ಕೋಲಾರ

ಸುದ್ದಿ ಸಂಕ್ಷೇಪ

Published On :

'ಅಭಿವೃದ್ಧಿ ಮಹಾಪೂರ'
ಕೋಲಾರ: ತಾಲೂಕಿನ ಶೆಟ್ಟಿಕೊತ್ತನೂರು ಮತ್ತು ಶೆಟ್ಟಿಗಾನಹಳ್ಳಿ ಗ್ರಾಮದಲ್ಲಿ ತಲಾ 23 ಲಕ್ಷ ವೆಚ್ಚದ ಸುವರ್ಣ ಗ್ರಾಮ ಯೋಜನೆಗೆ ಶಾಸಕ ವರ್ತೂರು ಪ್ರಕಾಶ್ ಸೋಮವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾಪೂರವೇ ಹರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮತದಾರರ ವಿಶ್ವಾಸ ಉಳಿಸಿಕೊಳ್ಳುವುದಾಗಿ ನುಡಿದರು. ಮುಖಂಡರಾದ ಬೆಗ್ಲಿ ಪ್ರಕಾಶ್, ರಘುರಾಂ, ತಾಪಂ ಉಪಾಧ್ಯಕ್ಷೆ ಸರಸ್ವತಿ, ಗ್ರಾಪಂ ಅಧ್ಯಕ್ಷೆ ಅಶ್ವತ್ಥಮ್ಮ ನಾರಾಯಣಸ್ವಾಮಿ, ವಕ್ಕಲೇರಿ ರಾಜಪ್ಪ, ಸದಸ್ಯರಾದ ಲಕ್ಷ್ಮಣ, ನಾರಾಯಣಸ್ವಾಮಿ, ಕನಕರಾಜ್, ಮುನಿರಾಜು, ಚಂದ್ರಣ್ಣ, ಗಂಗಣ್ಣ, ಪಾಪಣ್ಣ, ಹನುಮಂತಪ್ಪ, ಚಿನ್ನಪ್ಪ, ತಿಪ್ಪೇನಹಳ್ಳಿ ನಾಗೇಶ್, ಬೀರಮಾನಹಳ್ಳಿ ರಮೇಶ್ ಮತ್ತಿತರರು ಹಾಜರಿದ್ದರು.
ಎನ್‌ಡಿಎ ಅಧಿಕಾರಕ್ಕೆ ಖಚಿತ: ವೈ.ಸಂಪಂಗಿ
ಕೆಜಿಎಫ್: ಗುಜರಾತ್‌ನಲ್ಲಿ ಆಗಿರುವ ಅಭಿವೃದ್ಧಿ ಕಂಡು, ದೇಶದ ಜನರು ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಮಾಡುವ ಮೂಲಕ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಖಚಿತ ಎಂದು ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು. ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ ವೇಳೆ ಅವರು ಮಾತನಾಡಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಆಯ್ಕೆ ಮಾಡಿದ್ದು ಹಾಗೂ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ನಗರದ ಸೂರಜ್‌ಮುಲ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಿದರು. ಅದೇ ರೀತಿ ದೇಶದಲ್ಲಿ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ಹಲವಾರು ಬಾರಿ ಡೀಸೆಲ್, ಪೆಟ್ರೋಲ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದರಿಂದ ಸಾಮಾನ್ಯ ಬಡಕುಟುಂಬ ವರ್ಗದ ಜನತೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ದೇಶದ ಬಡವರ ಪರವಾದ ಅಭಿವೃದ್ಧಿಯಾಗಲಿ ಅಥವಾ ವಿವಿಧ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರೇಶ್ ನಾರಾಯಣ (ಕುಟ್ಟಿ), ಕಾರ್ಯದರ್ಶಿ ಬಾಟಾ ಗೋಪಾಲ್, ನಗರಸಭಾ ಸದಸ್ಯರಾದ ಅಶೋಕ್, ವಿಜಯಕುಮಾರ್, ನಟರಾಜನ್, ಬಿಜಿಎಂಎಲ್ ಕಾರ್ಮಿಕ ಒಕ್ಕೂಟ ಸಂಘದ ಮುಖಂಡ ಯಶ್ವಂತ್‌ರಾಜ್, ಮುಖಂಡರಾದ ಮೇಘನಾಥ್, ಮುನಿಸ್ವಾಮಿರೆಡ್ಡಿ, ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಬೆಂಬಲಿಗರು ಹಾಜರಿದ್ದರು.
ನರೇಂದ್ರ ಮೋದಿ ಜನ್ಮದಿನಾಚರಣೆ
