ಏಕರೂಪ ಶಿಕ್ಷಣ ನೀತಿ ಜಾರಿಗೆ ಜನಜಾಗೃತಿ
ಕ.ಪ್ರ.ವಾರ್ತೆ ಕೋಲಾರ ಸೆ. 12
ರಾಜ್ಯದ ಸಮಗ್ರ ಅಭಿವೃದ್ಧಿಗೆ ಏಕರೂಪ ಶಿಕ್ಷಣ ಅತ್ಯವಶ್ಯವಾಗಿದ್ದು, ಜನತೆಯಲ್ಲಿ ಜಾಗೃತಿ ಮೂಡಿಸಲು ಜಯ ಕರ್ನಾಟಕ ಸಂಘಟನೆಯಿಂದ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ ರೈ ತಿಳಿಸಿದರು.
ನಗರದ ಗಾಂಧಿವನದಲ್ಲಿ ಗುರುವಾರ ಏಕರೂಪ ಶಾಲಾ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಜಯ ಕರ್ನಾಟಕ ಹಮ್ಮಿಕೊಂಡಿದ್ದ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿಂದು ಶಿಕ್ಷಣ ಕ್ಷೇತ್ರ ಖಾಸಗೀಕರಣ ಮತ್ತು ವ್ಯಾಪಾರೀಕರಣವಾಗಿ ಮಾರ್ಪಟ್ಟಿರುವುದರಿಂದ ಬಡವರು ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ. ಈಗಿನ ಶಿಕ್ಷಣ ವ್ಯವಸ್ಥೆಯು ಅಸಮಾನತೆ ಹಾಗೂ ತಾರತಮ್ಯದ ಮಹಾಕೂಪವಾಗಿರುವುದರಿಂದ ಜಯ ಕರ್ನಾಟಕ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದರು.
ಬಡಮಕ್ಕಳು ಮಾತೃಭಾಷಾ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ ಶ್ರೀಮಂತರ ಮಕ್ಕಳು ಆಂಗ್ಲ ಭಾಷಾ ಮಾಧ್ಯಮದಲ್ಲಿ ಕಲಿಯುತ್ತಿಯುತ್ತಿರುವುದರಿಂದ ಸಮಾಜವಾದಿ ಸಮಾಜ ನಿರ್ಮಾಣಕ್ಕೆ ಧಕ್ಕೆಯಾಗುತ್ತಿದೆ. ಸಮಾಜವಾದಿ ಸಮಾಜದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಶಿಕ್ಷಣದ ಸಮಾನತೆ ಬಗ್ಗೆ ಚಕಾರ ಎತ್ತುತ್ತಿಲ್ಲವೆಂದು ಆರೋಪಿಸಿದರು.
ಬೆಂಗಳೂರಿನ ಟೌನ್ ಹಾಲ್ ಬಳಿ ಸಮಾನ ಮನಸ್ಕ ಸಾಹಿತಿಗಳಾದ ಡಾ. ಚಂದ್ರಶೇಖರ್ ಕಂಬಾರ, ಪುಂಡಲೀಕ ಹಾಲಂಬಿ, ನಿರಂಜನಾರಾಧ್ಯ, ಡಾ.ಕಮಲಾ ಹಂಪನಾ ಸೇರಿದಂತೆ ಅನೇಕರು ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇಂದು ಕನ್ನಡದ ತೇರು ಕೋಲಾರ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯ ಜನತೆ ಸಂಘಟನೆಯ ಉತ್ತಮ ಉದ್ದೇಶಕ್ಕೆ ಸಹಕಾರ ನೀಡಬೇಕೆಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ರಾಧಕೃಷ್ಣ ಮಾತನಾಡಿ, ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಭೇದ- ಭಾವ ಇರಬಾರದು. ಲೋಕ ಗ್ರಹಿಕೆಯಲ್ಲಿ ಸಮಾನ ಭಾವ ಸಾಧ್ಯವಾದಾಗ ಮಾತ್ರ ಎಲ್ಲರೂ ಎಲ್ಲರನ್ನೂ ಪ್ರೀತಿಸಲು ಗೌರವಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಪ್ರೊ. ಗೋವಿಂದ ವರದಿ ಆಧರಿಸಿ ರಾಜ್ಯದಲ್ಲಿ ಇದುವರೆಗೂ 3 ಸಾವಿರ ಶಾಲೆ ಮುಚ್ಚಿಸಿ ಅದಕ್ಕೆ ಪರ್ಯಾಯವಾಗಿ 3 ಸಾವಿರ ಆಂಗ್ಲ ಶಾಲೆಗಳಿಗೆ ಅನುಮತಿ ನೀಡಿದೆ ಎಂದು ಲೇವಡಿ ಮಾಡಿದರು.
ರಾಜ್ಯಾಧ್ಯಕ್ಷ ಡಿ.ಎನ್. ಜಗದೀಶ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ರಾಜ್ಯದ ಪಠ್ಯಕ್ರಮವಿದ್ದರೆ ಬಹುತೇಕ ಖಾಸಗಿ ಶಾಲೆಗಳಲ್ಲಿ ಕೇಂದ್ರಿಯ ಪಠ್ಯಕ್ರಮವಿರುತ್ತದೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳ ವಿಷಯಗಳ ಕಲಿಕೆಯಲ್ಲಿ ವ್ಯತ್ಯಾಸಗಳಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲಾ ವಿದ್ಯಾರ್ಥಿಗಳ ನಡುವೆ ಪಠ್ಯ ವಿಷಯಗಳ ಕಲಿಕೆಯಲ್ಲಿ ಅಂತರ ನಿರ್ಮಾಣವಾಗಿರುವುದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು.
ಜಯ ಕರ್ನಾಟಕ ಹಮ್ಮಿಕೊಂಡಿರುವ ಈ ಜನಪರ ಕಾರ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದೆ ಇದ್ದರೆ ಅಧಿಕಾರ ಕಿತ್ತು ಹಾಕುವ ಶಕ್ತಿ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಸುದೀಪ್ಕುಮಾರ್, ದೀಲಿಪ್ಶೆಟ್ಟಿ, ನಾರಾಯಣ, ಸಂಚಾಲಕ ಅಜಿತ್ ಪ್ರಸಾದ್, ಕುಂಬಳಗೂಡು ನಾಗರಾಜ್, ಕೋಲಾರ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್, ಪ್ರಧಾನ ಕಾರ್ಯದರ್ಶಿ ಮಹಮದ್ ಅಲಿ, ಉಪಾಧ್ಯಕ್ಷ ಆಂಜಿನಪ್ಪ, ಗ್ರೇಸ್ ಸಂತೋಷಿ ಕುಮಾರಿ, ರಾಮನಗರ ಅಧ್ಯಕ್ಷ ಕುಮಾರ್ ಇನ್ನಿತರರು ಇದ್ದರು. ಸಲಹೆಗಾರ ರಾಜಣ್ಣ ನಿರೂಪಿಸಿ, ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

