1 ಕೋಟಿ ವೆಚ್ಚದಲ್ಲಿ ಜಿಲ್ಲಾ ಗ್ರಂಥಾಲಯ ಅಭಿವೃದ್ಧಿ
ಕೋಲಾರ: ನಗರದ ಜಿಲ್ಲಾ ಗ್ರಂಥಾಲಯದ ಅಭಿವೃದ್ಧಿಗಾಗಿ 1 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇಲಾಖೆಯಿಂದ 50 ಲಕ್ಷ ಬಿಡುಗಡೆ ಮಾಡಿಸುವುದಾಗಿ ಗ್ರಂಥಾಲಯ ಇಲಾಖೆ ವಿಶೇಷಾಧಿಕಾರಿ ಎಚ್.ಆರ್. ಚನ್ನಕೇಶವ್ ಭರವಸೆ ನೀಡಿದರು.
ಜಿಲ್ಲಾ ಗ್ರಂಥಾಲಯಾಧಿಕಾರಿಯಾಗಿ ಕೆಲಸ ನಿರ್ವಹಿಸಿ ಬೆಂಗಳೂರು ಕೇಂದ್ರ ಗ್ರಂಥಾಲಯಕ್ಕೆ ವಿಶೇಷ ಅಧಿಕಾರಿಯಾಗಿ ವರ್ಗಾವಣೆಗೊಂಡ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಸಂಘ, ಗ್ರಂಥಾಲಯ ಇಲಾಖೆ, ಪತ್ರಕರ್ತರ ಬಳಗ, ಓದುಗರ ಬಳಗ ಶನಿವಾರ ನೀಡಿದ ಆತ್ಮೀಯ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
ಜಿಲ್ಲಾ ಡಿವಿಜಿ ಗ್ರಂಥಾಲಯ ಆವರಣದಲ್ಲೇ 40್ಢ60 ಅಡಿ ನಿವೇಶನದಲ್ಲಿ ನೆಲ ಮಹಡಿಯಲ್ಲಿ ಗ್ರಂಥಾಲಯ, ಒಂದನೇ ಮಹಡಿಯಲ್ಲಿ ಸುಂದರ ಸಭಾಂಗಣ ನಿರ್ಮಾಣದ ಉದ್ದೇಶ ಹೊಂದಲಾಗಿದ್ದು, ಇಲಾಖೆಯಿಂದ 50 ಲಕ್ಷ ಹಾಗೂ ಸ್ಥಳೀಯ ಶಾಸಕರ ನಿಧಿ, ಗ್ರಂಥಾಲಯ ಸೆಸ್ ಬಳಸಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವಂತೆ ನೂತನ ಗ್ರಂಥಾಲಯಾಧಿಕಾರಿ ಗಣೇಶ್ ಅವರಲ್ಲಿ ಕೋರಿದರು.
ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳ ಸಂಗ್ರಹವಿರುವ ಅಧ್ಯಯನ ಕೇಂದ್ರ ತಮ್ಮ ಕನಸಾಗಿದ್ದು, ಪೀಠೋಪಕರಣ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದು, ಶೀಘ್ರ ಕಾರ್ಯಾರಂಭಗೊಳ್ಳಲಿದ್ದು, ಡಿ.ಗ್ರೂಪ್ನಿಂದ ಐಎಎಸ್ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ಪುಸ್ತಕ ದೊರೆಯುವಂತೆ ಮಾಡಿದ್ದೇನೆ ಎಂದರು.
ಜಿಲ್ಲೆಯ 35 ಗ್ರಾಪಂ ಗ್ರಂಥಾಲಯಗಳಿಗೆ ಅಗತ್ಯ ನಿವೇಶನ ಪಡೆದುಕೊಂಡಿದ್ದು, ಇಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ತಿಳಿಸಿ, ತಾಲೂಕು ಗ್ರಂಥಾಲಯಗಳಿಗೂ ಸ್ವಂತ ಕಟ್ಟಡ ಪಡೆಯಲು ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದಲ್ಲಿ ಗ್ರಂಥಾಲಯಕ್ಕಾಗಿ ನಿವೇಶನ ನೀಡಿರುವ ನಿವೃತ್ತ ಶಿಕ್ಷಕ ಟಿ.ರಾಮಪ್ಪ ಅವರನ್ನು ಸ್ಮರಿಸಿ ಅಲ್ಲಿ ಶೀಘ್ರ ಗ್ರಂಥಾಲಯ ಕಟ್ಟಡ ನಿರ್ಮಿಸಲು 20 ಲಕ್ಷ ಕೊಡಿಸುವುದಾಗಿ ನುಡಿದರು.
ಖಾಲಿ ಹುದ್ದೆ ತುಂಬಲು ಸಚಿವರಿಗೆ ಮನವಿ, ಮೇಲ್ವಿಚಾರಕರಿಗೆ ಪಿಡಿಒಗಳಿಂದ ಸೇವಾ ದೃಢೀಕರಣ ಪತ್ರ ಪಡೆಯಬೇಕೆಂಬ ನಿಯಮ ಸಡಿಲಿಕೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್, ಅಧೋಗತಿಗಿಳಿದಿದ್ದ ಡಿವಿಜಿ ಗ್ರಂಥಾಲಯವನ್ನು ಜಿಲ್ಲೆಯ ಮನುಷ್ಯನ ಬದುಕು ಬದಲಿಸುವ ಸಂಪನ್ಮೂಲ ಕೇಂದ್ರವಾಗಿಸಿದ ಕೀರ್ತಿ ಚನ್ನಕೇಶವ್ ಅವರಿಗೆ ಸಲ್ಲುತ್ತದೆ ಎಂದರು.
ನೂತನ ಗ್ರಂಥಾಲಯಾಧಿಕಾರಿ ಗಣೇಶ್ ಇದೇ ಹಾದಿಯಲ್ಲಿ ಸಾಗಿ ಗ್ರಂಥಾಲಯಗಳನ್ನು ಸಮಾಜದ ಸಂಪನ್ಮೂಲ ಕೇಂದ್ರವಾಗಿಸಲು ಶ್ರಮಿಸಲಿ ಎಂದು ಹಾರೈಸಿದರು.
ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಬಿ. ಸುರೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡ ಗ್ರಂಥಾಲಯ ಸಹಾಯಕ ಸಂಗಣ್ಣ, ಗ್ರಂಥಾಲಯಕ್ಕೆ ಉಚಿತ ನಿವೇಶನ ನೀಡಿದ ಯಲ್ದೂರಿನ ಟಿ.ರಾಮಪ್ಪರನ್ನು ಸನ್ಮಾನಿಸಲಾಯಿತು.
ರಾಜ್ಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷ ನಾಗಭೂಷಣ್, ಖಜಾಂಚಿ ಬಸವರಾಜ್, ಕಾರ್ಯದರ್ಶಿ ಎ.ನಾಗೇಂದ್ರ, ಸುಭಾಷ್ ಶಾಲೆಯ ಗೋಪಾಲರೆಡ್ಡಿ, ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ ಮತ್ತಿತರರು ಇದ್ದರು.ನೂತನ ಗ್ರಂಥಾಲಯಾಧಿಕಾರಿ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯಂ ನಿರೂಪಿಸಿ, ರಾಜ್ಯ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

