ಕೋಲಾರ

ಭಗತ್ ಸಿಂಗ್ ಯುವಕರಿಗೆ ಆದರ್ಶ: ಜಗನ್ನಾಥ್

Published On :

ಮಾಲೂರು: ಬ್ರಿಟಿಷರಿಗೆ ದೇಶಪ್ರೇಮದಲ್ಲಿ ಸಿಂಹಸ್ವಪ್ನರಾಗಿದ್ದ ಭಗತ್ ಸಿಂಗ್ ಅವರ ಕೆಚ್ಚೆದೆ ಹೋರಾಟವು ಇಂದಿನ ಯುವ ಜನಾಂಗದ ಆದರ್ಶವಾಗಬೇಕು ಎಂದು ಉಪನ್ಯಾಸಕ ಜಗನ್ನಾಥ್ ಹೇಳಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಭಗತ್ ಸಿಂಗ್ 106ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ದಿನಾಚರಣೆ ಅಂಗವಾಗಿ ಮಹಾನ್ ವ್ಯಕ್ತಿಗಳ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಗತ್ ಸಿಂಗ್ ಜೀವನದ ಘಟನೆ ಸಾರುವ ಘಟನೆಗಳನ್ನು ಮಕ್ಕಳನ್ನು ನಾಟಕ ಮೂಲಕ ಪ್ರಸ್ತುತ ಪಡಿಸಿದರು. ಶಾಲಾ ಮುಖ್ಯ ಶಿಕ್ಷಕ ಮುನಿಯಪ್ಪ, ಪ್ಲಾಸ್ಟಿಕ್ ನಿಮೂರ್ಲನಾ ಸಮಿತಿ ಅಧ್ಯಕ್ಷ ಮುನಿಸ್ವಾಮಿ, ವಿಶ್ವ ಹಿಂದು ಪರಿಷತ್‌ನ ಗೋವಿಂದ ರಾಜು, ಪುಪ್ಬಾ ಗಜಾನನ ಭಟ್, ವನಿತಾ ಕುಮಾರಿ, ಜಯಾಭಾರತಿ, ಶರಣ್ಯಾ ಇದ್ದರು.
ಜಿಲ್ಲಾ ಕರವೇಗೆ ಅವಿರೋಧ ಆಯ್ಕೆ
ಮಾಲೂರು: ನಿಮ್ಮ ಹೋರಾಟ ನೆಲ-ಜಲ-ಭಾಷೆಗಳ ರಕ್ಷಣೆಗಾಗಿ ಇರಬೇಕೆ ಹೊರತು ಹೋರಾಟಕ್ಕಾಗಿ ನೆಲ-ಭಾಷೆ ಸಮಸ್ಯೆಗಳನ್ನು ಹುಟ್ಟು ಹಾಕಬಾರದು ಎಂದು ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದರು.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕೋಲಾರ ಜಿಲ್ಲಾ ಕರವೇ ಕಾರ್ಯದರ್ಶಿಯಾಗಿ ಮಾಲೂರಿನ ಎಸ್.ಎಂ. ರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಮಾತನಾಡಿದರು. ಕರವೇ ರಾಜ್ಯ ಉಪಾಧ್ಯಕ್ಷ ಡಾ. ಪಿ. ಆಂಜಿನಪ್ಪ, ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ನವೀನ್ ಇದ್ದರು.
ಅಭಿನಂದನೆ: ಮಾಲೂರಿನ ಎಸ್.ಎಂ. ರಾಜು ಅವರು ಕರವೇ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದನ್ನು ಸ್ವಾಗತಿಸಿರುವ ತಾಲೂಕು ಘಟಕವು ಅವರ ಕ್ರಿಯಾಶೀಲತೆಯಲ್ಲಿ ಜಿಲ್ಲೆಯಲ್ಲಿ ಸಂಘಟನೆ ಹೆಚ್ಚು ಸಂಘಟನೆಗೊಳ್ಳಲಿದೆ ಎಂದು ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ ಅವರು ರಾಜು ಅವರನ್ನು ಅಭಿನಂದಿಸಿದ್ದಾರೆ.
