ಕೋಲಾರ

ಜಿಪಂ ಎಂಜಿನಿಯರಿಂಗ್ ಕಚೇರಿಗೆ ಶಾಸಕರ ಭೇಟಿ

Published On :

ಕ.ಪ್ರ. ವಾರ್ತೆ   ಬಂಗಾರಪೇಟೆ   ಸೆ.10
ಪಟ್ಟಣದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಕಚೇರಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಠಾತ್ ಭೇಟಿ ನೀಡಿ ಹಲವು ಕಡತ ಪರಿಶೀಲಿಸಿದ ವೇಳೆ ಎಂಜಿನಿಯರ್ಗಳ ಗೈರು ಹಾಜರಿಯಿಂದ ಶಾಸಕರು ಅಸಮಾಧಾನಗೊಂಡರು.
ಕ್ಷೇತ್ರದಲ್ಲಿ ಬರ ಆವರಿಸಿ ಕುಡಿಯುವ ನೀರಿಗೆ ಗ್ರಾಮಾಂತರ ಪ್ರದೇಶದ ಜನರು ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ, ಬಹುತೇಕ ಕಡೆ ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದರೂ ಇದುವರೆಗೂ ಮೋಟಾರ್ ಅಳವಡಿಸದೆ ಇರುವುದರಿಂದ ನೀರಿನ ಸಮಸ್ಯೆ ಮತ್ತಷ್ಟು ತಲೆದೂರುವಂತಾಗಿದೆ ಎಂದು ಗ್ರಾಮಸ್ಥರ ದೂರಿನ ಮೇರೆಗೆ ಶಾಸಕರು ಅಧಿಕಾರಿಗಳಲ್ಲಿ ಚುರುಕು ಮುಟ್ಟಿಸಿದರು.
ಆಡಳಿತಯಂತ್ರ ಬಿಗಿಗೊಳಿಸಿ ಸಾರ್ವಜನಿಕರ ಕೆಲಸ ತ್ವರಿತವಾಗಿ ನಡೆಯುವಂತೆ ಮಾಡಲು ನಾರಾಯಣಸ್ವಾಮಿ ಶಾಸಕರಾದ ನಂತರ ದಿಢೀರನೆ ಹಲವು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕುಸಿದಿರುವ ಆಡಳಿತಯಂತ್ರವನ್ನು ಸರಿಪಡಿಸುವ ಕೆಲಸಕ್ಕೆ ಕೈಹಾಕಿದ್ದು, ಅದರಂತೆ ಮಂಗಳವಾರ ಜಿಪಂ ಎಂಜಿನಿಯರ್ ಕಚೇರಿಗೆ ಭೇಟಿಯಿತ್ತರು.
ಶಾಸಕರು ಭೇಟಿ ನೀಡಿದ ವೇಳೆ ಹಲವು ಲೋಪ- ದೋಷ ಕಂಡು ಬಂದವು. ಇದು ಮೊದಲ ಭೇಟಿಯಾಗಿರುವುದರಿಂದ ಲೋಪ- ದೋಷ ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಿಗಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ವಿವಿಧ ಕಾಮಗಾರಿಗಳಿಗೆ ಎಷ್ಟು ಹಣ ಬಂದಿದೆ ಎಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂಬ ಶಾಸಕರ ಪ್ರಶ್ನೆಗೆ ಅಧಿಕಾರಿಗಳಿಂದ ಸೂಕ್ತ ಉತ್ತರ ಸಿಗಲಿಲ್ಲ. ಅಲ್ಲದೆ, ಎಇಇ ಹಾಗೂ ಇಬ್ಬರು ಜೆಇಗಳ ಹುದ್ದೆ ಖಾಲಿ ಇರುವುದರಿಂದ ಸಮರ್ಪಕ ಮಾಹಿತಿ ಲಭಿಸದ ಕಾರಣ ಮತ್ತೊಮ್ಮೆ ಭೇಟಿ ನೀಡುವುದಾಗಿ ಹೇಳಿ ವಾಪಸ್ ಬಂದರು.
ನಂತರ ಗೌತಮ್ ನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿನಿಲಯಕ್ಕೆ ಭೇಟಿ ನೀಡಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರಿಂದಲೇ ಕೇಳಿ ಪಡೆದುಕೊಂಡರು.
ಈ ನಿಲಯದಲ್ಲಿ 250 ಮಕ್ಕಳಿದ್ದು, ಯಾವುದೇ ಅನುಕೂಲಗಳಿಲ್ಲ. ಆದ್ದರಿಂದ ಮತ್ತೊಂದು ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.