ಕೋಲಾರ

ಪತ್ರಕರ್ತರ ಸಹಕಾರ ಸಂಘದಿಂದ ರಚನಾತ್ಮಕ ಕಾರ್ಯಗಳಾಗಲಿ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಸೆ. 29
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ಧೇಶ ಸಹಕಾರ ಸಂಘದಿಂದ ಜಿಲ್ಲೆಯ ಎಲ್ಲಾ ಪತ್ರಕರ್ತರ ಅಭಿವೃದ್ಧಿಗೆ ಪೂರಕವಾದ ರಚನಾತ್ಮಕ ಯೋಜನೆಗಳು ಅನುಷ್ಠಾನಗೊಳ್ಳಲಿ ಎಂದು ರಾಜ್ಯ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕ ಕೆ.ವಿ. ಪ್ರಭಾಕರ್ ಸಲಹೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ದೇಶ ಸಹಕಾರ ಸಂಘದ ಪ್ರಥಮ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಪತ್ರಕರ್ತರ ಸಹಕಾರ ಸಂಘದಲ್ಲಿ ಆಗಿರುವ ಪ್ರಗತಿಯಿಂದಾಗಿ ಅನೇಕರಿಗೆ ಅನುಕೂಲವಾಗಿದೆ ಎಂದರು.
ಅನೇಕ ಹಿರಿಯ ಪತ್ರಕರ್ತರ ಪರಿಶ್ರಮದಿಂದಾಗಿ ರಾಜ್ಯ ಪತ್ರಕರ್ತರ ಸಹಕಾರ ಸಂಘ ಇಂದು 26 ಕೋಟಿ ರು.ಗಳಷ್ಟು ಠೇವಣಿಯನ್ನು ಹೊಂದುವಂತಾಗಿದೆ. ಅರ್ಹ ಪತ್ರಕರ್ತರಿಗೆ ವಾಹನ ಖರೀದಿ, ಶಿಕ್ಷಣ ಹಾಗೂ ಮನೆ ನಿರ್ಮಿಣಕ್ಕೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಅದೇ ರೀತಿ ಕೋಲಾರ ಜಿಲ್ಲಾ ಸಂಘವು ಉತ್ತಮವಾದ ಯೋಜನೆಗಳನ್ನು ಜಾರಿಗೆ ತರಬೇಕೆಂದು ತಿಳಿಸಿದರು.
ಆಡಳಿತ ಮತ್ತು ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದಿಂದ ಪ್ರಸ್ತಾವನೆ ಬಂದಲ್ಲಿ ರಾಜ್ಯ ಸಂಘದಿಂದ ಸಹಕಾರ ನೀಡುವುದಕ್ಕೆ ಪ್ರಯತ್ನಿಸುವುದಾಗಿ ಪ್ರಭಾಕರ್ ಭರವಸೆ ನೀಡಿದರು.
ಗುಣಾತ್ಮಕ ಚಿಂತನೆ ಅಗತ್ಯ: ನಾವು ಮಾಡುವ ಕೆಲಸದ ಬಗ್ಗೆ ಸ್ಪಷ್ಟವಾದ ಗುರಿ ಮತ್ತು ಪ್ರಾಮಾಣಿಕತೆಯಿದ್ದಲ್ಲಿ ಏನೇ ಟೀಕೆ, ಪ್ರತಿರೋಧ ಎದುರಾದರೂ ಸಾಧನೆ ಮಾಡಬಹುದು ಎಂದು ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ  ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಹಾಗೂ ಹಾಲಿ ನಿರ್ದೇಶಕ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಹೇಳಿದರು.
