ಕೋಳಿಫಾರಂ ತ್ಯಾಜ್ಯದಿಂದ ರೋಗ ಭೀತಿ, ಜನರು ಕಂಗಾಲು
ಕ.ಪ್ರ. ವಾರ್ತೆ, ಗೌರಿಬಿದನೂರು, ಸೆ.16
ತಾಲೂಕಿನ ಚಂದನದೂರು ರಸ್ತೆಯ ಕೊರಸಿಗೆ ನಂಜಮ್ಮಮಠದ ಬಳಿಯಲ್ಲಿರುವ ಲೋಟಸ್ ಕೋಳಿಫಾರಂನ ತ್ಯಾಜ್ಯದಿಂದ ವಿಚಿತ್ರ ಬಣ್ಣಗಳುಳ್ಳ ನೋಣಗಳು ಉತ್ಪತ್ತಿಯಾಗಿ ಅವುಗಳಿಂದ ಸುತ್ತಮುತ್ತಲ 10 ಹಳ್ಳಿಗಳಿಗೆ ಸೋಂಕಿನಿಂದ ರೋಗಗಳು ಬರುತ್ತಿದ್ದು ತಕ್ಷಣವೇ ಕೋಳಿಫಾರಂ ಮುಚ್ಚಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿತು.
ಕಳೆದ ಒಂದು ವರ್ಷದಿಂದ ಈ ಕೋಳಿ ಫಾರಂನಿಂದ ಉಂಟಾಗುವ ತ್ಯಾಜ್ಯ ಕಶ್ಮಲಗಳಿಂದ ಉತ್ಪತ್ತಿಯಾಗುತ್ತಿದ್ದ ಬಣ್ಣಬಣ್ಣಗಳುಳ್ಳ ನೊಣಗಳು ಇಡಗೂರು, ಚಂದನದೂರು, ಶಂಬೂಕನಗರ, ಗಾಂಧಿನಗರ, ಹಾಲಗಾನಹಳ್ಳಿ, ಕದಿರೇನಹಳ್ಳಿಗಳಲ್ಲಿ ನುಗ್ಗಿ ಊಟ ಮಾಡುವಾಗ, ತಿಂಡಿ ತಿನ್ನುವಾಗ ಊಟದ ತಟ್ಟೆಗಳಲ್ಲಿಯೇ ಬೀಳುತ್ತಿತ್ತು.
ಮಕ್ಕಳ ಬಿಸಿ ಊಟಕ್ಕೆ ನೊಣಮುತ್ತುತ್ತಿತ್ತು, ಹಸುಗಳಲ್ಲಿ ಹಾಲು ಕರೆಯಲು ಸಾಧ್ಯವಾಗದಷ್ಟು ನೊಣಗಳ ಕಾಟ ಹೆಚ್ಚಿತ್ತು ಹಾಗೂ ಜ್ವರ, ಕೆಮ್ಮು, ನೆಗಡಿ ರೋಗಗಳಿಗೆ ತುತ್ತಾಗಿದ್ದ ಜನ ಇಡಗೂರು ಗ್ರಾಮ ಪಂಚಾಯ್ತಿ, ದೊಡ್ಡಕುರುಗೋಡು ಗ್ರಾಮ ಪಂಚಾಯ್ತಿ, ಹಾಲಗಾನಹಳ್ಳಿ ಪಂಚಾಯ್ತಿ ಕಾರ್ಯಾಲಯದಿಂದ ಲಿಖಿತ ಎಚ್ಚರಿಕೆ ನೋಟೀಸ್ ನೀಡಿದ್ದರೂ ಲೋಟಸ್ ಕಂಪನಿಯು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ.ಇದರಿಂದ ನೊಂದ ಸಾರ್ವಜನಿಕರು ಕರ್ನಾಟಕ ರೈತಸಂಘ, ಹಸಿರುಸೇನೆ ಸಂಘಟನೆಯ ಮೂಲಕ ಲೋಟಸ್ ಕೋಳಿ ಫಾರಂ ಬಳಿ ಪ್ರತಿಭಟನೆ ನಡೆಸಿ ಸರ್ಕಾರ ತಕ್ಷಣವೇ ಈ ಕೋಳಿಫಾರಂನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘದ ಅಧ್ಯಕ್ಷ ಎಂ.ಆರ್.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಲೋಕೇಶ್ಗೌಡ, ಬಿಜೆಪಿ ಮುಖಂಡ ಸಿ.ಆರ್.ನರಸಿಂಹಮೂರ್ತಿ,ಇಡಗೂರು ವೆಂಕಟೇಶ್, ನವೀನ್, ಚೌಡಪ್ಪ, ರವಿಕುಮಾರ್, ವೆಂಕಟೇಶ್, ಹಾಗೂ ಸಾವಿರಾರು ಗ್ರಾಮಸ್ಥರು ರೈತರು ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಭಾಸ್ಕರ್ ಅವರು ತಕ್ಷಣವೇ ಈ ಕೋಳಿಫಾರಂನ ಪರವಾನಿಗೆಯನ್ನು ರದ್ದು ಮಾಡುವಂತೆ ಪಂಚಾಯ್ತಿ ಅಧಿಕಾರಿಗೆ ಸೂಚಿಸಿದರು.
