ಕೋಲಾರ

ಸುದ್ದಿ ಸಂಕ್ಷೇಪ

Published On :

ಜೂಜಾಡುತ್ತಿದ್ದ 8 ಮಂದಿ ಬಂಧನ
ಮೈಸೂರು: ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 8 ಮಂದಿ ಬಂಧಿಸಿ, 20 ಸಾವಿರ ವಶಪಡಿಸಿಕೊಂಡಿದ್ದಾರೆ. ಕನಕಗಿರಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಪಣಕ್ಕಿಟ್ಟಿದ್ದ 20 ಸಾವಿರ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಪ್‌ಕಾಮ್ಸ್ ವಾರ್ಷಿಕ ಸಭೆ
ಮೈಸೂರು: ಜಿಲ್ಲಾ ಹಾಪ್‌ಕಾಮ್ಸ್ ಸಂಸ್ಥೆಯ 2012-13ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ 2013ರ ಸೆ.22ರಂದು ಬೆಳಗ್ಗೆ 11ಕ್ಕೆ ಟಿ.ನರಸೀಪುರ ರಸ್ತೆಯ ಲಲಿತಮಹಲ್ ತೋಟಗಾರಿಕೆ ಕ್ಷೇತ್ರದ ಸಂಗ್ರಹಣಾ ಕೇಂದ್ರದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಹಾಪ್‌ಕಾಮ್ಸ್‌ನ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ನಾಳೆ ಮೈಸೂರಿಗೆ ಆಹಾರ ಸಚಿವ
ಮೈಸೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್ ಅವರು ಸೆ.15 ರಂದು ನಗರಕ್ಕೆ ಆಗಮಿಸುವರು. ಕೆಂಪನಂಜಾಂಬ ಅಗ್ರಹಾರದ ಸರಸ್ವತಿ ನಿಲಯದ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸುವರು. ಸಂಜೆ 5ಕ್ಕೆ ಮೈಸೂರಿನಿಂದ ನಿರ್ಗಮಿಸುವರು.
ಒಕ್ಕಲಿಗ ವಧು-ವರರ ಸಮಾವೇಶ
ಮೈಸೂರು: ಜಿಲ್ಲಾ ಒಕ್ಕಲಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಕಾರದಿಂದ ಸೆ.15ರ ಬೆಳಗ್ಗೆ 10ಕ್ಕೆ ಕೆ.ಜಿ. ಕೊಪ್ಪಲಿನ ಜಯನಗರ ರೇಲ್ವೆ ಗೇಟ್ ಸಮೀಪದ ನೇಗಿಲಯೋಗಿ ಮರುಳೇಶ್ವರ ಸೇವಾಭವನದ ಸಭಾಂಗಣದಲ್ಲಿ ಒಕ್ಕಲಿಗ ವಧು-ವರರ ಸಮಾವೇಶ ಆಯೋಜಿಸಿದೆ. ಮೊ. 8277520042 ಸಂಪರ್ಕಿಸಿ.
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಸುಮಾರು 50 ವರ್ಷ ವಯಸ್ಸಿನ ಮೃತ ವ್ಯಕ್ತಿಯು ರಿಂಗ್ ರಸ್ತೆಯ ಮೈಸೂರು- ಬೆಂಗಳೂರು ರೈಲು ಮಾರ್ಗದಲ್ಲಿ ರೈಲಿಗೆ ಸಿಲುಕಿದ್ದಾರೆ. 5.5 ಅಡಿ ಎತ್ತರ, ಚೂಪಾದ ಮೂಗು ಇರುವ ಈ ವ್ಯಕ್ತಿ ಗುರುತು ಇದ್ದಲ್ಲಿ ದೂ. 2516579 ಸಂಪರ್ಕಿಸಬಹುದು.