ಚುನಾವಣೆ ಶಾಂತಿಯುತ
ಶ್ರೀನಿವಾಸಪುರ: ತಾಲೂಕಿನ ಪುಲಗೂರಕೋಟೆ ತಾಲೂಕು ಸಮಿತಿ ಕ್ಷೇತ್ರದ ಸದಸ್ಯರೊಬ್ಬರ ಅಕಾಲ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಯಾವುದೇ ರೀತಿಯ ಆಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಶೇ.95ರಷ್ಟು ಮತದಾನ ನಡೆದಿದೆ.
ಪುಲಗೂರಕೋಟೆ ತಾಲೂಕು ಸಮಿತಿ ಸದಸ್ಯ ಗಂಗಾಧರಪ್ಪ ಎಂಬುವವರ ಅಕಾಲ ಮರಣದಿಂದ ತೆರವುಗೊಂಡ ಪುಲಗೂರಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್, ಬಿಜೆಪಿ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಒಟ್ಟು 4 ಮಂದಿ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಹಲವಾರು ಮತಗಟ್ಟೆಗಳು ಸೂಕ್ಷ್ಮ ಮತ್ತು ಅತಿಸೂಕ್ಷ್ಮವಾಗಿದ್ದರಿಂದ ಚುನಾವಣಾಧಿಕಾರಿಗಳು ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.
ಮಾಜಿ ಶಾಸಕರ ಪ್ರವಾಸ
ಶಿಡ್ಲಘಟ್ಟ: ಬಂಗಾರಪೇಟೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿಯವರು ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು, ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿ, ಲೋಕಸಬಾ ಚುನಾವಣೆ ಸಮೀಪಿಸುತ್ತಿದ್ದು ಆಕಾಂಕ್ಷಿಯಾಗಿ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು, ನಿರ್ಣಯವನ್ನು ಹೈಕಮಾಂಡ್‌ಗೆ ಬಿಡಲಾಗಿದೆ. ಯಾರಿಗೇ ಟಿಕೆಟ್ ನೀಡಿದರೊ ಕಾರ್ಯಕರ್ತನಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಸುರೇಂದ್ರ ಗೌಡ, ದಾಮೋದರ್, ತ್ಯಾಗರಾಜು, ಚಂದ್ರು, ನರೇಶ್, ಯುವ ಮೋರ್ಚಾ ಅಧ್ಯಕ್ಷ ರವಿಚಂದ್ರ ಇದ್ದರು.
ಮಾರುಕಟ್ಟೆಗೆ ಭೇಟಿ
ಶಿಡ್ಲಘಟ್ಟ: ರೇಷ್ಮೆ ಜಂಟಿ ನಿರ್ದೇಶಕ ಪ್ರಭಾಕರ್ ಶಿಡ್ಲಘಟ್ಟದ ಗೊಡಿನ ಮಾರುಕಟ್ಟೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದರು. ರೇಷ್ಮೆ ಗೊಡಿನ ಮಾರುಕಟ್ಟೆಗೆ ಬಂದ ರೈತರ ಸಮಸ್ಯೆ ಹಾಗೂ ಮಾರುಕಟ್ಟೆ ಕುಂದು ಕೊರತೆಗಳನ್ನು ವಿಚಾರಿಸಿದರು. ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ನರಸಿಂಹ ಮೂರ್ತಿ, ಬಿ.ಆರ್. ಸುದಾಕರ್, ಎಂ.ಎನ್. ರತ್ನಯ್ಯ ಶೆಟ್ಟಿ, ಅನಂತ ಪ್ರಭು ಇದ್ದರು.
'ಶಿಕ್ಷಕರು ವೃತ್ತಿ ಪ್ರಾಮಾಣಿಕರಾಗಲಿ'
ಮಾಲೂರು: ಶಿಕ್ಷಕರು ವೃತ್ತಿಪರತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇರುವ ನಿರ್ಲಕ್ಷ್ಯ ಕಡಿಮೆ ಮಾಡಲು ಸಾಧ್ಯ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು. ಪಟ್ಟಣದ ಮಾಸ್ತಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಾರ್ಡ್ ಸದಸ್ಯ ಪಚ್ಚಪ್ಪ ಅವರ ಶಾಲೆಯ ಮಕ್ಕಳಿಗೆ ಉಚಿತವಾಗಿ ಶಾಲಾ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವವರು ಬಡ ಕುಟುಂಬದ ಮಕ್ಕಳು. ಅಂತಹ ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳನ್ನು ಸೆಳೆಯುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದರು.
