ಕೋಲಾರ

ನ.13ರಂದು ಕೆಜಿಎಫ್ನಲ್ಲಿ ಚಿಣ್ಣರ ನುಡಿಜಾತ್ರೆ

Published On :

ಕ.ಪ್ರ.ವಾರ್ತೆ  ಕೋಲಾರ  ಸೆ. 12
ಚಿನ್ನದ ನಾಡು ಎಂದೇ ಪ್ರಸಿದ್ಧಿ ಗಳಿಸಿರುವ ಕೆಜಿಎಫ್ನಲ್ಲಿ ಬರುವ ನವೆಂಬರ್ 13 ರಂದು ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೆಜಿಎಫ್ ವಿಶೇಷ ಘಟಕಕ್ಕೆ ಅನುದಾನದ ಕೊರತೆ ಇರುವುದರಿಂದ ಜಿಲ್ಲಾ ಸಮಿತಿ 50 ಸಾವಿರ ರು. ಅನುದಾನ ನೀಡುವ ಮೂಲಕ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ನಡೆಸುತ್ತಿದೆ.
ಸಮ್ಮೇಳನದ ಬಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್ ಗುರುವಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ತಾಲೂಕಿನಿಂದ 7ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ತಲಾ 30 ಪ್ರತಿಭಾವಂತ ಮಕ್ಕಳು ಸೇರಿದಂತೆ ಒಟ್ಟು 150 ಮಕ್ಕಳನ್ನು ಸಮ್ಮೇಳನದ ವೇದಿಕೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ ಎಂದರು.
ಕೆಜಿಎಫ್ ನಗರದ ಕನ್ನಡ ಸಂಘದ ಭವನದಲ್ಲಿ ಒಂದು ದಿನದ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ, ವಿವಿಧ ಶಾಲಾ ಮಕ್ಕಳು ಮಾತ್ರವಲ್ಲದೆ ಶಾಲೆ ತೊರೆದಿರುವ 12 ರಿಂದ 15 ವರ್ಷ ವಯಸ್ಸಿನ ಪ್ರತಿಭಾವಂತ ಮಕ್ಕಳನ್ನು ಸಮ್ಮೇಳನಕ್ಕೆ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಮಕ್ಕಳಿಂದಲೇ ನಿರ್ವಹಣೆ: ಸಮ್ಮೇಳನದ ಕಾರ್ಯಕ್ರಮಗಳ ಸಂಪೂರ್ಣ ನಿರ್ವಹಣೆ ಮಕ್ಕಳಿಂದಲೇ ಆಗುತ್ತದೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದಿರುವ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ, ಕಸಾಪದಿಂದ ನಡೆಯುವ ಸಮ್ಮೇಳನಗಳ ರೀತಿಯಲ್ಲೇ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದರು. ಕವಿಗೋಷ್ಠಿ, ಕಥಾಗೋಷ್ಠಿ, ಮಕ್ಕಳ ವಿಚಾರಗೋಷ್ಠಿ, ಸಂವಾದ ಸೇರಿದಂತೆ ಒಟ್ಟು ನಾಲ್ಕು ಗೋಷ್ಠಿಗಳನ್ನು ಏರ್ಪಡಿಸಲಾಗುತ್ತದೆ, ರಾಜ್ಯದಿಂದ ಪ್ರಸಿದ್ಧ ಮಕ್ಕಳ ಸಾಹಿತಿಗಳು, ಮನೋವೈದ್ಯರು ಭಾಗವಹಿಸಲಿದ್ದಾರೆಂದು ಜೆ.ಜಿ.ನಾಗರಾಜ್ ಹೇಳಿದರು.
ಪ್ರತಿಭಾವಂತ ಮಕ್ಕಳಿಗೆ ಸನ್ಮಾನ: ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ಮಕ್ಕಳ ಸಾಹಿತ್ಯ ಪುಸಕ್ತಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 10 ಮಳಿಗೆಗಳ ವ್ಯವಸ್ಥೆ, ಜಿಲ್ಲೆಯ ಐದು ತಾಲೂಕುಗಳಿಂದ ಮಕ್ಕಳನ್ನು ಕರೆತರಲು ಆಯಾ ತಾಲೂಕಿನ ಕಸಾಪ ಘಟಕಗಳಿಂದ ವಾಹನ ವ್ಯವಸ್ಥೆ, ಪ್ರತಿಭಾವಂತ ಆರು ಮಕ್ಕಳಿಗೆ, ಇಬ್ಬರು ಮಕ್ಕಳ ಸಾಹಿತಿಗಳಿಗೆ ಹಾಗೂ ವಿಶಿಷ್ಠ ಸಾಧನೆ ಮಾಡಿರುವ ಮಕ್ಕಳಿಗೆ ಸಮ್ಮೇಳನದಲ್ಲಿ ಸನ್ಮಾನ ಕಾರ್ಯಕ್ರಮವಿರುತ್ತದೆ, ಮಕ್ಕಳಿಂದಲೇ ರೂಪುಗೊಳ್ಳುವ ಸ್ಮರಣ ಸಂಚಿಕೆಯನ್ನು ಹೊರ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
150 ಮಕ್ಕಳಿಗೆ ವಿಶೇಷ ತರಬೇತಿ: ಕೆಜಿಎಫ್ ಕಸಾಪ ವಿಶೇಷ ಘಟಕದ ಕಾರ್ಯದರ್ಶಿ ದೇಶಪಾಂಡೆ ಮಾತನಾಡಿ, ಸಮ್ಮೇಳನದ ದಿನ ಅದ್ಧೂರಿ ಮೆರವಣಿಗೆ ನಡೆಯಲಿದ್ದು ಇದಕ್ಕೆ ಶಿಕ್ಷಣ ಇಲಾಖೆಯ ಸಹಕಾರ ಸಿಗುವ ಭರವಸೆಯಿದೆ ಎಂದರು.
ಸಮ್ಮೇಳನದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಳ್ಳುವ 150 ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಸಮ್ಮೇಳನ ಯಶಸ್ವಿಗೆ ನಿರ್ಧರಿಸಿದ್ದೇವೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಾಲೂರು ಅಶ್ವತ್ಥ ರೆಡ್ಡಿ, ಗೌರವ ಖಜಾಂಚಿ ಪುರುಷೋತ್ತಮ್, ಕೆಜಿಎಫ್ ವಿಶೇಷ ಘಟಕದ ಅಧ್ಯಕ್ಷ ವೀರ ವೆಂಕಟಪ್ಪ, ಕೋಲಾರ ತಾಲೂಕು ಅಧ್ಯಕ್ಷ ನಾರಾಯಣಪ್ಪ ಹಾಗೂ ಪಿತಾಂಬರ ರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.