ಚಿಕ್ಕಬಳ್ಳಾಪುರಕ್ಕೆ ರು. 30 ಕೋಟಿ ಹಣ
ಚಿಕ್ಕಬಳ್ಳಾಪುರ: ನಗರೋತ್ಥಾನ ಯೋಜನೆ ಅಡಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ರು. 30 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಚರಂಡಿ, ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಇನ್ನೆರಡು ವಾರದಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ. ಈ ಮೂಲಕ ಈ ಭಾಗದ ಜನರ ಬಹುದಿನದ ಕನಸು ನನಸಾಗಲಿದೆ ಎಂದು ಶಾಸಕ ಡಾ. ಕೆ. ಸುಧಾಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕನಾಗುವ ಮುನ್ನ ನಾನೊಬ್ಬ ವೈದ್ಯ. ಹಾಗಾಗಿ ಶುಚಿತ್ವದ ಕಡೆಗೆ ಗಮನ ನೀಡುವುದು ನನ್ನ ಆದ್ಯ ಕರ್ತವ್ಯ. ಆದ ಕಾರಣ ಇಡೀ ಕ್ಷೇತ್ರಾದ್ಯಂತ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶೌಚಾಲಯ ನಿರ್ಮಾಣಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿ ರು. 20 ಸಾವಿರ ಗ್ರಾಮೀಣ ಭಾಗದಲ್ಲಿ ರು. 10 ಸಾವಿರ ಸಹಾಯಧನ ನೀಡಲಾಗುತ್ತಿದೆ. ಜನ ಇದರ ಸದುಪಯೋಗ ಪಡೆಯಬೇಕು ಮತ್ತು ಅಧಿಕಾರಿಗಳು ಈ ಕುರಿತು ಜಾಗೃತಿ ಮೂಡಿಸಬೇಕು. ಇದನ್ನೊಂದು ಅಭಿಯಾನದ ರೂಪದಲ್ಲಿ ಪ್ರಚಾರಪಡಿಸಬೇಕೆಂದು ತಿಳಿಸಿದರು.
ತಾಲೂಕಿನ 10 ಕೆರೆಗಳ ಅಭಿವೃದ್ಧಿಗೆ ತಲಾ ರು. 10 ಕೋಟಿಯಂತೆ ರು. 100 ಕೋಟಿ ಕೆರೆ ಅಭಿವೃದ್ಧಿಗೆ ಬಜೆಟ್ನಲ್ಲಿ ಘೋಷಿಸಲಾಗಿದೆ. ಎಸ್.ಎಂ. ಕೃಷ್ಣ ಅವರು ತಮ್ಮ ರಾಜ್ಯಸಭೆ ಅನುದಾದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ರು. 2 ಕೋಟಿ ನೀಡಿದ್ದಾರೆ. ಈ ಹಣದಿಂದ ಹಲವು ಅಭಿವೃದ್ಧಿ ಕಾರ್ಯ ಕ್ಷೇತ್ರದಲ್ಲಿ ಆಗಲಿವೆ. ಕ್ರೀಡಾಂಗಣದಲ್ಲಿ ತೆರೆದ ಜಿಮ್ ಹೊಸವರ್ಷದಿಂದ ಕಾರ್ಯಾರಂಭ ಮಾಡಲಿದೆ. ಇದಲ್ಲದೇ ಜಿಲ್ಲಾ ಕ್ರೀಡಾಂಗಣಕ್ಕೆ ಹೊಸ ರೂಪ ಕೊಡುವ ಹಲವು ಕಾರ್ಯಗಳು ಆಗಲಿವೆ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆ ಕುರಿತ ಪ್ರಶ್ನೆಗೆ, ನನಗೆ ವರ್ಗಾವಣೆಯಲ್ಲಿ ನಂಬಿಕೆ ಇಲ್ಲ. ಅಧಿಕಾರಿಗಳು ಯಾರೇ ಇರಲಿ ಅವರಿಂದ ಕೆಲಸ ತೆಗೆಸಿಕೊಳ್ಳುವ ಚಾಕಚಕ್ಯತೆ ಜನಪ್ರತಿನಿಧಿಗಳಿಗೆ ಇರಬೇಕು. ನಾನು ಅದರಲ್ಲಿ ನಂಬಿಕೆ ಇಟ್ಟವನು. ಅದೇ ರೀತಿ ಮುಂದುವರಿಯುತ್ತೇನೆ ಎಂದರು.
ನಗರದ ಹಲವೆಡೆ ಸರ್ಕಾರಿ ಜಾಗವನ್ನು ಕೆಲವರು ಅತಿಕ್ರಮ ಮಾಡಿಕೊಂಡಿದ್ದಾರೆ ಎಂಬ ದೂರು ಕೇಳಿಬಂದಾಗ ಪ್ರತಿಕ್ರಿಯೆ ನೀಡಿದ ಶಾಸಕರು, ಈ ಬಗ್ಗೆ ಸ್ಪಷ್ಟ ಹಾಗೂ ಲಿಖಿತ ರೂಪದ ದೂರು ಬಂದಾಗ ಕ್ರಮ ಕೈಗೊಳ್ಳುತ್ತೇವೆ. ಇಂದು ನಡೆಸಿದ ಎರಡನೇ ದಿನದ ನಗರ ಪ್ರದಕ್ಷಿಣೆ ವೇಳೆ ಆರನೇ ವಾರ್ಡಿನಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ದೂರು ಕೇಳಿಬಂತು. ತಕ್ಷಣ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದೆ. ಪಾರದರ್ಶಕವಾಗಿ ಈ ರೀತಿಯ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಜಾಗ ಅಥವಾ ಹಣದ ಕೊರತೆ ಇಲ್ಲ. ಆದರೆ ನಿರ್ವಹಣೆ ದೊಡ್ಡ ತಲೆನೋವಾಗಿದೆ. ಇದಕ್ಕಾಗಿ ಶೌಚಾಲಯ ನಿರ್ಮಾಣ ಆಗುತ್ತಿಲ್ಲ. ತೊಡಕು ಎದುರಾಗಿದೆ ಎಂದರು. ಕ್ಷೇತ್ರ ವ್ಯಾಪ್ತಿಯಲ್ಲಿ 22 ಕೊಳವೆ ಬಾವಿ ಕೊರೆಸಲು ಅನುದಾನ ಬಿಡುಗಡೆ ಆಗಿದೆ. ಇದರಲ್ಲಿ 8 ನ್ನು ನಗರದಲ್ಲಿ ಈಗಾಗಲೇ ಕೊರೆಸಲಾಗಿದೆ ಎಂದು ವಿವರಿಸಿದರು. ನಗರದ 31 ವಾರ್ಡಿಗಳಿಗೆ ನೀರು ಸರಬರಾಜು ಮಾಡುವ ಯೋಜನೆಗೆ ರು. 11 ಕೋಟಿ ಬಿಡುಗಡೆ ಆಗಿದೆ. ಕೆಲವೇ ದಿನಗಳಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ಪೌರಾಯುಕ್ತ ರುದ್ರಮುನಿ, ನಗರಸಭೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