ಸಿಪಿಐ ಲಕ್ಷ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ಗುಂಡೂರಾವ್, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ವೇಣುಗೋಪಾಲಲ್ಹಾಜರಿದ್ದರು.
ಸಿಕ್ಕವರಿಗೆ ಸೀರುಂಡೆ: ರೈತ ಸಂಘವು ಪ್ರತಿಭಟನೆ ನಡೆಸಿದ ನಂತರ ಕೋಳಿಫಾರಂಗೆ ನುಗ್ಗಿದ ಕೆಲವು ಕಿಡಿಗೇಡಿಗಳು ಸಿಕ್ಕವರಿಗೆ ಸೀರುಂಡೆ ಎಂಬಂತೆ ಕೋಳಿಗಳನ್ನು ಹೊತ್ತು ಓಡಿಹೋಗುತ್ತಿದ್ದರು.
ಈ ರೀತಿಯ ದಾಳಿಯಿಂದ ಲಕ್ಷಾಂತರ ರೂಗಳ ಕೋಳಿಗಳು ಲೂಟಿಯಾಗುತ್ತಿರುವ ಸ್ಥಳಕ್ಕೆ ಆಗಮಿಸದ ಪಿಎಸ್ಐ ಯಶವಂತ್ ಮತ್ತು ಪೊಲೀಸ್ ತಂಡ ಅವರು ಒಳನುಗ್ಗುತ್ತಿದ್ದವನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಿಕ್ಕಸಿಕ್ಕಲ್ಲಿ ಸತ್ತ ಕೋಳಿ
ಉತ್ತಮ ಗುಣಮಟ್ಟದ ಮೊಟ್ಟೆ ಇಡುವ ಕೋಳಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿತ್ತು. ಇಲ್ಲಿ ಉತ್ಪಾದನೆಯಾಗುತ್ತಿದ್ದ ಕೋಳಿ 8ರಿಂದ 10ಕೆ.ಜಿ. ತೂಗುತ್ತಿತ್ತು, ಕೋಳಿಮೊಟ್ಟೆಗೆ ಮಾರುಕಟ್ಟೆಯಲ್ಲಿ 30 ರು.ಗಳಷ್ಟು ಬೆಲೆಯಿತ್ತು, ರೈಲಿನ ಪಾರ್ಸೆಲ್ ಮೂಲಕ ರಫ್ತುಮಾಡಲಾಗುತ್ತಿತ್ತು ಎಂದಿರುವ ರೈತರು ಕಂಪನಿಯವರು ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿ ಸತ್ತ ಕೋಳಿಗಳನ್ನು ಸಿಕ್ಕಸಿಕ್ಕಲ್ಲಿ ಬಿಸಾಡದೆ ಭೂಮಿಯಲ್ಲಿ ಹೂಳಬೇಕಾಗಿತ್ತು. ಹಾಗೂ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

