ಆಸ್ಪತ್ರೆ, ಹಾಸ್ಟೆಲ್ ನಿರ್ವಹಣೆ; ಡಿಸಿ ಅಸಮಾಧಾನ
ಮುಳಬಾಗಿಲು: ಕೋಲಾರ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಪಟ್ಟಣದ ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ ಹಲವಾರು ಸಂಘ- ಸಂಸ್ಥೆಗಳಿಂದ ಮನವಿ ಪತ್ರ ಸ್ವೀಕರಿಸಿ, ತಾಲೂಕು ಕಚೇರಿಯ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿದರು.
ನಂತರ ನೇರವಾಗಿ ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ದುರವಸ್ಥೆಗೆ ಅಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ರೋಗಿಗಳು ಪರದಾಡಬೇಕಾಗಿದೆ. ಶುಚಿತ್ವವಿಲ್ಲದಿರುವ ಕಾರಣ ಆಸ್ಪತ್ರೆಯ ತುಂಬ ಗೊಬ್ಪು ನಾತ ಹೊಡೆಯುತ್ತಿರುವುದು ಕಂಡು ಬಂದಿತು. ತಕ್ಷಣ ಶುಚಿತ್ವ ಕಾಪಾಡಲು ಕ್ರಮ ತೆಗೆದುಕೊಂಡು ಕುಡಿಯುವ ನೀರಿನ ವ್ಯವಸ್ಧೆಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
ಸಚ್ಛತೆ ಕಾಪಾಡದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಎಕ್ಸ್ ರೇ ಕೇಂದ್ರ ಪ್ರಾರಂಭಿಸಿ ತಜ್ಞರನ್ನು ನೇಮಿಸಿಲು ಸೂಚಿಸಿದರು. ಆಸ್ಪತ್ರೆಯ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನಿಲುಗಡೆ ವಾಹನಗಳಿಗೆ ದಂಡ ವಿಧಿಸಲು ಪೊಲೀಸರಿಗೆ ಸೂಚಿಸಿದರು.
ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶೌಚಾಲಯ ಹಾಗೂ ನೀರಿನ ಸೌಕರ್ಯವಿದ್ದರೂ ನಿಲಯ ಪಾಲಕಿ ಕಸ್ತೂರಿಬಾಯಿ ಅದನ್ನು ಸರಿಪಡಿಸಿ ಉಪಯೋಗಕ್ಕೆ ನೀಡದ ಕಾರಣ ಬಾಲಕರು ಬಯಲು ಮಲ ವಿಸರ್ಜನೆಗೆ ತೊಡಗಬೇಕಿದ್ದು, ನಿಲಯದ ಆವರಣ ಸ್ವಚ್ಛತೆಯಿಲ್ಲದೇ ದುರ್ವಾಸನೆ ಉಂಟಾಗಿರುವುದನ್ನು ಕಂಡು ಕಿಡಿಕಾರಿದರು.
ಆಹಾರ ಉಗ್ರಾಣದ ಬಾಗಿಲು ತೆಗೆಯಲು ನಿಲಯ ಪಾಲಕಿಗೆ ಸೂಚಿಸಿದಾಗ, ಅಡುಗೆಯವರು ಬೀಗದ ಕೈ ತೆಗೆದುಕೊಂಡು ಹೋಗಿದ್ದಾರೆಂದು ನಿಲಯದ ಪಾಲಕಿ ನುಡಿದರು. ತೀವ್ರವಾದ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಗೈರು ಹಾಜರಾಗಿದ್ದು ಕಂಡು ಬಂದಿತು. ನಂತರ ಪ್ರವಾಸಿ ಮಂದಿರದ ಬಳಿ ಸಂಗ್ರಹಿಸಲಾದ ಅಕ್ರಮ ಮರಳನ್ನು ಹರಾಜು ಮೂಲಕವಾಗಿ ಮಾರಾಟ ಮಾಡಲು ಸೂಚಿಸಿದರು. ತಾಲೂಕಿನ ಅವಣೆ ಗ್ರಾಮದ ನಾಡ ಕಚೇರಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