ಜೀತಕ್ಕಿದ್ದ ಬಾಲಕಿ ರಕ್ಷಣೆ
ಮೈಸೂರು: ಜೀತಕ್ಕಿದ್ದ ಬಾಲಕಿಯನ್ನು ಒಡನಾಡಿ ಸಂಸ್ಥೆಯವರು ಶುಕ್ರವಾರ ರಕ್ಷಿಸಿದ್ದಾರೆ. ಕುವೆಂಪುನಗರ ಅನಿಕೇತನ ರಸ್ತೆಯ ನಿವಾಸಿ ಹಾಗೂ ಶಾಲಾ ಶಿಕ್ಷಕಿ ಲತಾ 14 ವರ್ಷದ ಬಾಲಕಿಯನ್ನು ಐದು  ವರ್ಷಗಳಿಂದ ತಮ್ಮ ಮನೆಯಲ್ಲಿ ಜೀತಕ್ಕಿರಿಸಿಕೊಂಡಿದ್ದರು ಎನ್ನಲಾಗಿದೆ. ಬಾಲಕಿಯನ್ನು 9 ವರ್ಷವಿರುವಾಗಲೇ ಆಕೆಯ ತಾಯಿಯು ಲತಾ ಅವರ ಮನೆಯಲ್ಲಿ ಜೀತಕ್ಕಿರಿಸಿದ್ದರು. ಬಾಲಕಿಗೆ ಲತಾ ಅವರ ಮನೆಯವರು ಚಿತ್ರಹಿಂಸೆ ನೀಡಿದ್ದಾರೆ. ಆಕೆಯ ಮೈ ಮೇಲೆ ಸಾಕಷ್ಟು ಗಾಯಗಳಾಗಿವೆ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಆರೋಪಿಸಿದ್ದಾರೆ.  ಕಳೆದ ಎರಡು ತಿಂಗಳ ಹಿಂದೆ ಬಾಲಕಿಯ ಕೂದಲನ್ನೂ ತೆಗೆಸಲಾಗಿದೆ. ಇದನ್ನು ಗಮನಿಸಿದ ನೆರೆ ಹೊರೆಯವರು ಬಾಲಕಿಯ ಸ್ಥಿತಿ ನೋಡಲಾಗದೆ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದರು. ಶುಕ್ರವಾರ ಒಡನಾಡಿ ಸಂಸ್ಥೆಯ ಪದಾಧಿಕಾರಿಗಳು ಲತಾ ಅವರ ಮನೆಗೆ ತೆರಳಿ ಬಾಲಕಿಯನ್ನು ಜೀತದಿಂದ ಮುಕ್ತಗೊಳಿಸಿ, ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಸಮಿತಿ ಪದಾಧಿಕಾರಿಗಳು ಬಾಲಕಿಯೊಂದಿಗೆ ಸಮಾಲೋಚಿಸಿ, ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಬಾಲಕಿಗೆ ಸೂಕ್ತ ಪುನರ್‌ವಸತಿ ವ್ಯವಸ್ಥೆ ಬೇಕಿರುವುದರಿಂದ ಆಕೆಯನ್ನು ಒಡನಾಡಿ ಸಂಸ್ಥೆಗೆ ಕಳುಹಿಸುವಂತೆ ಸ್ಟ್ಯಾನ್ಲಿ ಮನವಿ ಮಾಡಿದ್ದಾರೆ. ಬಾಲಕಿಯೊಬ್ಬಳನ್ನು ಜೀತಕ್ಕೆ ದುಡಿಸಿಕೊಳ್ಳಲಾಗುತ್ತಿದೆ ಎಂಬ ಸಂದೇಶವನ್ನು ಕುವೆಂಪುನಗರ ಪೊಲೀಸರಿಗೆ ದೂರವಾಣಿ ಮೂಲಕ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕಾಲೇಜುಗಳಿಗೆ ಶಿವಯೋಗಿಸ್ವಾವು ಭೇಟಿ
ಕೆಜಿಎಫ್: ಕೆಲ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳವನ್ನು ಹಿಂದಿನ ಬಿಜೆಪಿ ಸರ್ಕಾರ ಕೆಜಿಎಫ್‌ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕಾಗಿ 4 ಕೋಟಿ ವೆಚ್ಚದಲ್ಲಿ ಖರೀದಿಸಿದ್ದು ಕಟ್ಟಡದ ನಿರ್ಮಾಣಕ್ಕಾಗಿ ಅನುದಾನ ಸಹ ಹೊಂದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಲೇಜಿನ ನಿರ್ಮಾಣಕ್ಕೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಶಿವಯೋಗಿಸ್ವಾವು ತಿಳಿಸಿದರು.  ಕೆಜಿಎಫ್ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಗೆ ಮಾತನಾಡಿದರು. ಅದೇ ರೀತಿ ಶಿಕ್ಷಕರ ಹಲವಾರು ಸಮಸ್ಯೆಗಳು ಹಾಗೂ ಬೇಡಿಕೆಗಳು ಸಹ ಹಾಗೆಯೇ ಉಳಿದಿದ್ದು ಮುಂದಿನ ದಿನಗಳಲ್ಲಿ ಎಲ್ಲವನ್ನು ಬಗೆಹರಿಸುವುದಾಗಿ ಶಿಕ್ಷಕರಿಗೆ ಭರವಸೆ ನೀಡಿದರು.
ಶಿರಡಿ ಸಾಯಿನಾಥ ಜ್ಞಾನ ಮಂದಿರ ವಾರ್ಷಿಕೋತ್ಸವ
ಶಿಡ್ಲಘಟ್ಟ: 19 ನೇ ಶತಮಾನದ ಶ್ರೇಷ್ಠ ಸಂತ ಶಿರಡಿ ಸಾಯಿ ಬಾಬಾ ಅನೇಕತೆಯಲ್ಲಿ ಏಕತೆ ಕಂಡ ದಾರ್ಶನಿಕ ಆಗಿದ್ದಾರೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದ್ದಾರೆ.
