ಅಪಾಯದ ಅಂಚಿನಲ್ಲಿ ಕೋಡಿಕಣ್ಣೂರು ಕೆರೆ ಏರಿ
ಕೋಲಾರ: ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಕೋಡಿಕಣ್ಣೂರು ಕೆರೆ ಏರಿಯು ಕೊರಕಲಿನಿಂದ ಅಪಾಯದ ಅಂಚಿಗೆ ತಲುಪಿದೆ. ಕೋಲಾರದಿಂದ ಚಿಂತಾಮಣಿ, ಶ್ರೀನಿವಾಸಪುರಕ್ಕೆ ಈ ಕೆರೆ ಏರಿಯ ಮೇಲೆ ನಿರ್ಮಿಸಿರುವ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಲಘು ವಾಹನಗಳಲ್ಲದೆ ಭಾರೀ ವಾಹನಗಳಾದ ಲಾರಿ, ಬಸ್, ಟ್ಯಾಂಕರ್, ಟ್ರ್ಯಾಕ್ಟರ್‌ಗಳು ಸಹ ಓಡಾಡುವುದರಿಂದ ಕೆರೆಯ ಏರಿಯ ಮೇಲಿನ ರಸ್ತೆಗೆ ಸೂಕ್ತವಾದ ರಕ್ಷಣೆ ಒದಗಿಸುವುದು ಸಂಬಂಧಪಟ್ಟ ನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿಯ ಹೊಣೆ. ಇತ್ತೀಚಿನ ದಿನಗಳಲ್ಲಿ ಕೋಡಿಕಣ್ಣೂರು ಕೆರೆಯ ಏರಿಯ ಮೇಲಿನ ರಸ್ತೆಯಲ್ಲಿ ಶಾಲಾ-ಕಾಲೇಜುಗಳ ವಾಹನಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ವಿದ್ಯಾರ್ಥಿಗಳ ಜೀವನಕ್ಕೆ ರಕ್ಷಣೆ ಮಾಡುವುದು ಸಂಬಂಧಪಟ್ಟವರ ಕರ್ತವ್ಯ.
ಕೆರೆಯ ಏರಿಯ ಅಜುಬಾಜುಗಳಲ್ಲಿ ಕೊರೆತ ಹೆಚ್ಚಾಗಿ ಭೂಮಿ ಸೀಳಿಕೊಂಡು ಮೃತ್ಯುಕೂಪವಾಗಿ ಪರಿಣಮಿಸಿದೆ. ಕೋಲಾರ ನಗರ ಮತ್ತು ಸುತ್ತಮುತ್ತಲ ಪ್ರದೇಶದ ಜನರು ಹಳೆ ಕಟ್ಟಡದ ತ್ಯಾಜ್ಯಗಳನ್ನು ಈ ಕೊರಕಲು ಜಾಗದಲ್ಲಿ ತುಂಬುವ ಬದಲು ಕೋಡಿಕಣ್ಣೂರು ಕೆರೆಯಲ್ಲಿ ಸುರಿಯುವ ಮೂಲಕ ಕೆರೆಯ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ.
ಶಿಥಲಗೊಂಡಿರುವ ಏರಿ: ಈಗಾಗಲೇ ಸದರಿ ಕೆರೆ ಏರಿಯ ಮೇಲಿನ ರಸ್ತೆಯಲ್ಲಿ ಹತ್ತಾರು ಅಪಘಾತಗಳು ಸಂಭವಿಸಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದ ಕೆರೆ ಏರಿ ಇನ್ನಷ್ಟು ಶಿಥಿಲಗೊಂಡಿದೆ. ಕೋಡಿಕಣ್ಣೂರು ಕೆರೆಯ ಒತ್ತುವರಿ ತೆರುವುಗೊಳಿಸಲು, ಕೆರೆಯಲ್ಲಿ ವೈಜ್ಞಾನಿಕವಾಗಿ ಮಣ್ಣು ತೆಗೆಯುತ್ತಿರುವುದನ್ನು ಹಾಗೂ ಮರಳು ಫಿಲ್ಟರ್ ದಂಧೆ ತಡೆಯಲು ವಿಫಲವಾಗಿರುವ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆ ಏರಿಯ ಮೇಲಿನ ರಸ್ತೆಯನ್ನು ಸುಸ್ಥಿತಿಯಲ್ಲಿ ಇಟ್ಟು ಅಪಘಾತಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ.
ಸೂಚನಾ ಫಲಕಗಳಿಲ್ಲ: ರಸ್ತೆ ಕಿರಿದಾಗಿರುವುದರಿಂದ ವಾಹನಗಳು ಓಡಾಡುವುದಕ್ಕೆ ಸಮಸ್ಯೆಯಾಗಿದೆ. ಏರಿಯ ಮೇಲೆ ಯಾವುದೇ ಸೂಚನಾ ಘಲಕಗಳನ್ನು ಅಳವಡಿಸಿಲ್ಲ. ರಾತ್ರಿ ವೇಳೆ ವಿದ್ಯುತ್ ಇಲ್ಲದೆ ಏರಿಯ ಮೇಲೆ ಪಾದಚಾರಿಗಳು ನೆಮ್ಮದಿಯಿಂದ ನಡೆದುಕೊಂಡು ತಮ್ಮ ಮನೆಗಳನ್ನು ಸೇರುವುದಕ್ಕೂ ಕಷ್ಟವಾಗಿದೆ.
ನೀರಾವರಿ ಇಲಾಖೆಯವರು ಕೂಡಲೇ ಕೋಡಿಕಣ್ಣೂರು ಕೆರೆ ಏರಿಯ ರಸ್ತೆಯನ್ನು ದುರಸ್ತಿಗೊಳಿಸುವುದರ ಜತೆಗೆ ಅಪಾಯಕಾರಿ ಕೊರಕಲುಗಳನ್ನು ಮುಚ್ಚಿ ಜನತೆಯ ಪ್ರಾಣ ಉಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

