ಎಐಸಿಸಿ ಕಾರ್ಯದರ್ಶಿ ವಿರುದ್ಧ ಮುನಿಯಪ್ಪ ಗರಂ
ಕನ್ನಡಪ್ರಭ ವಾರ್ತೆ ಕೋಲಾರ ಸೆ.15
ಕೆಜಿಎಫ್ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರನ್ನು ತಮ್ಮ ಕಾರಿನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮನೆಗೆ ಕರೆತಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ವಿರುದ್ಧ ಕೇಂದ್ರದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಸಿಡಿಮಿಡಿಗೊಂಡ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.
ಶನಿವಾರ ಬಂಗಾರಪೇಟೆಯ ಎಸ್.ಎನ್. ರೆಸಾರ್ಟ್‌ನಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು.
ಸಭೆಯ ನಂತರ ಸಂಜೆ 4.30ರ ವೇಳೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಕೆ.ಎಂ.ನಾರಾಯಣಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್ ಸೇರಿದಂತೆ ಪಕ್ಷದ ಪ್ರಮುಖರಿಗೆ ಬಂಗಾರಪೇಟೆಯ ಸ್ಥಳೀಯ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಸದಸ್ಯ ಚಂದ್ರಪ್ಪ ಅವರ ನಿವಾಸದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮುನಿಯಪ್ಪ ಅವರು ತಮ್ಮ ಕಾರಿನಲ್ಲಿ ಚಂದ್ರಪ್ಪ ಅವರ ಮನೆಗೆ ಹೋಗಿದ್ದರು. ಸೆಲ್ವಕುಮಾರ್ ಅವರು ಮತ್ತೊಂದು ಕಾರಿನಲ್ಲಿ ಆಗಮಿಸಿದರು. ಅದೇ ಕಾರಿನಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಮುಖಂಡ ಶ್ರೀನಿವಾಸ್ ತೆರಳಿದ್ದರು.
ಚಂದ್ರಪ್ಪ ಮನೆಯ ಮುಂದೆ ಮೊದಲು ತಮ್ಮ ಕಾರಿನಿಂದ ಇಳಿದ ಕೆ.ಎಚ್. ಮುನಿಯಪ್ಪ, ಸೆಲ್ವಕುಮಾರ್ ಜತೆ ಶ್ರೀನಿವಾಸ್ ಇರುವುದನ್ನು ಗಮನಿಸಿ ಸಿಡಿಮಿಡಿಗೊಂಡರಲ್ಲದೆ, ದೊಡ್ಡವರ ಜೊತೆ ನಿನಗೇನು ಕೆಲಸ,ಅಧಿಕ ಪ್ರಸಂಗತನ ಸಹಿಸಲ್ಲವೆಂದು ಗುಡುಗಿದರು.
ಇದರಿಂದ ತಬ್ಬಿಬ್ಬಾದ ಶ್ರೀನಿವಾಸ್ ತಲೆ ತಗ್ಗಿಸಿ ಮೌನಕ್ಕೆ ಶರಣಾದರು. ಇಷ್ಟಕ್ಕೆ ಸುಮ್ಮನಾಗದ ಕೆ.ಎಚ್. ಮುನಿಯಪ್ಪ, ಶ್ರೀನಿವಾಸ್ ಅವರಿಗೆ ಕಾರಿನಲ್ಲಿ ಬರುವುದಕ್ಕೆ ಅವಕಾಶ ಮಾಡಿಕೊಟ್ಟ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಪಕ್ಷವಿರೋಧಿ ಚಟುವಟಿಕೆ ಮಾಡುವವರಿಗೆ ಉತ್ತೇಜನ ನೀಡುವುದು ಸರಿಯಲ್ಲವೆಂದು ತರಾಟೆಗೆ ತೆಗೆದುಕೊಂಡಾಗ ಸೆಲ್ವಕುಮಾರ್ ಸಹ ಕಕ್ಕಾಬಿಕ್ಕಿಯಾದರು.
ಈ ಸಂದರ್ಭದಲ್ಲಿ ಸೆಲ್ವಕುಮಾರ್ ಏನೋ ಸಮಜಾಯಿಷಿ ನೀಡಲು ಮುಂದಾದರಾದರೂ ಪಕ್ಷವಿರೋಧಿಗಳನ್ನು ತಮ್ಮ ಜೊತೆ ಕರೆತಂದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ. ಇನ್ನೊಮ್ಮೆ ಈ ರೀತಿ ಆಗಬಾರದೆಂದು ತಿಳಿಸಿ ಚಂದ್ರಪ್ಪ ಅವರ ಮನೆಗೆ ಜೊತೆಯಲ್ಲಿ ತೆರಳಿದರು.
ಈ ಹಿಂದೆ ಶ್ರೀನಿವಾಸ್ ಅವರು ಮುನಿಯಪ್ಪ ಅವರ ಇಷ್ಟಕ್ಕೆ ವಿರುದ್ಧವಾಗಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ತಂದು ಸೋತಿದ್ದು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗಳು ರೂಪಶಶಿಧರ್‌ಗೆ ಟಿಕೆಟ್ ತಪ್ಪಿಸಿದರೆಂಬ ಸಿಟ್ಟಿನಿಂದಾಗಿ ಶ್ರೀನಿವಾಸ್ ಅವರನ್ನು ಕಂಡು ಕುಪಿತರಾಗಿರಬಹುದೆಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

