯಿಜ್ವರ, ಗಂಟಲು ಬೇನೆಗೆ ಸುಮಾರು 51ಕ್ಕೂ ಹೆಚ್ಚು ಹಸು-ಕರುಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಜ್ಞರು ಜಿಲ್ಲೆಗೆ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಕ್ರಮ ಜರುಗಿಸಿದ್ದಾರೆ.
ಜಿಲ್ಲಾದ್ಯಂತ ಕಾಲು ಬಾಯಿ ರೋಗ ಕಾಣಿಸಿಕೊಂಡಿರುವುದರಿಂದ ಹೈನುಗಾರಿಕೆಯನ್ನು ನಂಬಿರುವ ರೈತರ ಕಷ್ಟ ಅರಿತ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಕಡೆಗೂ ರೈತರ ಬಳಿ ಧಾವಿಸಿ ಸಮಸ್ಯೆಗೆ ಪರಿಹಾರ ನೀಡಲಾರಂಭಿಸಿರುವುದರಿಂದ ರೈತರಿಗೆ ಕೊಂಚ ನೆಮ್ಮದಿ ಸಿಕ್ಕಿದಂತಾಗಿದೆ.
ಪಶುಸಂಗೋಪನಾ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 1,.23.376 ಹಸುಗಳು, 24294 ಎಮ್ಮೆ ಸೇರಿದಂತೆ ಒಟ್ಟು 1.47 ಜಾನುವಾರುಗಳಿವೆ. ಇಲಾಖೆಯಿಂದ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ರೋಗ ನಿರೋಧಕ ಚುಚ್ಚುಮದ್ದು ಹಾಕಲಾಗುತ್ತೆದೆಯಾದರೂ ಸೆ.7ರವರೆಗೆ 1.11208 ಹಸುಗಳಿಗೆ ಹಾಗೂ 20268 ಎಮ್ಮೆಗಳು ಸೇರಿ 1,31,476 ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ಹಾಕಲಾಗಿದೆ.
ಮಾಲೂರಿನ ರಾಜೇನಹಳ್ಳಿಯಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು, 7ಹಸುಗಳು ಮೃತಪಟ್ಟವು. ನಂತರ ಕೋಲಾರದ ಬೀಚಗೊಂಡಹಳ್ಳಿಯಿಂದ ಪ್ರಕರಣ ವರದಿಯಾಗಿದೆ. ಇದೀಗ ವಾನರಾಶಿಯಲ್ಲಿ 15 ಪ್ರಕರಣದಲ್ಲಿ 7, ಗದ್ದೆಕಣ್ಣೂರು ಗ್ರಾಮದಲ್ಲಿ 25 ಪ್ರಕರಣದಲ್ಲಿ 8 ಹಸುಗಳು ಮೃತಪಟ್ಟಿವೆ.
ಕೋಲಾರ ನಗರದಲ್ಲಿ ಕಾಲುಬಾಯಿ ಜ್ವರ, ಗಂಟಲು ಬೇನೆಗೆ ತುತ್ತಾಗಿ ಮೃತಪಟ್ಟಿರುವ ಜಾನುವಾರುಗಳ ಸಂಖ್ಯೆಯೇ ಅಧಿಕ. ನಗರದ ಕುರುಬರಪೇಟೆಯಲ್ಲಿ ಶ್ರೀನಿವಾಸ್ ಅವರಿಗೆ ಸೇರಿದ 3 ಹಸು, ಕೃಷ್ಣಪ್ಪ ಅವರ 5ಹಸು, ವೆಂಕೇಶಪ್ಪ ಅವರ 1 ಹಸು, ಸುವರ್ಣಮ್ಮ ಅವರ 2 ಜಾನುವಾರು, ಮಾರಸಂದ್ರ ಮುನಿಯಪ್ಪ ಅವರ 4 ಜಾನುವಾರು, ಕಠಾರಿಪಾಳ್ಯದ ನಂಜುಂಡಪ್ಪ ಅವರ 1 ಹಸು , ಕೋಲಾರಮ್ಮ ಬಡಾವಣೆಯ ಮಹೇಶ್ ಅವರಿಗೆ ಸೇರಿದ 3 ಹಸು, ಗಂಗಾಧರ್ ಅವರ 2 ಹಸು , ಗೌರಿಪೇಟೆಯ ಅಸಾನ್ಸಾಬ್, ರಾಘವೇಂದ್ರ ಅವರ ತಲಾ 2 ಹಸು ಸೇರಿದಂತೆ ಈವರೆಗೆ ಒಟ್ಟು 29 ಜಾನುವಾರು ಮೃತಪಟ್ಟಿದೆ. ಇದರಲ್ಲಿ 1 ವರ್ಷದೊಳಗಿನ 5 ಕರು, ಒಂದೂವರೆ ವರ್ಷದೊಳಗಿನ ಪಡ್ಡೆ 10 ಸೇರಿದೆ.
