ಕೋಲಾರ

ಬರ ಜಿಲ್ಲೆಗೆ ನೀರು ತರಲು ಪ್ರಾಮಾಣಿಕ ಯತ್ನ

Published On :

ಕ.ಪ್ರ.ವಾರ್ತೆ  ಚಿಕ್ಕಬಳ್ಳಾಪುರ  ಸೆ. 17
ಐದು ವರ್ಷದ ಅಧಿಕಾರವಧಿಯಲ್ಲಿ ಬರಪೀಡಿತ ಜಿಲ್ಲೆಗೆ ನೀರು ತರಲು ಒಬ್ಬ ಶಾಸಕನಾಗಿ ಮತ್ತು ಸಾಮಾನ್ಯ ಪ್ರಜೆಯಾಗಿ ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಾ. ಕೆ. ಸುಧಾಕರ್ ಭರವಸೆ ನೀಡಿದರು.   
ಅವರು ತಾಲೂಕಿನ ಪೆರೆಸಂದ್ರ ಹಾಲು ಉತ್ಪಾದಕರ ಸಹಕಾರಿ ಸಂಘದ ಬೆಳ್ಳಿಹಬ್ಬ, ಜನರೇಟರ್ ಉದ್ಘಾಟನೆ, ರೈತರಿಗೆ ಹಾಲಿನ ಕ್ಯಾನ್ ಹಾಗೂ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿಗಳು ಇಲ್ಲಿನ ನೀರಾವರಿ ಅಭಿವೃದ್ಧಿಗೆ ಎತ್ತಿನಹೊಳೆ ಯೋಜನೆ ಜಾರಿಗೆ ತರಲು ಸಾವಿರ ಕೋಟಿ ರು. ಬಜೆಟ್‌ನಲ್ಲಿ ನೀಡಿದ್ದಾರೆ.ಇದಲ್ಲದೇ ಪರಮಶಿವಯ್ಯ ವರದಿ ಕುರಿತ ವಿಸ್ತ್ರತ ಯೋಜನಾ ವರದಿಗೆ 50 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಈ ಎರಡೂ ಯೋಜನೆ ಯಾವುದೇ ಒಂದು ಯೋಜನೆ ಜಾರಿಗೆ ಬಂದರೂ ಈ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆಯಾದರೂ ನೀರಿನ ಅಭಾವ ನೀಗುತ್ತದೆ ಎಂದರು.
ಈ ಕ್ಷೇತ್ರದ ರೈತರ ಪ್ರಗತಿಪರ ಚಿಂತನೆ, ದುಡಿಯುವ ಉತ್ಸಾಹದಿಂದಾಗಿ ಉತ್ತಮವಾಗಿ ಬೆಳೆಯಾಗುತ್ತಿದೆ. ಗುಣಮಟ್ಟದ ಹಣ್ಣು, ತರಕಾರಿಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಕ್ಷೇತ್ರ ಬರಪೀಡಿತವಾಗಿದೆ. ನೀರಿನ ಅಭಾವ ಇರುವುದರಿಂದ ಇಂದು ಹೈನುಗಾರಿಕೆ, ರೇಷ್ಮೆ ಇಲ್ಲಿನ ಪ್ರಮುಖ ಜೀವನಾಧಾರ ಮೂಲವಾಗಿದೆ. ಇವನ್ನೇ ಮೂಲ ಕಸುಬಾಗಿಸಿಕೊಂಡಿರುವ ರೈತರು ಗೌರವಯುತ ಬದುಕು ಕಂಡುಕೊಂಡಿದ್ದಾರೆ. ಸರ್ಕಾರ ಕೂಡ ರೈತರಿಗಾಗಿ ಅನ್ನಭಾಗ್ಯ, ಮಕ್ಕಳಿಗೆ ಕ್ಷೀರಭಾಗ್ಯ, ರೈತರ ಸಾಲಮನ್ನಾ ಸೌಲಭ್ಯ ಕಲ್ಪಿಸಿದೆ ಇದೇ ವೇಳೆಯಲ್ಲಿ ರೈತರ ಇಂತಹ ಯೋಜನೆಗಳ ಲಾಭವನ್ನು ಸರಿಯಾಗಿ ಪಡೆದು ಬಳಕೆ ಮಾಡಿಕೊಳ್ಳಬೇಕು ಎಂದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ 1980ರಲ್ಲಿ ಸಂಘ ಸ್ಥಾಪನೆಯಾಯಿತು. ಮೊದಲ ದಿನ ಸಂಗ್ರಹವಾದ ಹಾಲು 150 ಲೀಟರ್. ಅಲ್ಲಿಂದ 1987 ರವರೆಗೂ ಇದು ಬೆಂಗಳೂರು ಹಾಲು ಒಕ್ಕೂಟದ ಅಡಿ ಇತ್ತು.ನಂತರ ಕೋಲಾರ-ಚಿಕ್ಕಬಳ್ಳಾಪುರ ಒಕ್ಕೂಟ ಪ್ರತ್ಯೇಕಿಸಿದಾಗ ಅದರಡಿಗೆ ಬಂತು.ಕೇವಲ 13ರಿಂದ 18 ಸಂಘದಿಂದ ಆರಂಭವಾದ ಒಕ್ಕೂಟ ಇಂದು ದೊಡ್ಡದಾಗಿ ಬೆಳೆದಿದೆ.1987ರಲ್ಲಿ ಒಕ್ಕೂಟ ಆರಂಭವಾಗಿದ್ದು ಕೂಡ 30-35 ಸಂಘಗಳ ಮೂಲಕ.ಆಗ 1.5ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಇಂದು 173 ಸಂಘಗಳು ಆಗಿವೆ. ಹಾಲು ಉತ್ಪಾದಕರಿಂದ 91 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದರು.
ನಂದಿಕ್ರಾಸ್ ಬಳಿ ಹಾಲಿನ ಮೆಗಾ ಡೈರಿ ಆರಂಭವಾಗುತ್ತಿದೆ. ಭವಿಷ್ಯದಲ್ಲಿ ಕೋಲಾರದಿಂದ ಚಿಕ್ಕಬಳ್ಳಾಪುರವನ್ನು ಪ್ರತ್ಯೇಕಿಸುವ ಆಸೆ ಕೂಡ ಕೆಎಂಎಫ್‌ಗೆ ಇದೆ.ಇದಕ್ಕೆ ಮೆಗಾ ಡೈರಿ ಯಶಸ್ಸು ಮಾನದಂಡವಾಗಲಿದೆ ಎಂದರು.
ಈ ಸಂದರ್ಭದಲ್ಲಿ  ಜಿ.ಪಂ. ಮಾಜಿ ಸದಸ್ಯ ಪಿ.ಎನ್. ಕೇಶವರೆಡ್ಡಿ, ಪೆರೆಸಂದ್ರ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಪ್ರವರ್ತಕ ಲಕ್ಷ್ಮೀನಾರಾಯಣ ರೆಡ್ಡಿ, ಮುಖಂಡ ರವೀಂದ್ರ ರೆಡ್ಡಿ, ಮಂಜುಳಾ ಮಂಜುನಾಥ್, ಪೆರೆಸಂಧ್ರ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.