ಇಲ್ಲಿನ ಶಾಲೆಗೆ ಅವಶ್ಯಕತೆ ಇರುವ ಎರಡು ಕೋಣೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ ಶಾಸಕರು, ಭಾರತ ಸೇವಾ ದಳದ ನಿವೃತ್ತ ಹಿರಿಯ ಮುನಿಶಾಮಿ ಅವರಿಗೆ ಪುರಸಭೆ ವತಿಯಿಂದ ನಿವೇಶನ ನೀಡುವುದಾಗಿ ತಿಳಿಸಿದರು. ಇದೇ ಸಂಧರ್ಭದಲ್ಲಿ ಶಾಸಕ ಮಂಜುನಾಥ್ ಗೌಡ, ಪುರಸಭೆ ಸದಸ್ಯ ಪಚ್ಚಪ್ಪ, ಭಾರತ ಸೇವಾ ದಳದ ಜಿಲ್ಲಾ ಸಂಘಟಿಕ ಮಂಜುನಾಥ್, ಹಿರಿಯ ಸದಸ್ಯ ಮುನಿಶಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಶಾಲೆಯ 283 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ಬೆಳ್ಳಾವಿ ಮಹಾಸಂಸ್ಥಾನದ ಮಹಾಂತೇಶ ಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ನಂಜೇಗೌಡ, ಕೃಷಿ ಸಮಾಜದ ಅಧ್ಯಕ್ಷ ಹನುಮಂತಪ್ಪ, ಪ್ಲಾಸ್ಟಿಕ್ ನಿರ್ಮೂಲನಾ ಸಮಿತಿ ಅಧ್ಯಕ್ಷ ಮುನಿಸ್ವಾಮಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಪ್ಪ ಇದ್ದರು.
ಇನ್ಸ್‌ಪೆಕ್ಟರ್‌ಗೆ ಸನ್ಮಾನ
ಬಂಗಾರಪೇಟೆ: ಕ್ಷೇತ್ರದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರಿ ವಹಿಸಿಕೊಂಡಿರುವ ವೆಂಕಟಾಚಲಪತಿ ಅವರನ್ನು ನವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಿನ್ನಿ ವೆಂಕಟೇಶ್ ಹಾಗೂ ತಾಲೂಕು ಅಧ್ಯಕ್ಷ ಕೆ.ಸಿ. ಗೋಪಾಲ್ ನೇತೃತ್ವದಲ್ಲಿ ಕಾರ್ಯಕರ್ತರು ಠಾಣೆಗೆ ತೆರಳಿ ಸನ್ಮಾನಿಸಿ ಶುಭ ಹಾರೈಸಿದರು.
ಪಿಯು ಕಾಲೇಜು ಜಿಲ್ಲಾ ಮಟ್ಟದ ಕ್ರೀಡಾಕೂಟ
ಕೋಲಾರ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಸೆ.30ರ ಸೋಮವಾರ ಬೆಳಗ್ಗೆ 9 ಗಂಟೆಗೆ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.ಕ್ರೀಡಾಕೂಟ ಧ್ವಜಾರೋಹಣವನ್ನು ಶಾಸಕ ವರ್ತೂರು ಪ್ರಕಾಶ್ ನೆರವೇರಿಸಲಿದ್ದು, ಇಲಾಖೆಯ ಉಪನಿರ್ದೇಶಕ  ಎಂ.ಜಿ. ದೊರೆಸ್ವಾಮಿ ಕ್ರೀಡಾಜ್ಯೋತಿ ಬೆಳಗಿಸುವರು.ಕ್ರೀಡಾಕೂಟವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ವಿ. ಪದ್ಮನಾಭ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬಾಲಕರ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಸ್. ವೆಂಕಟಸ್ವಾಮಿ ವಹಿಸುವರು.