ಸಮೀಪದ ಶಿರಡಿ ಸಾಯಿನಾಥ ಜ್ಞಾನ ಮಂದಿರದ 8 ನೇ ವಾರ್ಷಿಕೋತ್ಸವದಲ್ಲಿ ಶ್ರೀ ಗಣಪತಿ ಹೋಮದ ಪೂರ್ಣಾಹುತಿ ನೀಡಿ ಆಶೀರ್ವಚನ ನೀಡುತ್ತಾ ಎಲ್ಲ ಧರ್ಮಗಳ ಸಾರ ಮಾನವ ಸೇವೆ ಎಲ್ಲರ ದೇವರು ಒಬ್ಬನೆ, ಜನರಲ್ಲಿ ಜನಾರ್ದನನ್ನು ಕಂಡ ಸಾಯಿಬಾಬಾ ಭಾರತೀಯ ಸಂಸ್ಕೃತಿಗೆ ಸರಿಹೊಂದುವ ಶ್ರೇಷ್ಠ ಪುರುಷನೆಂದು ತಿಳಿಸಿದರು.
ಎಂ. ವೆಂಕಟೇಶ್ ಸಂಚಾಲಕ ನಾರಾಯಣಸ್ವಾಮಿ ಮಳ್ಳೂರು ಗ್ರಾಮದ ಮುಖಂಡರಾದ ರಾಮರೆಡ್ಡಿ ವೆಂಕಟರಾಮ್ ಅಮರನಾಥ್ ಶ್ರೀನಿವಾಸ್, ದೇವರಾಜ್, ಮಂಜುನಾಥ್ ಪಾಲ್ಗೂಂಡಿದ್ದರು.
ನೀರಿನಲ್ಲಿ ಮುಳುಗಿ ಬಾಲಕ ಸಾವು
ಗೌರಿಬಿದನೂರು: ಹೊಸೂರಿನ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ನ್ಯಾಷನಲ್ ಹೈಸ್ಕೂಲಿನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕೊರಟಗೆರೆ ತಾಲೂಕಿನ ಮಾದಾನಳ್ಳಿಯ ಅಶ್ವತ್ಥನಾರಾಯಣ ಅವರ ಮಗನಾದ ಪ್ರವೀಣ್(14)ಶಾಲೆಗೆ ಚಕ್ಕರ್ ಹೊಡೆದು ಈಜಲು ಹೋಗಿ ನೀರಿನ ಕುಂಟೆಯಲ್ಲಿನ ಮಣ್ಣಿನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾನೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬನಹಳ್ಳಿಯಲ್ಲಿ ಜಾನುವಾರು ತಪಾಸಣಾ ಶಿಬಿರ
ಟೇಕಲ್: ಜಾನುವಾರುಗಳಿಗೆ ರೋಗದ ಲಕ್ಷಣಗಳು ಕಂಡು ಬಂದಾಗ ರೈತರು ತಕ್ಷಣ ಸಮೀಪದ ಪಶು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ. ಪಿ. ಮರ್ಗೂಬ್ ಹುಸೇನ್ ಹೇಳಿದರು.
ಸಮೀಪದ ಬನಹಳ್ಳಿಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಹಳೇ ವಿದ್ಯಾರ್ಥಿಗಳ ಸಂಘ, ಹೆಬ್ಬಾಳದ ಲಯನ್ಸ್ ಕ್ಲಬ್, ರೈತ ಸಂಪರ್ಕ ಕೇಂದ್ರ ಹಾಗೂ ಪಶು ಚಿಕಿತ್ಸಾಲಯ ವತಿಯಿಂದ ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಒಟ್ಟು 920ಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕರು, ಕೃಷಿ ವಿಸ್ತರಣಾಧಿಕಾರಿ ಡಾ. ಬಿ. ಕೃಷ್ಣಮೂರ್ತಿ, ತಾಲೂಕು ಪಶು ವೈದ್ಯಾಧಿಕಾರಿ ಎ.ಎನ್. ಪ್ರಭುದೇವ್, ಟೇಕಲ್ ಅಂಬರೀಷ್, ಬನಹಳ್ಳಿ ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಬಿ.ಜಿ. ಮುನಿಸ್ವಾಮಿಗೌಡ, ಬೈರಪ್ಪ, ಎಂ. ರಮೇಶ್, ಶಶಿಕುಮಾರ್, ಶಿವಶಂಕರ್, ಶಿಲ್ಪಶ್ರೀವಾಸ್ತವ, ಶೃತಿ, ಶುಭ, ಸೌಮ್ಯ, ಶ್ವೇತ, ಸುಧಾಕರ್, ಸುಮಂತ್, ರಾಮಕೃಷ್ಣ, ರವಿಂದ್ರನಾಥ್, ಶಬರಿ, ಶೈಲ, ಶಾಲಿನಿ, ರವಿಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.