ಒಕ್ಕಲಿಗರ ವಿದ್ಯಾರ್ಥಿ ನಿಲಯ ಲೋಕಾರ್ಪಣೆ
ಚಿಕ್ಕಬಳ್ಳಾಪುರ: ಕಳೆದ ಏಳೆಂಟು ವರ್ಷಗಳಿಂದ ನಗರದಲ್ಲಿ ನೆನೆಗುದಿಗೆ ಬಿದ್ದಿದ್ದ ಒಕ್ಕಲಿಗರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ನಗರದ ಹೊಸ ಬಸ್ ನಿಲ್ದಾಣದಲ್ಲಿರುವ ಕೈವಾರ ತಾತಯ್ಯ ದೇವಾಲಯ ಹಿಂಭಾಗದಲ್ಲಿ ದಾನಿಗಳ ನೆರವಿನೊಂದಿಗೆ ಒಕ್ಕಲಿಗರ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ನಿರ್ಮಿಸಿದ್ದು ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಲಾಯಿತು. ನಂತರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ನೂತನ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಇದರಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ವಿವಿಧ ಸಂಘ ಸಂಸ್ಥೆಗಳು ಸಮುದಾಯಗಳ ಸೇವೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಒಕ್ಕಲಿಗರು ಕೊಡುಗೈ ದಾನಿಗಳು: ಒಳ್ಳೆಯ ದಾನಿಗಳು ಒಕ್ಕಲಿಗರ ಸಂಘದಲ್ಲಿದ್ದು ಅವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಉತ್ತಮ ಬೆಳವಣಿಗೆ. ಒಕ್ಕಲಿಗ ಸಮುದಾಯದವರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿದ್ದರೂ ಸಮುದಾಯದ ಸೇವೆಯಲ್ಲಿ ಒಂದೇ ಭಾವನೆಯಲ್ಲಿ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂದು ನಗರದ ಹೆಮ್ಮೆಯ ಸಂಕೇತವಾಗಿ ವಿದ್ಯಾರ್ಥಿ ನಿಲಯ ಎದ್ದು ನಿಂತಿದೆ ಎಂದರು.
ಜನಾಂಗದವರು ಸಂಘಟಿತರಾಗಬೇಕು. ಆದರೆ ಬೇರೆ ಸಮುದಾಯದ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು. ಬೇರೆ ಸಮುದಾಯಗಳನ್ನು ಕಾಪಾಡಲು ಮುಂದಾಗಬೇಕು ಎಂದರು.
ಎಲ್ಲರ ಸಹಕಾರ: ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಹಿಂದೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ವಿದ್ಯಾರ್ಥಿ ನಿಲಯಗಳು ಆಸರೆಯಾಗಿತ್ತು,ಅಂದು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು ಎಂದ ಅವರು, ಜನಾಂಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂದು ದಾನಿಗಳಿಂದ ಇಂದು ಬೃಹತ್ ವಿದ್ಯಾರ್ಥಿ ನಿಲಯ ನಿರ್ಮಿಸಲಾಗಿದೆ ಎಂದರು.
ಊಟದ ವ್ಯವಸ್ಥೆಗೆ ಮನವಿ: ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ನೀಡುವ ವ್ಯವಸ್ಥೆ ಮಾಡಬೇಕೆಂದು ಈ ಸಂದರ್ಭದಲ್ಲಿ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದರು.
ದಾನಿಗಳಿಗೆ ಸನ್ಮಾನ: ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸಲಾಗಿರುವ ನೂತನ ವಿದ್ಯಾರ್ಥಿ ಕಟ್ಟಡ ನಿರ್ಮಾಣಕ್ಕೆ ವಂತಿಗೆ ನೀಡಿದ ಸಮುದಾಯದ ದಾನಿಗಳಿಗೆ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು. ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ, ಒಕ್ಕಲಿಗರ ಸಂಘದ ಖಜಾಂಚಿ ಯಲುವಹಳ್ಳಿ ರಮೇಶ್, ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಕೆ.ಎಂ.ಜಯಚಂದ್ರ, ಎನ್.ನಾರಾಯಣಸ್ವಾಮಿ, ಪಿ.ನಾಗರಾಜ್, ಬಿ.ಎಂ.ರಾಮಸ್ವಾಮಿ, ಡಾ.ಕೆ.ಪಿ.ಶ್ರೀನಿವಾಸ್ ಮೂರ್ತಿ, ಎ.ಎನ್.ಶ್ರೀನಿವಾಸ್, ಎಂ.ಪ್ರಕಾಶ್, ಡಿ.ನಾರಾಯಣಸ್ವಾಮಿ, ಎ.ವಿ.ಬೈರೇಗೌಡ, ಎಚ್.ಮುನೇಗೌಡ, ಸಿ.ಪಿ. ಲಕ್ಷ್ಮೀನಾರಾಯಣಪ್ಪ, ವೆಂಕಟರೆಡ್ಡಿ, ಕೆ.ಶಶಿಧರ್, ಮುಖಂಡರಾದ ಎಂ.ಆಂಜಿನಪ್ಪ, ಮುನೇಗೌಡ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