ಸಮಾನ ಶಾಲಾ ಶಿಕ್ಷಣ ನೀತಿ ಜಾರಿಗೆ ಸಹಿ ಸಂಗ್ರಹಣೆ
ಕೋಲಾರ: ಏಕರೂಪ ಸಮಾನ ಶಾಲಾ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯಿಂದ ನಗರದ ಸರ್ಕಾರಿ ಬಾಲಕರ ಕಾಲೇಜಿನ ಬಳಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು.ಜನ ಜಾಗೃತಿ ಮೂಡಿಸುವ ಸಲುವಾಗಿ ಸಹಿ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜು ತಿಳಿಸಿದರು. ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಈ ಸಹಿ ಸಂಗ್ರಹಣೆ ಅಭಿಯಾನವನ್ನು ರಾಜ್ಯಾದ್ಯಂತ ಸಂಘಟನೆಯ ವತಿಯಿಂದ ನಡೆಸಲಾಗುತ್ತಿದ್ದು ಕೋಲಾರದಲ್ಲಿ ಸಹ ಇದಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾದ ಸಹಿಗಳನ್ನು ಹೊಂದಿದ ಮನವಿ ಪತ್ರವನ್ನು ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವಂತಹ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ನೀಡಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಸಹಿ ಸಂಗ್ರಹ ಜನಾಂದೋಲನ ಅಭಿಯಾನದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಕೀಲುಕೋಟೆ ಆಂಜಿನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್ ಆಲಿ, ಜಿಲ್ಲಾ ಸಂಘಟನಾ ಕಾರ್ಯದಶೀ ಬಿ.ವಿ. ಶಿವಕುಮಾರ್, ಜಿಲ್ಲಾ ಸಂಚಾಲಕ ಜಿ. ಸುರೇಶ್ ಬಾಬು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ಗೋವಿಂದರಾಜು, ಮುಖಂಡರಾದ ದೊಡ್ಡಹಸಾಳ ಸುಬ್ರಮಣ್ಯ, ಕೆ.ಆರ್. ಶ್ರೀನಿವಾಸಶೆಟ್ಟಿ, ಶಬ್ಬೀರ್ ಅಹ್ಮದ್, ಆರ್.ಬಾಬು, ಅವಿನಾಶ್‌ಯಾದವ್, ಪಾಲಸಂದ್ರ ಲೇಔಟ್ ಜಯಪ್ರಕಾಶ್, ಕಾಡದೇವಂಡಹಳ್ಳಿ ಎಂ. ರಾಮಕೃಷ್ಣೇಗೌಡ, ನರಸಾಪುರದ ಬಿ.ಜುಬೇರ್ ಅಹ್ಮದ್, ಗಾಂಧಿನಗರ ರಾಜಣ್ಣ ಇದ್ದರು.
ಅಭಿನಂದನೆ
ಕೆಜಿಎಫ್: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೆಂಗಳೂರಲ್ಲಿ ನಡೆದ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕರವೇ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಪ್ರಕಟಣೆಯಲ್ಲಿ  ಅಭಿನಂದನೆಯನ್ನು ತಿಳಿಸಿದ್ದಾರೆ.
ದತ್ತಿ ಉಪನ್ಯಾಸ ಕಾರ್ಯಕ್ರಮ
ಗೌರಿಬಿದನೂರು: ಪ್ರಾಮಾಣಿಕ ದೇಶಪ್ರೇಮಿ ವ್ಯಕ್ತಿಗಳ ಆದರ್ಶಗಳನ್ನು ಕೇವಲ ಹೊಗಳಿಕೆಗೆ ಸೀಮಿತಗೊಳಿಸದೇ ಅವರ ಬದುಕಿನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ, ಅವರ ಆದರ್ಶಗಳಿಗೆ ಗೌರವ ನೀಡಿದಂತಾಗುತ್ತದೆ ಎಂದು ವಿಧಾನಸಭಾ ಉಪ ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಕರೆ ನೀಡಿದರು. ಗೌರಿಬಿದನೂರು ಪಟ್ಟಣದ ಸಮತಾ ಪ್ರೌಢಶಾಲೆಯ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಖ್ಯಾತ ನ್ಯಾಯವಾದಿ ದಿ. ಜಿ.ವಿ. ಶಾಂತರಾಜು ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನಡೆಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ರವೀಂದ್ರ ರೇಷ್ಮೆ ಮಾತನಾಡಿದರು. ದತ್ತಿ ಉಪನ್ಯಾಸಕಾರರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಎಚ್.ಎಸ್. ಗಣೇಶ್ ಭಟ್ ಮಾತನಾಡಿದರು.
