ಕೋಲಾರ

ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Published On :

ಬಂಗಾರಪೇಟೆ: ಪಟ್ಟಣದ ಕೆ.ಸಿ.ರೆಡ್ಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಏಕಾಏಕಿಯಾಗಿ ಏರಿಕೆ ಮಾಡಿರುವುದನ್ನು ಸರ್ಕಾರ ಕೂಡಲೆ ಇಳಿಸಬೇಕೆಂದು ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಸರ್ಕಾರ ಬಡ ವಿದ್ಯಾರ್ಥಿಗಳಿಗಾಗಿ ಕಾಲೇಜುಗಳನ್ನು ಪ್ರಾರಂಭಿಸಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಮತ್ತೊಂದೆಡೆ ಪರೀಕ್ಷಾ ಶುಲ್ಕವನ್ನು ಯಾವುದೇ ಸೂಚನೆ ಇಲ್ಲದೆ ಏರಿಕೆ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ಗಾಯದ ಮೇಲೆ ಬರೆ ಎಳೆದಿದೆ ಎಂದರು. ಇದುವರೆಗೆ 200 ಪರೀಕ್ಷೆ ಶುಲ್ಕ ಪಾವತಿ ಮಾಡಲಾಗುತ್ತಿತ್ತು. ಈಗ 600ರೂಗೆ ಏರಿಕೆ ಮಾಡಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಪೋಷಕರಿಗೆ ಹೆಚ್ಚಿನ ಹೊರೆಯಾಗಿದೆ ಎಂದು ಟೀಕಿಸಿದರು.
ಕೂಡಲೆ ಪರೀಕ್ಷಾ ಶುಲ್ಕವನ್ನು ಇಳಿಸಬೇಕು. ಈ ಬಾರಿ ದಿಢೀರನೆ ಆದಾಯ ಪ್ರಮಾಣಪತ್ರ ನೀಡದವರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ, ಈ ಆದೇಶವನ್ನು ತಡೆಹಿಡಿಯಬೇಕು, ಈ ಗೊಂದಲ ನಿವಾರಣೆಗೆ ಹಿಂದಿನ ಪದ್ಧತಿಯಂತೆ ಜಾರಿಯಾಗುವವರೆಗೆ ಶುಲ್ಕ ಪಾವತಿಸುವ ಕೊನೆ ದಿನಾಂಕವನ್ನು ಮುಂದೂಡಬೇಕು, ಶಿಕ್ಷಣ ವೆಚ್ಚ ದುಬಾರಿಗೊಳಿಸುವ ಹಾಗೂ ಶಿಕ್ಷಣದ ವ್ಯಾಪಾರಿಕರಣಕ್ಕೆ ಕಾರಣವಾಗುವ ಯಾವುದೇ ನೀತಿಯನ್ನು ಸರ್ಕಾರ ಅಳವಡಿಸಿಕೊಳ್ಳಬಾರದು, ಶಿಕ್ಷಣದ ಅಸಮಾನತೆ ನಿವಾರಿಸುವ ಮತ್ತು ಸಮಾನ ಶಿಕ್ಷಣ ತರುವ ಕ್ರಮ ತರಲು ಗಮನಹರಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಕಾಲೇಜಿನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಆಗಮಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು.
ಶಿವಕುಮಾರ್, ಸಂತೋಷ್, ಅಂಬರೀಷ್, ವಿಜಯಕುಮಾರ್, ಗಿರಿಜಾ, ಸಂಗೀತಾ ಶಿರೀಶಾ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.