ಮುಳಬಾಗಲು: ಪಟ್ಟಣದ ಸೌಂದರ್ಯ ಸರ್ಕಲ್ ಬಳಿ ನರೇಂದ್ರ ಮೋದಿ ಜನ್ಮದಿನಾಚರಣೆಯ ಅಂಗವಾಗಿ ಮೋದಿ ಅಭಿಮಾನಿಗಳ ಸಂಘದ ವತಿಯಿಂದ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಭಿಮಾನಿ ಸಂಘದ ಅಧ್ಯಕ್ಷ ನಂದಕಿಶೋರ್, ಕಾರ್ಯದರ್ಶಿಗಳಾದ ನರೇಂದ್ರ, ಶಿವು, ವಿಶ್ವನಾಥ್, ವಿಸ್ವಮಯ್, ರಾಜು, ಗಿರಿ, ಜೆ.ಸುಬ್ರಮಣ್ಯಂ ಮುಂತಾದವರು ಭಾಗವಹಿಸಿದ್ದರು.
ಇಂದು ತಿಪಟೂರಿಗೆ ಲೋಕಾಯುಕ್ತರ ಭೇಟಿ
ತಿಪಟೂರು: ನಗರದ ಪ್ರವಾಸಿ ಮಂದಿರಕ್ಕೆ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರು ಬುಧವಾರ ಭೇಟಿ ನೀಡಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಯಾವುದಾದರೂ ಇಲಾಖೆ ಅಥವಾ ಅಧಿಕಾರಿಯಿಂದ ವಿನಾಕಾರಣ ತಮ್ಮ ಕೆಲಸ ಕಾರ್ಯಗಳು ಆಗದೆ ತೊಂದರೆಗಳಿದ್ದಲ್ಲಿ ಮತ್ತು ಬೇರೆ ಕುಂದು ಕೊರತೆಗಳೇನಾದರೂ ಇದ್ದಲ್ಲಿ ಲೋಕಾಯುಕ್ತರಿಗೆ ಲಿಖಿತ ದೂರು ಸಲ್ಲಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಪಡೆಯಬಹುದಾಗಿದ್ದು, ಈ ಸಂದರ್ಭದವನ್ನು ಸದುಪಯೋಗಪಡಿಸಿಕೊಳ್ಳಲು ತಹಸೀಲ್ದಾರ್ ತಿಳಿಸಿದ್ದಾರೆ.
ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಒತ್ತಾಯ
ಕೋಲಾರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದರಿಂದ ಇರುವ ಪೈಪ್‌ಲೈನ್‌ಗಳನ್ನು ದುರಸ್ತಿಗೊಳಿಸಿ ಜನತೆ ಎದುರಿಸುತ್ತಿರುವ ತೊಂದರೆ ತಪ್ಪಿಸಬೇಕೆಂದು ನಗರಸಭೆಯ ಸದಸ್ಯರು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ.
ಸೋಮವಾರ ನಗರಸಭೆಯ ಸದಸ್ಯರು ಪಕ್ಷಾತೀತವಾಗಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ನೀರಿನ ಸಮಸ್ಯೆ ನಿವಾರಣೆ ಮಾಡುವಂತೆ ಆಗ್ರಹಿಸಿದರು.
ನೀರಿನ ಸಮಸ್ಯೆ ಇರುವ ರಸ್ತೆಗಳಲ್ಲಿ ಪೈಪ್‌ಲೈನ್ ಸರಿಪಡಿಸುವುದು, ಕೂಡಲೇ ಕೊಳವೆ ಬಾವಿ ಕೊರಿಸುವುದು, ಇರುವ ಕೊಳವೆ ಬಾವಿಗಳಲ್ಲಿನ ನೀರನ್ನು ಸಮರ್ಪಕವಾಗಿ ವಿತರಣೆ ಮಾಡಲು ಕೆಲವು ಕಡೆ ಗೇಟ್ ವಾಲ್ ಹಾಕಬೇಕೆಂದು ಸದಸ್ಯರು ಜಿಲ್ಲಾಧಿಕಾರಿ ಅವರನ್ನು ಕೋರಿದರು. ಪ್ರತಿ ವಾರ್ಡ್‌ನಲ್ಲಿ ಕನಿಷ್ಠ 2 ಶುದ್ಧ ನೀರಿನ ಘಟಕ ಸ್ಥಾಪಿಸುವುದು ಹಾಗೂ ಪ್ರತಿ ವಾರ್ಡ್‌ನಲ್ಲಿ ನೂತನವಾಗಿ ಓವರ್‌ಹೆಡ್ ಟ್ಯಾಂಕ್ ಅಥವಾ ನೀರು ಶೇಖರಣಾ ಕೇಂದ್ರಗಳನ್ನು ನಿರ್ಮಿಸಬೇಕೆಂದು ನಗರಸಭೆ ಸದಸ್ಯರು ಜಿಲ್ಲಾಧಿಕಾರಿ ಅವರನ್ನು ಕೋರಿದರು. ಸದಸ್ಯರ ಮನವಿ ಅಲಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ನಗರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಪೈಪ್‌ಲೈನ್‌ಗಳ ದುರಸ್ತಿಗೊಳಿಸುವಂತೆ ಸೂಚಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.