ರವಿಕುಮಾರ್ ಗೌಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಿ.ಜೆ. ಚಂದ್ರಮೋಹನ್  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕೃಷ್ಣಮೂರ್ತಿ ಅಯ್ಯರ್ ಅವಿರೋಧ ಆಯ್ಕೆ
ಕೋಲಾರ: ಇಲ್ಲಿನ ಶ್ರೀ ಶಂಕರ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಗುತ್ತಿಗೆದಾರ ಕಾರ್ಮಿಕ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ಶಂಕರ ಮಠದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಕಾರ್ತಿಕ ಕೃಷ್ಣಮೂರ್ತಿ ಅವರನ್ನು ಸಮಿತಿಯ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿ, ಉತ್ತಮ ಕಾರ್ಯಕ್ರಮಗಳ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸುವಂತೆ ಕೋರಿದ್ದಾರೆ.
ಸಮಿತಿ ಕಾರ್ಯದರ್ಶಿ ಜೆ.ಎನ್. ರಾಮಕೃಷ್ಣ, ಮಾತನಾಡಿ, ಶಂಕರ ಸೇವಾ ಸಮಿತಿಯಿಂದ ಅನೇಕ ರೀತಿಯ ಒಳ್ಳೆಯ ಕಾರ್ಯಕ್ರಮಗಳು ನಡೆದಿದೆ. ಸೇವಾ ಮನೋಭಾವನೆಯುಳ್ಳ ಕಾರ್ತಿಕ ಕೃಷ್ಣಮೂರ್ತಿ ಹೊಸ ಅಧ್ಯಕ್ಷರಾಗಿರುವುದು ಸಮಿತಿಯ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರು.
ಖಜಾಂಚಿಯಾಗಿ ಆಯ್ಕೆಯಾದ ಸೀಸಂದ್ರ ಕಿಟ್ಟಪ್ಪ ಲೆಕ್ಕಪತ್ರಗಳ ವರದಿ ಒಪ್ಪಿಸಿದರು. ಸಮಿತಿಯ ಸದಸ್ಯರಾದ ಡಾ. ಕೃಷ್ಣಮೂರ್ತಿ, ಚಂದ್ರಪ್ರಕಾಶ್, ಛಾಯಾಗ್ರಾಹಕ ಹಾಬಿ ರಮೇಶ್, ವಕೀಲರಾದ ಶ್ರೀನಿವಾಸ ರಾವ್, ಸತ್ಯನಾರಾಯಣ, ಶೇಷಾದ್ರಿ, ನಾಗರಾಜ ಅಯ್ಯರ್, ಚಿನ್ಮಯ ರವಿಶಂಕರ್, ಡಾ. ಎಸ್.ಆರ್. ಪ್ರಸಾದ್, ನಾಗೇಂದ್ರ, ಚಂದ್ರಶೇಖರ ರಾವ್, ಆಡಿಟರ್ ನಾಗೇಂದ್ರಪ್ರಸಾದ್ ಮತ್ತಿತರರು ಇದ್ದರು.
ಅನಂತಮೂರ್ತಿ ಹೇಳಿಕೆ; ಬ್ರಾಹ್ಮಣ ಸಂಘದಿಂದ ಇಂದು ಪ್ರತಿಭಟನೆ
ಕ.ಪ್ರ.ವಾರ್ತೆ ,  ಕೋಲಾರ ,  ಸೆ. 29
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರು ಬ್ರಾಹ್ಮಣರ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಸ್ಥಳೀಯ ಬ್ರಾಹ್ಮಣ ಸಂಘದಿಂದ ಸೆ.30ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ವಲಯ ಉಪಾಧ್ಯಕ್ಷ ಎನ್.ಕೆ. ಅಚ್ಚುತರಾವ್ ತಿಳಿಸಿದ್ದಾರೆ.
ಸಮುದಾಯದ ಎಲ್ಲಾ ಮುಖಂಡರು ಕೋಟೆಯ ಶಂಕರಮಠದಲ್ಲಿ ಸೇರಿ ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವರು ಎಂದು ತಿಳಿಸಿದ್ದಾರೆ.
ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರು ಎಂದು ಅನಂತಮೂರ್ತಿಯವರು ನೀಡಿರುವ ಹೇಳಿಕೆಯಿಂದ ಬ್ರಾಹ್ಮಣ ಸಮಾಜಕ್ಕೆ ನೋವಾಗಿದೆ ಎಂದಿರುವ ಅವರು, ರಾಜ್ಯಸಭಾ ಸದಸ್ಯರಾಗಲು ಹವಣಿಸುತ್ತಿರುವ ಅನಂತಮೂರ್ತಿ ತಮ್ಮ ಘನತೆಗೆ ತಕ್ಕಂತೆ ಮಾತನಾಡದೇ ಯಾರನ್ನೋ ಓಲೈಸಲು ನೀಡಿರುವ ಹೇಳಿಕೆಯನ್ನು ರಾಜ್ಯದ ಪ್ರತಿಯೊಬ್ಬ ಬ್ರಾಹ್ಮಣರೂ ಖಂಡಿಸಬೇಕೆಂದು ತಿಳಿಸಿದ್ದಾರೆ.
