ವೃದ್ಧನ ಕೂಡಿ ಹಾಕಿದ ವಕೀಲ
ಚಿಕ್ಕಬಳ್ಳಾಪುರ: ವಕೀಲರೊಬ್ಬರಿಂದ ಅಕ್ರಮವಾಗಿ ಬಂಧನಕ್ಕೆ ಗುರಿಯಾಗಿ ತೀರಾ ನಿತ್ರಾಣ ಸ್ಥಿತಿಯಲ್ಲಿದ್ದ ವೃದ್ಧನನ್ನು ಅಧಿಕಾರಿಗಳು ಶುಕ್ರವಾರ ಪಾರು ಮಾಡಿದ್ದಾರೆ.
ತಾಲೂಕಿನ ಗವಿಗಾನಹಳ್ಳಿಯಲ್ಲಿ ಗೊಲ್ಲ ಜನಾಂಗಕ್ಕೆ ಸೇರಿದ್ದ ವೃದ್ಧ ಮುನಿಯಪ್ಪ (68) ಇದೀಗ ಅಕ್ರಮ ಬಂಧನದಿಂದ ಮುಕ್ತರಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗ ಅಸ್ವಸ್ಥ ಸ್ಥಿತಿಯಲ್ಲಿರುವ ಮುನಿಯಪ್ಪ ಕಳೆದ ಕೆಲ ವರ್ಷಗಳಿಂದಲೂ ಅದೇ ಗ್ರಾಮದ ವಕೀಲ ನರಸಿಂಹಚಾರಿ ಎಂಬವರ ಕೃಷಿ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ ವೃದ್ಧನಿಗೆ ಸೇರಿರುವ 2 ಎಕರೆ ಜಮೀನಿನ ಮೇಲೆ ಕಣ್ಣು ಹಾಕಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ನರಸಿಂಹಚಾರಿ ಯತ್ನಿಸುತ್ತಿದ್ದರು ಎನ್ನಲಾಗಿದೆ. ಇದರ ಭಾಗವಾಗಿ ಕಳೆದ ಕೆಲ ತಿಂಗಳುಗಳಿಂದ ಮುನಿಯಪ್ಪರವರನ್ನು ತಮ್ಮ ತೋಟದ ಪಂಪ್ ಹೌಸ್ನಲ್ಲಿ ಕೂಡಿಟ್ಟು ಸರಿಯಾದ ಸಮಯಕ್ಕೆ ಊಟ, ನೀರು ಕೊಡದೇ ಸತಾಯಿಸುತ್ತಿದ್ದರು. ವೃದ್ಧನ ಪತ್ನಿ ಮುನಿಯಮ್ಮ ಮತ್ತು ಸಂಬಂಧಿಕರು ಹೋಗಿ ಕೇಳಿದಾಗಲೆಲ್ಲಾ ಬೆದರಿಸಿ ವಾಪಸ್ ಕಳುಹಿಸುತ್ತಿದ್ದರು. ಇದರಿಂದ ವೃದ್ಧನ ಸಂಬಂಧಿಕರು ಅಕ್ರಮ ಬಂಧನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ತಹಸೀಲ್ದಾರ್ ನಟೇಶ್ ಮತ್ತು ಪೊಲೀಸರು ಕಾರ್ಯಾಚರಣೆ ಕೈಗೊಂಡಾಗ ವಕೀಲರಿಗೆ ಸೇರಿದ ತೋಟದ ಪಂಪ್ ಹೌಸ್ನಲ್ಲಿ ಮುನಿಯಪ್ಪ ಊಟ ನೀರಿಲ್ಲದೇ ನಿತ್ರಾಣ ಸ್ಥಿತಿಯಲ್ಲಿ ಕಂಡು ಬಂದಿದ್ದು ತಕ್ಷಣ ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೆದರಿದ ಕೂದಲು, ಉದ್ದವಾಗಿ ಬೆಳೆದ ಗಡ್ಡ, ಕೈ ಕಾಲು ಅಲುಗಾಡಿಸಲು ನಿಶ್ಯಕ್ತಿ, ಸರಿಯಾಗಿ ಆಹಾರವಿಲ್ಲದೇ ಬೆನ್ನಿಗೆ ಅಂಟಿಕೊಂಡಂತೆ ಒಳಗೆ ಹೋಗಿದ್ದ ಹೊಟ್ಟೆ, ಮಾತನಾಡಲು ತೊಂದರೆ, ಸಂಕಟ ಹೇಳಿಕೊಳ್ಳಲು ಕಷ್ಟ ಎಂಬ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಮುದುಕ ಮುನಿಯಪ್ಪನನ್ನು ನೋಡಿದರೆ ಕರಳು ಚುರುಕ್ ಎನ್ನುತ್ತಿತ್ತು. ನೆರೆದಿದ್ದ ಜನರೆಲ್ಲಾ ವಕೀಲ ನರಸಿಂಹಚಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಯೋ ವೃದ್ಧರೆಂಬ ಕರುಣೆಯಿಲ್ಲದೇ ಅಕ್ರಮವಾಗಿ ತಮ್ಮ ಗಂಡನನ್ನು ಬಂಧನದಲ್ಲಿರಿಸಿದ್ದು ತಮಗೆ ಸೇರಿದ 2 ಎಕರೆ ಜಮೀನನ್ನು ವಕೀಲರ ನರಸಿಂಹಾಚಾರಿ ತಮ್ಮ ಹೆಸರಿಗೆ ಬರೆಸಿಕೊಂಡು ಮೋಸ ಮಾಡಿದ್ದಾರೆ ಎಂದು ವೃದ್ಧನ ಪತ್ನಿ ಮುನಿಯಮ್ಮ ದೂರು ನೀಡಿದ್ದಾರೆ.
ತಹಸೀಲ್ದಾರ್ ಹೇಳಿಕೆ: ದೂರಿನ್ವಯ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ವೃದ್ಧ ಮುನಿಯಪ್ಪ ನಿತ್ರಾಣ ಸ್ಥಿತಿಯಲ್ಲಿ ಗ್ರಾಮದ ತೋಟದ ಪಂಪ್ ಹೌಸ್ನಲ್ಲಿದ್ದರು. ಈಗ ಅವರನ್ನು ರಕ್ಷಿಸಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮೊದಲು ಚೇತರಿಸಿಕೊಳ್ಳಬೇಕು. ನಂತರ ಆವರಿಂದ ಹೇಳಿಕೆ ಪಡೆದುಕೊಳ್ಳಲಾಗುವುದು. ಜೀತ ಕಾರ್ಮಿಕರಾಗಿ ಕೆಲಸಕ್ಕಿಟ್ಟುಕೊಂಡು ದುಡಿಸಿಕೊಳ್ಳಲಾಗುತ್ತಿತ್ತೇ ಎನ್ನುವುದರ ಬಗ್ಗೆ ತಿಳಿಯಬೇಕಾಗಿದೆ. ಸದ್ಯ ಅಕ್ರಮವಾಗಿ ವೃದ್ಧನನ್ನು ಗೃಹ ಬಂಧನದಲ್ಲಿಟ್ಟಿರುವುದಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ನಟೇಶ್ ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

