ಎಫ್ಡಿಐದಿಂದ ಸಣ್ಣ ವ್ಯಾಪಾರಸ್ಥರು ಬೀದಿಗೆ
ಕ.ಪ್ರ.ವಾರ್ತೆ ಮಾಲೂರು ಸೆ. 13
ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಲುವಾಗಿ ಆಹಾರ ಭದ್ರತೆ, ಎಫ್ಡಿಎ ಹಾಗೂ ಭೂಸ್ವಾಧೀನ ವಿಧೇಯಕ ಜಾರಿಗೆ ತಂದಿರುವುದಾಗಿ ಹೇಳುತ್ತಿರುವ ಕೇಂದ್ರ ಸರ್ಕಾರದ ಈ ಯೋಜನೆಗಳ ಹಿಂದೆ ವಿದೇಶಿ ಬಂಡವಾಳಶಾಹಿಗಳಿಗೆ ಕೆಂಪು ಹಾಸು ಹಾಕಿ ದೇಶಿಯರನ್ನು ಭಿಕ್ಷುಕರನ್ನಾಗಿ ಮಾಡುವ ಹುನ್ನಾರವಿದ್ದು, ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪಟ್ಟಣದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಒಂದೆಡೆ ರಾಜ್ಯ ಸರ್ಕಾರವು ಬಡವನಿಗೆ ಒಂದು ರು.ಗೆ ಒಂದು ಕೆಜಿ ಅಕ್ಕಿ ನೀಡುತ್ತಿದೆ.
ಇನ್ನೊಂದೆಡೆ ವಿದೇಶಿಯರು ಇಲ್ಲಿನ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಕೂಲವಾಗುವ ವಿಧೇಯಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತಿದೆ.
ಮತ್ತೊಂದೆಡೆ ಕೇಂದ್ರ ಸರ್ಕಾರವು ನಮ್ಮ ಅರ್ಥ ವ್ಯವಸ್ಥೆಯ ಹೃದಯಭಾಗವಾದ ರಿಟೇಲ್ ಸೆಕ್ಟರ್ಗೆ ವಿದೇಶಿಗರು ನೇರವಾಗಿ ಪಾಲ್ಗೊಳ್ಳುವಂತೆ ಮಾಡಿ ಇಲ್ಲಿನ ಸಣ್ಣ ವ್ಯಾಪಾರಸ್ಥರನ್ನು ಬೀದಿಗೆ ತಳ್ಳುವ ವ್ಯವಸ್ಥೆ ಮಾಡಲಾಗಿದೆ. ಅವರಿಗಾಗಿ ಬೀದಿ ವ್ಯಾಪಾರಕ್ಕೆ ಅನುಮತಿ ಸಹ ನೀಡಲು ವಿಧೇಯಕನ್ನು ಪಾಸ್ ಮಾಡಿದೆ ಎಂದು ದೇಶಿಯರ ಬಗ್ಗೆ ಕೇಂದ್ರ ಸರ್ಕಾರದ ಕಳಕಳಿಯನ್ನು ಟೀಕಿಸಿದರು.
ವಿದೇಶಿಯರು ಬಂದು ಬಂಡವಾಳ ಹೂಡಿದ್ದರೆ ಮಾತ್ರ ದೇಶ ಅಭಿವೃದ್ಧಿಯಾಗುವುದಾದರೆ ಕೇಂದ್ರ ಸರ್ಕಾರವು ದಿಲ್ಲಿಯಲ್ಲಿ ಕುಳಿತು ಮಾಡುವುದೇನು ಎಂದು ಪ್ರಶ್ನಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಬೆ.ರಮೇಶ್ ಮಾತನಾಡಿ, ತಾಲೂಕಿನಲ್ಲಿ ಬಂಡಾವಳಶಾಹಿಗಳ ದಾಳಿಯಿಂದ ಸಾವಿರಾರು ಎಕರೆ ಜಮೀನು ಕಳೆದುಕೊಂಡಿರುವ ರೈತರು ಹಾಲಿ ಉಳಿಸಿಕೊಂಡಿರುವ ತಲಾ ಅರ್ಧ- ಒಂದು ಎಕರೆ ಜಮೀನಿಗೂ ಈಗ ಮತ್ತೇ ಸ್ವಾಧೀನ ಪಡಿಸಿಕೊಳ್ಳುವ ನೋಟಿಸ್ ನೀಡಿದ್ದಾರೆ. ಇದನ್ನು ರೈತ ಸಂಘ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಹಲವು ದಶಕಗಳ ಹಿಂದೆಯೆ ಬತ್ತಿ ಹೋಗಿರುವ ಪಿನಾಕಿನಿ ಕಾಲುವೆಯಲ್ಲಿ ಬೆಂಗಳೂರು ಕೊಳಚೆ ನೀರು ಹರಿಯುತ್ತಿದೆ. ಅದನ್ನು ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿದೆ ಎಂಬ ನೆಪವನ್ನು ರಾಜ್ಯ ಸರ್ಕಾರ ಹೇಳುತ್ತಿದೆ ಎಂದರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ಜಡಿಯಪ್ಪ ದೇಸಾಯಿ, ಕಾರ್ಯದರ್ಶಿ ಅಬ್ಬಣ್ಣಿ ಶಿವಪ್ಪ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ನರಸಿಂಹಪ್ಪ, ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ತ್ಯಾವನಹಳ್ಳಿ ಡಾ.ಗೋಪಾಲಗೌಡ ಮಾತನಾಡಿದರು. ಟಿ.ಎನ್ ರಾಮೇಗೌಡ, ಮಂಜುನಾಥ್, ಕೆಂಚೇಗೌಡ, ಕೃಷ್ಣಾ ರೆಡ್ಡಿ, ಅಶ್ವಥ್ ರೆಡ್ಡಿ, ಕೋಟಿಗಾನಹಳ್ಳಿ ಗಣೇಶ್ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಗೋಪಾಲ್, ವರದಾಪುರ ನಾಗರಾಜ್,ನಾಗಪ್ಪ, ಕೋಡುರುಗೋಪಾಲ್, ಅನುಸೂಯಮ್ಮ, ಮಾಗೇರಿ ಸೀನಪ್ಪ, ತಿರುಮಲಹಟ್ಟಿ ದೇವರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