ಚಿಂತಾಮಣಿ; ವಿಶೇಷ ಉಪನ್ಯಾಸ ಕಾರ್ಯಕ್ರಮ
ಚಿಂತಾಮಣಿ: ಧಾರವಾಡದ ನೂರು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದ ವಿಜ್ಞಾನ ಮಂಟಪದಲ್ಲಿ ತೆಲುಗು ಮತ್ತು ಕನ್ನಡ ಭಾಷಾ- ಬಾಂಧವ್ಯಕ್ಕೆ ಕೈವಾರ ತಾತಯ್ಯನವರ ಕೊಡುಗೆ ಎಂಬ ವಿಚಾರವಾಗಿ ಪ್ರವನಚಕಾರ ತಳಗವಾರ ಟಿ.ಎಲ್. ಆನಂದ್ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕಟಪುರಿ ಶ್ರೀ ವಿದ್ಯಾಪೀಠದ ಆಸ್ಥಾನ ವಿದ್ವಾನ್ ಮಧುಸೂದನ ಶಾಸ್ತ್ರಿ ಹಂಪಿಹೊಳಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿಜ್ಞಾನ ಮಂಟಪದ ಸಂಚಾಲಕ ಪ್ರಕಾಶ್ ಉಡಿಕೇರಿ ಮತ್ತಿತರು ಭಾಗವಹಿಸಿದ್ದರು. ತಾತಯ್ಯನವರ ಹಾಡುಗಳ ಗೀತ ಗಾಯನ ಏರ್ಪಡಿಸಲಾಗಿತ್ತು.
ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಹೆಬ್ಬಣಿ ಪ್ರಭು ಆಯ್ಕೆ
ಕೋಲಾರ/ಮುಳಬಾಗಿಲು: ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿ ಹೆಬ್ಬಣಿ (ವಿ.ಎಸ್.ಎಸ್.ಎನ್) ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಬ್ಬಣಿ ಪ್ರಭು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 9 ನಿರ್ದೇಶಕರಿದ್ದು ಪ್ರಥಮ ಬಾರಿಗೆ ಪ್ರಭು ಅವರು ಆಯ್ಕೆಯಾಗಿದ್ದು 2 ನೇ ಅವಧಿಯ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ಸರ್ವಾನುಮತದಿಂದ ಇವರನ್ನೇ ಆಯ್ಕೆಮಾಡಿದ್ದಾರೆ.
ಅಧ್ಯಕ್ಷ ಪ್ರಭು ಮಾತನಾಡಿ ವ್ಯವಸಾಯ ಸೇವಾ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮದ ರೈತ ಸದಸ್ಯರಿಗೆ ಸಾಲಾ ಸೌಲಭ್ಯ ಕಲ್ಪಿಸುವುದಾಗಿ ಈಗಾಗಲೇ ಎಲ್ಲಾ ರೈತ ಕುಟುಂಬದವರು ಯಶಸ್ವಿ ಯೋಜನೆಯನ್ನು ಕಡ್‌ಡಾಯವಾಗಿ ಸೇವಾ ಸಹಕಾರ ಸಂಘದಲ್ಲಿ ನೋಂದಣಿ ಮಾಡಿ, ಅತಿ ಶೀಘ್ರದಲ್ಲೇ ಎಲ್ಲಾ ರೈತರು ಸಾಲ ಸೌಲಭ್ಯವನ್ನು ಪಡೆದು ಸಕಾಲದಲ್ಲಿ ಮರು ಪಾವತಿ ಮಾಡಿ ಈ ಸಂಘವನ್ನು ಅಭಿವೃದ್ಧಿ ಪಡಿಸಬೇಕಾಗಿ ಕೋರಿದರು. ಚುನಾವಣಾಧಿಕಾರಿಯಾಗಿ ವೆಂಕಟೇಶ್ ಕಾರ್ಯನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಪೆದ್ದೂರು ಸಂಜೀವಯ್ಯ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.