ಕೋಲಾರ

ಗ್ರಂಥಾಲಯಾಧಿಕಾರಿ ಚನ್ನಕೇಶವಗೆ ವರ್ಗಾವಣೆ

Published On :

ಕ.ಪ್ರ.ವಾರ್ತೆ ಕೋಲಾರ ಸೆ. 13
ಜಿಲ್ಲಾ ಗ್ರಂಥಾಲಯವನ್ನು ಓದುಗರ ಶ್ರದ್ಧಾ ಕೇಂದ್ರವಾಗಿಸಿದ ಜಿಲ್ಲಾ ಗ್ರಂಥಾಲಯಾಧಿಕಾರಿ ಹೆಚ್.ಆರ್. ಚನ್ನಕೇಶವ ಅವರು ಬೆಂಗಳೂರು ಕೇಂದ್ರ ಗ್ರಂಥಾಲಯಕ್ಕೆ ವಿಶೇಷಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ತಮ್ಮ ಅವಧಿಯಲ್ಲಿ ಅವ್ಯವಸ್ಥೆಗಳ ತಾಣವಾಗಿದ್ದ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಹೊಸ ರೂಪ ನೀಡಿ ಓದುಗರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಗಳ ಕಡೆ ಜನರೇ ಬರೊಲ್ಲ, ಓದಿನ ಹವ್ಯಾಸದಿಂದ ದೂರವಾಗುತ್ತಿದ್ದಾರೆಂಬ ಅಪವಾದಗಳನ್ನು ದೂರ ಮಾಡಿ ಡಿವಿಜಿ ಕೇಂದ್ರ ಗ್ರಂಥಾಲಯವನ್ನು ಜ್ಞಾನದಾಹಿಗಳ ದೇಗುಲವಾಗಿಸಿ ಸದಾ ಓದುಗರಿಂದ ತುಂಬಿತುಳುಕುವಂತೆ ಮಾಡಿದ ಕೀರ್ತಿ ಚನ್ನಕೇಶವರಿಗೆ ಸಲ್ಲುತ್ತದೆ.
ಯಾವುದೇ ಅಧಿಕಾರಿ ವಹಿಸಿಕೊಂಡ ಜವಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಅವರ ಹೆಸರನ್ನು ಜನತೆ ಮರೆಯುವುದಿಲ್ಲವೆಂಬುದಕ್ಕೆ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಜನರಿಗೆ ಹತ್ತಿರವಾಗಿಸಿರುವ ಚನ್ನಕೇಶವ ಅವರ ಪರಿಶ್ರಮಕ್ಕೆ ಸಿಕ್ಕ ಸ್ಪಂದನೆಯೇ ಸಾಕ್ಷಿಯಾಗಿದೆ.
ಕೆಪಿಎಸ್‌ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ವಿವಿಧ  ನೇಮಕಾತಿ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳನ್ನು ಬಡ ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಒದಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಸಹಕಾರ ನೀಡಿದ್ದಾರೆ.
ಕಳೆದ 2010ರ ಫೆ.25 ರಂದು ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಚನ್ನಕೇಶವ ಅವರು, ಓದುಗರಿಂದ ದೂರವಾಗಿ ಬಣಗುಟ್ಟುತ್ತಿದ್ದ ಈ ಗ್ರಂಥಾಲಯವನ್ನು ಜನತೆಗೆ ಹತ್ತಿರವಾಗುವ ಸಂಕಲ್ಪ ತೊಟ್ಟಿದ್ದರು.
ಅವರ ಪರಿಶ್ರಮದಿಂದಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗ್ರಂಥಾಲಯದ ಚಿತ್ರಣವೇ ಮಾರ್ಪಾಟಾಗಿದ್ದು, ಸುಂದರ ನೆಲಹಾಸು, ಸುಸಜ್ಜಿತ ಸೌಲಭ್ಯಗಳೊಂದಿಗೆ ಸದಾ ಓದುಗರಿಂದ ತುಂಬಿ ಸಾರ್ಥಕವೆನಿಸಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಗ್ರಾ.ಪಂ ಗ್ರಂಥಾಲಯಗಳನ್ನು ಸುಸಜ್ಜಿತವಾಗಿಟ್ಟು ಓದುಗರಿಗೆ ತೆರೆಯುವಂತೆ ಮಾಡುವಲ್ಲಿ ಕೆಲವು ವಿರೋಧಗಳ ನಡುವೆಯೂ ಸಫಲರಾದರು.
35 ಗ್ರಂಥಾಲಯಗಳಿಗೆ ಸ್ವಂತ ನಿವೇಶನ ಪಡೆದುಕೊಂಡು ಕಟ್ಟಡಗಳಿಗೆ ಅಗತ್ಯ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಸರ್ಕಾರದ ಆದೇಶ ಮತ್ತು ನಿಯಮದಂತೆ ಪ್ರತಿ ಸ್ಥಳೀಯ ಸಂಸ್ಥೆಯೂ ತನ್ನ ಆದಾಯದ ಶೇ.6 ರ ಸೆಸ್ ಗ್ರಂಥಾಲಯಕ್ಕೆ ನೀಡಲೇಬೇಕು. ಆದರೆ ಜಿಲ್ಲೆಯ ಸಂಸ್ಥೆಗಳು ಇದನ್ನು ಪಾಲಿಸುವಲ್ಲಿ ಬಹುದೂರ ಉಳಿದಿದ್ದವು.
ಅಧಿಕಾರ ವಹಿಸಿಕೊಂಡ ತಕ್ಷಣ ಪ್ರತಿ ಸ್ಥಳೀಯ ಸಂಸ್ಥೆಗೂ ಪತ್ರ ಬರೆದು ಸೆಸ್ ಹಣ ನೀಡುವಂತೆ ತಾಕೀತು ಮಾಡಿದರು.
ಖುದ್ದು ಭೇಟಿ ನೀಡಿ, ಜಿಲ್ಲಾಧಿಕಾರಿಗಳಿಂದ ಸೆಸ್ಸು ನೀಡುವಂತೆ ಆದೇಶವನ್ನು ಮಾಡಿಸಿ ಗ್ರಂಥಾಲಯದ ಅಭಿವೃದ್ಧಿಗೆ ಶ್ರಮಿಸಿದ್ದು,
ಇದೀಗ ಅವರು ಗ್ರಂಥಾಲಯ ಇಲಾಖೆಯ ರಾಜ್ಯ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿಯಾಗಿ ತೆರಳುತ್ತಿದ್ದು, ಇವರ ಜಾಗಕ್ಕೆ ಬಂದಿರುವ ಗಣೇಶ್ ಅಧಿಕಾರ ಸ್ವೀಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.