ಕೋಡಿಕಣ್ಣೂರು ಕೆರೆ ಕಾಯಕಲ್ಪಕ್ಕೆ ಮೀನಮೇಷ
ಕನ್ನಡಪ್ರಭ ವಾರ್ತೆ, ಕೋಲಾರ, ಸೆ.29
ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೆರೆಗಳಲ್ಲಿ ಒಂದಾದ ಕೋಡಿಕಣ್ಣೂರು ಕೆರೆಯನ್ನು ಅಭಿವೃದ್ಧಿ ಪಡಿಸುವುದಿರಲಿ ರಕ್ಷಣೆ ಮಾಡುವುದಕ್ಕೆ ಸಂಬಂಧಪಟ್ಟ ಇಲಾಖೆಯವರು ಬದ್ಧತೆ ತೋರದಿರುವುದರಿಂದ ಕೆರೆಯ ಕಾಯಕಲ್ಪಕ್ಕೆ ಹಿನ್ನಡೆ ಉಂಟಾಗಿದೆ.
ಕೋಲಾರ-ಚಿಂತಾಮಣಿ-ಶ್ರೀನಿವಾಸಪುರಕ್ಕೆ ಹೋಗುವ ಮಾರ್ಗದಲ್ಲಿರುವ ಕೋಡಿಕಣ್ಣೂರು ಕೊಡಗಿಕೆರೆ ನಗರದಿಂದ ಸುಮಾರು 2.06 ಕಿಮೀ ಸಮೀಪದಲ್ಲಿರುವ ಕೆರೆಯಾಗಿದೆ. ಪಾಲಾರ್ ನದಿ ಪಾತ್ರಕ್ಕೆ ಸೇರಿದ ಈ ಕೆರೆಯು 57.60 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿತ್ತು. 13.04 ಹೆಕ್ಟೇರ್ ನೀರು ಶೇಖರಣೆ ಪ್ರದೇಶವಾಗಿತ್ತು. ಆದರೀಗ ರಾಜಕಾರಣಿಗಳ ಕುಮ್ಮಕ್ಕು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನತೆಗೆ ಕೆರೆಯನ್ನು ಉಳಿಸಿಕೊಳ್ಳುವುದಕ್ಕೆ ಕಾಳಜಿ ಇಲ್ಲದಿರುವುದರಿಂದ ಶೇ. 30 ಕೆರೆಯನ್ನು ಅನೇಕರು ಒತ್ತುವರಿ ಮಾಡಿಕೊಂಡು ಕೆರೆಯನ್ನು ಅಸ್ಥಿಪಂಜರವನ್ನಾಗಿಸಿದ್ದಾರೆ.
ಕೆರೆ ಉಳಿಸಲು ಇಚ್ಛಾಶಕ್ತಿ ಅಗತ್ಯ: ಇದರಿಂದಾಗಿ 2005 ರಿಂದ ಇವರೆಗೆ ಕೋಡಿಕಣ್ಣೂರು ಕೆರೆ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಮಳೆ ಬಂದರೂ ಭರ್ತಿಯಾಗಿಲ್ಲ. ವಿಚಿತ್ರ ಸ್ವರೂಪ, ಅಕಾರ ಹೊಂದುತ್ತಿರುವ ಕೆರೆಗೆ ಕಾಯಕಲ್ಪ ನೀಡಲು ನೀರಾವರಿ ಇಲಾಖೆಯು ಗಮನ ನೀಡುತ್ತಿಲ್ಲ. ಶಾಶ್ವತ ನೀರಾವರಿಗಾಗಿ ರಸ್ತೆಗಿಳಿದು ಹೋರಾಡಿದವರು ಸಹ ಕೋಡಿಕಣ್ಣೂರು ಕೆರೆ ಮಾತ್ರವಲ್ಲ ನಗರದ ಅಮ್ಮೇರಹಳ್ಳಿ ಕೆರೆ ಮತ್ತು ಕೋಲಾರಮ್ಮ ಕೆರೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಹೋರಾಟ ನಡೆಸಲು ಸಾಧ್ಯವಾಗಿಲ್ಲ.
ಕೋಡಿಕಣ್ಣೂರು ಕೆರೆಯಲ್ಲಿ ಕೋಲಾರ ನಗರಸಭೆಯಿಂದ ಕುಡಿಯುವ ನೀರಿಗಾಗಿ 9 ಕೋಳವೆ ಬಾವಿಗಳನ್ನು ಕೊರೆಸಲಾಗಿತ್ತು. ಈ ಪೈಕಿ ಈಗ ಕೇವಲ ಮೂರು ಕೊಳವೆ ಬಾವಿಗಳಲ್ಲಿ ಮಾತ್ರ ಅಲ್ಪ-ಸ್ವಲ್ಪ ನೀರು ಸಿಗುತ್ತಿದೆ. ಮಳೆಯಿಲ್ಲದೆ ಮತ್ತು ಕೆರೆಯು ಅಭಿವೃದ್ಧಿ ಕಾಣದಿರುವುದರಿಂದ ಅಂತರ್ಜಲ ಬತ್ತಿ ಹೋಗಿದೆ. ಕೆರೆಯು ಪೂರ್ತಿ ಕಬಳಿಕೆ ಆಗುವ ಮುನ್ನ ಅಧಿಕಾರಿಗಳು ಕೆರೆಯನ್ನು ಸರ್ವೆ ಮಾಡಿಸಿ ಇರುವ ಅಚ್ಚುಕಟ್ಟು ಪ್ರದೇಶವನ್ನು ಭದ್ರಪಡಿಸಲು ಇಚ್ಛಾಶಕ್ತಿ ತೋರಬೇಕಾಗಿದೆ.
ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರುವ ಮುನ್ನ ಕೋಡಿಕಣ್ಣೂರು ಕೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ಕೆರೆಗಳ ಸಮಗ್ರ ಅಭಿವೃದ್ಧಿ ಪಡಿಸದಿದ್ದರೆ ಜನತೆಗೆ ನೀರು ಕೊಡುವುದಕ್ಕೆ ಕಷ್ಟವಾಗುತ್ತದೆ.
ಪ್ರಾಧಿಕಾರ ರಚನೆಯಾಗಲಿ: ರಾಜ್ಯ ಸರ್ಕಾರ ಕೆರೆಗಳ ಅಭಿವೃದ್ಧಿಗಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಇದು ಕಾರ್ಯರೂಪಕ್ಕೆ ವಿಳಂಬವಾಗುತ್ತಿದೆ. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒತ್ತಾಯ ತರುವ ಮೂಲಕ ಕನಿಷ್ಠ ಮುಂದಿನ ಮಳೆಯ ವೇಳೆಗೆ ಕೆರೆಗಳು ಸುಸ್ಥಿತಿಯಲ್ಲಿ ಇರುವಂತೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತರದೆ ಹೋದರೆ ಸರ್ಕಾರದ ಉದ್ದೇಶ ಈಡೇರುವುದಿಲ್ಲ. ಜನತೆಗೆ ಶುದ್ಧವಾದ ನೀರು ಒದಗಿಸುವ ಘೋಷಣೆ ಘೋಷಣೆಯಾಗಿಯೇ ಉಳಿಯುತ್ತದೆ.
ಕೋಡಿಕಣ್ಣೂರು ಕೆರೆಯ ಸರ್ವೆ ಕಾರ್ಯ ಬೇಗನೆ ಮುಗಿಸಬೇಕು, ಇದಕ್ಕಾಗಿ ಸಂಘ ಸಂಸ್ಥೆಗಳು ಅಧಿಕಾರಿಗಳ ಮೇಲೆ ಒತ್ತಡ ತರಬೇಕು. ಒತ್ತುವರಿ ತೆರವು ಕಾರ್ಯಕ್ಕೆ ಅಡ್ಡಿಯಾಗದಂತೆ ಜಿಲ್ಲಾ ಆಡಳಿತಕ್ಕೆ ಸಮಸ್ತ ಜನತೆ ಸಹಕಾರ ನೀಡಬೇಕು, ಕೆರೆಯ ಸುತ್ತಲು ಬೇಲಿ ಹಾಕಿಸಿ ಅಕ್ರಮ ಪ್ರವೇಶ ತಡೆಯಬೇಕೆಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ಕಸ-ಕಡ್ಡಿಗಳ ತಾಣ
ಕೆರೆಯ ನಡುಗದ್ದೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ, ಇಟ್ಟಿಗೆ ಗೂಡಿಗೆ ಮಣ್ಣು ತೆಗೆಯುವ ನೆಪದಲ್ಲಿ ಕೆರೆಯನ್ನು ಅವೈಜ್ಞಾನಿಕವಾಗಿ ಅಗೆದು ಬಗೆದು ವಿರೋಪಗೊಳಿಸಿದ್ದಾರೆ.
ಮರಳು ಮಾಫಿಯಾದವರು ಕೆರೆಯನ್ನು ಬಗೆದು ದೊಡ್ಡ ಕಂದಕಗಳನ್ನಾಗಿ ಪರಿವರ್ತಿಸಿದ್ದಾರೆ. ಸ್ವಚ್ಛತೆಗೆ ಸೂಕ್ತ ಜಾಗ ಹುಡುಕಲು ವಿಫಲರಾಗಿರುವ ನಗರಸಭೆಯವರು ಕೋಡಿಕಣ್ಣೂರು ಕೆರೆಯನ್ನು ಘನತ್ಯಾಜ್ಯ ವಿಲೇವಾರಿಗೆ ಬಳಕೆ ಮಾಡಿಕೊಂಡು ಕೆರೆಯ ಪಾವಿತ್ರ್ಯತೆ ಹಾಳು ಮಾಡಿದ್ದಾರೆ.
2005ರಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಕೋಡಿಕಣ್ಣೂರು ಭರ್ತಿಯಾಗಿ ಕೋಡಿ ಹೋಗಿತ್ತು. ಕೆರೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದವರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡು ಕೆರೆಯ ಒತ್ತುವರಿ ತೆರುವುಗೊಳಿಸಿ ಕೆರೆಯ ಸಂರಕ್ಷಣೆ ಮಾಡಲು ದಿಟ್ಟ ಹಜ್ಜೆ ಇಡಬೇಕಾಗಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒತ್ತುವರಿದಾರರ ಮೇಲೆ ಸಹಾನುಭೂತಿ ವ್ಯಕ್ತಪಡಿಸಿ ಕೆರೆಯ ಕೋಡಿಯನ್ನು ಒಡೆದು ಹಾಕಿಸಿ ಕೆರೆಯಲ್ಲಿ ಒಂದು ಬೋಗಸೆ ನೀರು ಇಲ್ಲದಂತೆ ಖಾಲಿ ಮಾಡಿಸಿದರೆ ಹೊರತು ಕೆರೆಯನ್ನು ಉಳಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