ವಸತಿ ಸಹಕಾರ ಸಂಘ ರಚನೆ ಮಾಡಿದಾಗ ನನ್ನ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದವು.ಆದರೆ ಟೀಕೆಗಳನ್ನು ರಚನಾತ್ಮಕವಾಗಿ ಮತ್ತು ಧನಾತ್ಮಕವಾಗಿ ಸ್ವೀಕರಿಸಿದ ಫಲದಿಂದಾಗಿ ಸಹಕಾರ ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ನಿವೇಶನಗಳನ್ನು ವಿಲೇವಾರಿ ಮಾಡಲು ಸಾಧ್ಯವಾಯಿತು. ಇದರಿಂದ ನನಗೆ ತೃಪ್ತಿ ಮತ್ತು ಸಮಾಧಾನ ಸಿಕ್ಕಿದೆ. ಜಿಲ್ಲಾ ಪತ್ರಕರ್ತರ ಸಹಕಾರ ಸಂಘದಿಂದಲೂ ಉತ್ತಮ ಕೆಲಸಗಳು ಆಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಸಹಕಾರ ಸಂಘದ ಮೂಲಕ ಎಲ್ಲಾ ಪತ್ರಕರ್ತರಿಗೆ ಯಶಸ್ವಿನಿ ಆರೋಗ್ಯ ವಿಮಾ ಕಾರ್ಡ್ ದೊರಕಿಸುವಂತಹ ಜವಾಬ್ದಾರಿ ಸಂಘದ ಮೇಲಿದೆ  ಎಂದರು. ಸಹಕಾರ ಸಂಘದಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆಯೂ ಅವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್, ಸಹಕಾರ ಸಂಘ ಮರುಜೀವ ಪಡೆಯುವುದರ ಮೂಲಕ ಇಂದು ಎಲ್ಲಾ ಪತ್ರಕರ್ತರ ಕನಸು ನನಸಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಷೇರು ಹಣವನ್ನು ದಪ್ಪಟ್ಟು ಮಾಡುವುದಾಗಿ ಹೇಳಿದರು.
ಮುಂದಿನ ತಿಂಗಳಿಂದ ಷೇರುದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿ ಆದಷ್ಟು ಬೇಗ ಎಲ್ಲಾ ಪತ್ರಕರ್ತರಿಗೆ ಯಶಸ್ವಿನಿ ಯೋಜನೆಯ ಸವಲತ್ತು ಸಿಗುವಂತೆ ಮಾಡಲಾಗುವುದು ಎಂದು  ಉಪಾಧ್ಯಕ್ಷ ಅಬ್ಬಣಿ ಶಂಕರ್ ಪ್ರಕಟಿಸಿದರು.
ಅಧಿಕಾರಕ್ಕೆ ಅಂಟಕೊಳ್ಳದೆ ಷೇರುದಾರರ ಸೇವಕನಾಗಿ ಕೆಲಸ ಮಾಡುವುದಾಗಿ ಹೇಳಿದ ಅವರು, ಸಂಘದ ಅಭಿವೃದ್ಧಿ ಮತ್ತು ಪ್ರಗತಿಗೆ ಎಲ್ಲರ ಸಹಕಾರ ಅತಿ ಮುಖ್ಯವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ ಅವರು ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ರಾಜ್ಯ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೋಲಾರದವರೇ ಆದ ಕನ್ನಡಪ್ರಭ ಪತ್ರಿಕೆಯ ಮುಖ್ಯ ವರದಿದಾರ ಕೆ.ವಿ. ಪ್ರಭಾಕರ್ ಅವರನ್ನು ಸನ್ಮಾನಿಸಿದರು.
ಹಿರಿಯ ಪತ್ರಕರ್ತರಾದ ಪಾ.ಶ್ರೀ. ಅನಂತ್‌ರಾಮ್, ವಾಸುದೇವ್ ಹೊಳ್ಳ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಹರೀಶ್, ಸತ್ಯನಾರಾಯಣಶೆಟ್ಟಿ, ಗೌರಿಬಿದನೂರಿನ ನಾಗರಾಜು ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಮುನಿರಾಜು, ಕೋಲಾರ ಧ್ವನಿ ಮುರಳಿಧರ್ ಇದ್ದರು. ಸಹಕಾರ ಸಂಘದ ನಿರ್ದೇಶಕ ಕೋ.ನಾ. ಮಂಜುನಾಥ್ ನಿರೂಪಿಸಿ ಸ್ವಾಗತಿಸಿ, ಸಿ.ಜಿ. ಮುರಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.