ಲಭ್ಯವಾಗಿರುವ ಮಾಹಿತಿಯಂತೆ ಜಿಲ್ಲೆಯಾದ್ಯಂತ 350ರಿಂದ 400ಕ್ಕೂ ಅಧಿಕ ಜಾನುವಾರುಗಳು ಕಾಲುಬಾಯಿ-ಗಂಟಲು ಬೇನೆಯಿಂದ ನರಳುತ್ತಿದೆ. ಶ್ರೀನಿವಾಸಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲೂ ಜ್ವರ-ಗಂಟಲು ಬೇನೆಗೆ ಜಾನುವಾರುಗಳು ಮೃತಪಟ್ಟಿವೆ. ನೂರಾರು ಜಾನುವಾರುಗಳು ಜ್ವರ ಬಾಧಿತವಾಗಿದೆ. ಮೃತಪಟ್ಟ ಜಾನುವಾರುಗಳ ಸಂಖ್ಯೆ ನೂರನ್ನೂ ದಾಟಬಹುದು.
ವರ್ಷದಲ್ಲಿ ಎರಡು ಬಾರಿ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ನೀಡಲಾಗುತ್ತಿದೆ. ಶೇ. 80ರಷ್ಟು ಗುರಿ ಸಾಧಿಸಲಾಗಿದೆ. ಆದರೆ ಕೆಲವು ಕಡೆ ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸಲು ಮುಂದೆ ಬರುತ್ತಿಲ್ಲ. ಹಾಲು ಕರೆಯುವ ಹಸುವಿಗೆ ಲಸಿಕೆ ಹಾಕಿದರೆ ಎರಡ್ಮೂರು ದಿನ ಹಾಲು ಕಡಿಮೆಯಾಗುತ್ತದೆ ಇನ್ನು ಕೆಲವರು ಹಸು ಗರ್ಭ ಧರಿಸಿದೆ ಎಂಬ ಕಾರಣ ನೀಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಲಸಿಕೆಗಾಗಿ ರೈತರನ್ನು ಬಲವಂತ ಮಾಡಲಾಗದು ಎಂದು ಪಶುಪಾಲನಾ ಇಲಾಖೆಯು ಉಪನಿರ್ದೇಶಕ ಡಾ. ಎನ್. ಶಿವರಾಂ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾಲು ಬಾಯಿ-ಗಂಟಲು ಬೇನೆಯಿಂದ ಜಾನುವಾರುಗಳು ಮೃತಪಡುತ್ತಿರುವ ವಿಷಯ ತಿಳಿದು ಬೆಂಗಳೂರಿನಿಂದ ಧಾವಿಸಿದ ಅಪರ ನಿರ್ದೇಶಕ ನಾಗರಾಜಶೆಟ್ಟಿ, ರೋಗ ಕಣ್ಗಾವಲು ವಿಭಾಗದ ಡಾ. ಏಜಾಜ್ ಅಹಮದ್, ರೋಗ ನಿರ್ವಹಣೆ ವಿಭಾಗದ ಉಪ ನಿರ್ದೇಶಕ ಡಾ. ಶ್ರೀರಾಮರೆಡ್ಡಿ, ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವೈದ್ಯರ ತಂಡದೊಂದಿಗೆ ಕೋಲಾರಕ್ಕೆ ಆಗಮಿಸಿ ವಾನರಾಸಿ, ನಗರದ ಕುರುಬರಪೇಟೆಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ರೈತರಿಂದ ಮಾಹಿತಿ ಪಡೆದರು.
ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಡಾ. ರಶ್ಮಿ, ತಂತ್ರಜ್ಞ ನಾಗರಾಜ್ ಅವರು ಜಾನುವಾರುಗಳ ನಾಲಗೆ ಹಾಗೂ ರಕ್ತದ ಮಾದರಿ, ಕುರಿಯ ರಕ್ತದ ಮಾದರಿಯನ್ನು ಸಂಗ್ರಹಿಸಿದರಲ್ಲದೆ ವಾನರಾಸಿಯಲ್ಲಿ ಕೆಲ ಜಾನುವಾರು, ಕುರಿಗಳಿಗೆ ಲಸಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

