ಸುದ್ದಿ ಸಂಕ್ಷೇಪ
ಗೋಡೆ ಕುಸಿದು 6 ಕುರಿಗಳ ಸಾವು
ಚಿಂತಾಮಣಿ: ಇತ್ತೀಚೆಗೆ ಸುರಿದ ಮಳೆಗೆ ಗೋಡೆ ಕುಸಿದು 6 ಕುರಿಗಳು ಸ್ಥಳದಲ್ಲೇ ಮೃತಪಟ್ಟು ಇನ್ನು ಹಲವು ಕುರಿಗಳು ತೀವ್ರ ಗಾಯಗೊಂಡ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜುಂಜನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಜುಂಜನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಿದ್ದ ಮಳೆಯಿಂದ ಗ್ರಾಮದ ಪಾಪಮ್ಮ ಕೋಂ ನಾರಾಯಣಪ್ಪ ಎಂಬವರಿಗೆ ಸೇರಿದ ಕುರಿಗಳ ಸಾಕಾಣಿಕೆ ಮನೆಯ ಗೋಡೆ ಬಿದ್ದ ಪರಿಣಾಮ 6 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಹಲವು ಕುರಿಗಳು ತೀವ್ರ ಗಾಯಗೊಂಡಿವೆ ಎಂದು ರೈತ ತಿಳಿಸಿದ್ದಾನೆ.
ಪರಿಹಾರಕ್ಕೆ ಆಗ್ರಹ: ಜುಂಜನಹಳ್ಳಿ ಗ್ರಾಮದ ಬಡ ರೈತ ಪಾಪಮ್ಮ ಕೋಂ ನಾರಾಯಣಪ್ಪ ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ ಈತನಿಗೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಷ್ಟ ಪರಿಹಾರ ಕಲ್ಪಿಸಿಕೊಡಬೇಕೆಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ರಘುನಾಥರೆಡ್ಡಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶಪ್ಪ ಆಗ್ರಹಿಸಿದ್ದಾರೆ.
20ರಂದು ಒಳಾಂಗಣ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಚಾಲನೆ
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಹಾಗೂ ಜಿ.ಪಂ., ಚಿಕ್ಕಬಳ್ಳಾಪುರ ಜಿಲ್ಲೆ ವತಿಯಿಂದ ನೂತನ ಜಿಲ್ಲಾಡಳಿತ ಭವನ ಉದ್ಘಾಟನೆ, ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ, ಚಿಕ್ಕಬಳ್ಳಾಪುರದ ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಶಂಕುಸ್ಥಾಪನೆ ಹಾಗೂ ಚಿಂತಾಮಣಿ ಮಿನಿ ವಿಧಾನಸೌಧದ 1ನೇ ಮತ್ತು 2ನೇ ಮಹಡಿಯ ಶಂಕುಸ್ಥಾಪನೆಯನ್ನು ಸೆ. 20ರಂದು ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ನಂದಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು. ಶಾಸಕ ಡಾ.ಕೆ. ಸುಧಾಕರ್ ಅಧ್ಯಕ್ಷತೆ ಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಡಾ.ಎಂ. ವೀರಪ್ಪ ಮೊಯ್ಲಿ ಹಾಗೂ ಕೆ.ಹೆಚ್. ಮುನಿಯಪ್ಪ, ರಾಜ್ಯ ಸಚಿವರಾದ ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ವಿ. ಶ್ರೀನಿವಾಸ್ ಪ್ರಸಾದ್, ಅಂಬರೀಶ್, ಕೆ. ಅಭಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆ ಹಾಗೂ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಉಪಸಭಾಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ಭಾಗವಹಿಸಲಿದ್ದಾರೆ.
ನಿವೃತ್ತ ನೌಕರರಿಗೂ ಬಿಪಿಎಲ್ ಕಾರ್ಡ್ ನೀಡಲು ಆಗ್ರಹ
ಚಿಂತಾಮಣಿ: ಸರ್ಕಾರಿ ನಿವೃತ್ತ ನೌಕರರಿಗೂ ಬಿಪಿಎಲ್ ಕಾರ್ಡ್ ಸೌಲಭ್ಯ ಒದಗಿಸಬೇಕೆಂದು ನಿವೃತ್ತ ಸರ್ಕಾರಿ ನೌಕರರ ಸಂಘವು ಆಗ್ರಹಿಸಿದೆ. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಂಘದ ತಾಲೂಕು ಘಟಕದ ಮಾಸಿಕ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಕಾಗತಿ ವಿ.ವೆಂಕಟರತ್ನ ಮಾತನಾಡಿ, ಸಣ್ಣ- ಪುಟ್ಟ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಸರ್ಕಾರಿ ನೌಕರರಿಗೆ ಬರುವ ಪಿಂಚಣಿ ಹಣದಲ್ಲಿ ದುಬಾರಿ ದಿನಸಿ, ಔಷಧಿಗಳ ವೆಚ್ಚ, ಮನೆ ಬಾಡಿಗೆ ಇನ್ನಿತರೆ ಅಗತ್ಯ ವಸ್ತು ಖರೀದಿಸಿ ಜೀವನ ನಿರ್ವಹಿಸುವುದು ಕಷ್ಟಕರ. ಆದ್ದರಿಂದ ಸರ್ಕಾರವು ಈ ಬಗ್ಗೆ ಪರಿಶೀಲಿಸಬೇಕು ಎಂದರು. ಈ ವಿಷಯದ ಬಗ್ಗೆ ರಾಜ್ಯ ಸಂಘದ ಸಭೆಯಲ್ಲೂ ಪ್ರಸ್ತಾಪಿಸುವುದಾಗಿ ತಿಳಿಸಿದರಲ್ಲದೆ, ಸಂಘದ ಎಲ್ಲಾ ಘಟಕಗಳೂ ಈ ಬಗ್ಗೆ ಧ್ವನಿಯೆತ್ತಬೇಕೆಂದು ಕೋರಿದರು. ಸಂಘಟಿತ ಹೋರಾಟದಿಂದ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯವೆಂದು ಅಭಿಪ್ರಾಯ ಪಟ್ಟರು. ನಿವೃತ್ತ ವೈದ್ಯಾಧಿಕಾರಿ ಡಾ. ಎಲ್.ಆರ್. ವರದರಾಜನ್ ಕ್ಷಯ ರೋಗ, ಎಚ್ಐವಿ, ಮಧುಮೇಹ, ರಕ್ತದೊತ್ತಡ ಮುಂತಾದ ಕಾಯಿಲೆಗಳ ಕುರಿತು ವಿವರಿಸಿ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಶಿಕ್ಷಕರಾದ ಕಡದನಮರಿ ರೆಡ್ಡೆಪ್ಪಚಾರ್, ನಿವೃತ್ತ ಉಪನ್ಯಾಸಕ ಶ್ರೀರಾಮಮೂರ್ತಿ, ಸಂಘದ ಉಪಾಧ್ಯಕ್ಷ ಸತ್ಯಕೀರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

