ಮೃಷ್ಟಾನ್ನ ಬೇಡ.. ವಾತ್ಸಲ್ಯ ಬೇಕು
ಕ.ಪ್ರ.ವಾರ್ತೆ , ಕೋಲಾರ , ಸೆ. 30
ನಮ್ಮ ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದು ದಿನಾಚರಣೆಗಳು ನಡೆಯುತ್ತಿದೆ. ಈ ರೀತಿಯ ಆಚರಣೆಗಳಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯೂ ಒಂದು.
ಕಾರ್ಯಕ್ರಮಗಳಿಗಾಗಿ ಸರ್ಕಾರ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಸಾಧನೆ ಮಾಡಿದ್ದೇವೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮೂಲಕ ಖುಷಿ ಪಡುತ್ತೇವೆ.
60 ವರ್ಷ ಮೇಲ್ಪಟ್ಟವರನ್ನು ಗೌರವಿಸುವ ಹಾಗೂ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸರ್ಕಾರ ಪ್ರತಿ ವರ್ಷ ಅಕ್ಟೋಬರ್ ತಿಂಗಳ ಒಂದರಂದು ಹಿರಿಯರನ್ನು ಸ್ಮರಣೆ ಮಾಡಲು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಡೆಸುತ್ತಿರುವುದೇನೋ ಸರಿ. ಆದರೆ, ವರ್ಷಕ್ಕೆ ಒಮ್ಮೆ ಹಿರಿಯರನ್ನು ಒಂದು ಕಡೆ ಕಲೆಹಾಕಿ ಮುಷ್ಟಾನ್ನ ಉಣಬಡಿಸಿ, ಹಾರ ತೂರಾಯಿಗಳನ್ನು ಹಾಕಿ ಸನ್ಮಾನಿಸುವುದರಿಂದ ಹಿರಿಯರಿಗೆ ನೆಮ್ಮದಿ ನೀಡಿದಂತಾಗುತ್ತದೆಯೇ ಎಂಬುದನ್ನು ಸರ್ಕಾರ ಮತ್ತು ಸಮಾಜ ಆತ್ಮಾವಲೋಕನೆ ಮಾಡಿಕೊಂಡಾಗ ಮಾತ್ರ ಕಾಲಘಟ್ಟದ ತುದಿಯಲ್ಲಿರುವ ಅಸಹಾಯಕರಿಗೆ ಒಂದಿಷ್ಟು ವಾತ್ಸಲ್ಯ ಕಲ್ಪಿಸಲು ಸಾಧ್ಯವಾಗುತ್ತದೆ.
ದೇಶದಲ್ಲಿ ಇಂದು ಲಕ್ಷಾಂತರ ಅಸಹಾಯಕ ಹಿರಿಯರು ಮಕ್ಕಳು, ಮೊಮ್ಮಕ್ಕಳು, ಬಂಧುಗಳು ಇದ್ದರೂ ಪ್ರೀತಿ, ವಾತ್ಸಲ್ಯದಿಂದ ವಂಚಿತರಾಗಿದ್ದಾರೆ. ದುಡಿಯಲು ಶಕ್ತಿ ಇಲ್ಲ. ನಮ್ಮ ಆಸೆಗಳಿಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಅನೇಕರು ಹಿರಿಯರನ್ನು ನಿರ್ಲಕ್ಷಿಸುತ್ತಿದ್ದಾರೆ.
ಎಲ್ಲವೂ ನೆಟ್ಮಯ: ತಂದೆ-ತಾಯಿಯರಿಂದ ಎಲ್ಲಾ ರೀತಿಯ ಎಲ್ಲಾ ರೀತಿಯ ಸವಲತ್ತು ಆಸ್ತಿ-ಪಾಸ್ತಿ ಗಿಟ್ಟಿಸಿಕೊಂಡು ಒಂದು ಹಿಡಿಯಷ್ಟು ಮಮಕಾರ, ಪ್ರೀತಿ, ವಾತ್ಸಲ್ಯ ನೀಡದೆ ಹಿರಿಯರನ್ನು ವೃದ್ಧಾಶ್ರಮಗಳಿಗೆ ದೂಡಿ ವಿದೇಶಗಳಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದಾರೆ. ಹಿರಿಯರು ಕಡೆ ಘಳಿಗೆಯಲ್ಲಿ ವ್ಯಕ್ತಪಡಿಸುವ ಆಸೆಗಳನ್ನು ಈಡೇರಿಸದೆ ಇಂಟರ್ನೆಟ್ ಮೂಲಕವೇ ಸತ್ತವರ ಅಂತ್ಯಕ್ರಿಯೆ ನಡೆಸಿ ಮನುಷ್ಯತ್ವಕ್ಕೆ ಬೆಲೆ ಇಲ್ಲವೆಂಬುದನ್ನು ನಿರೂಪಿಸುತ್ತಿದ್ದಾರೆ.
ಋಣ ತೀರಿಸುವ ಕನಿಷ್ಠ ಆಲೋಚನೆಯೂ ಇಲ್ಲ: ಹಿರಿಯರ ಕಷ್ಟ ಅರಿತು ಸರ್ಕಾರಗಳು ಜಾರಿಗೆ ತಂದಿರುವ ಸಮಾಜಿಕ ಭದ್ರತಾ ಯೋಜನೆಗಳಿಂದಾಗಿ ಕೆಲವರು ವಯಸ್ಸಾಗಿರುವ ತಮ್ಮ ತಂದೆ-ತಾಯಿಯರನ್ನು ಮೂಲೆಯಲ್ಲಿ ಕುರಿಸಿ ಬಾಡಿಗೆ ಜನರಿಂದ ಸೇವೆ ಮಾಡಿಸುತ್ತಿರುವುದು ಉಂಟು. ಇನ್ನು ಕೆಲವರು ಕಾನೂನುಗಳಿಗೆ ಹೆದರಿ, ಇಲ್ಲವೇ ಕೇವಲ ಪ್ರತಿಷ್ಠೆಗಾಗಿ ಹಿರಿಯರನ್ನು ಸಾಕುತ್ತಿದ್ದಾರೆಯೇ ಹೊರತು, ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೆತ್ತವರ ಋಣ ತೀರಿಸಬೇಕೆಂಬ ಕನಿಷ್ಠ ಅಲೋಚನೆ ಮಾಡುತ್ತಿಲ್ಲ.
ಸ್ವಂತ ಮನೆಗಳಲ್ಲೇ ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳಲು ಆಗದೆ ತಾತ್ಸಾರ ಮಾಡುತ್ತಿರುವಾಗ ವೃದ್ಧಾಶ್ರಮಗಳಲ್ಲಿ ಹಿರಿಯರಿಗೆ ನೆಮ್ಮದಿ ಹೇಗೆ ಸಿಗಲು ಸಾಧ್ಯ?. ಇತ್ತೀಚೆಗಂತೂ ಎಲ್ಲೆಲ್ಲೂ ವೃದ್ಧಾಶ್ರಮಗಳು ಹೆಚ್ಚುತ್ತಿದ್ದು, ಈ ಪೈಕಿ ಕೆಲವು ಮಾತ್ರ ಸೇವಾ ಮನೋಭಾವನೆಯಿಂದ ಕೆಲಸ ನಿರ್ವಹಿಸುತ್ತಿದ್ದರೆ, ಬಹುತೇಕ ಸಂಸ್ಥೆಗಳು ಸರ್ಕಾರ ನೀಡುವ ಅನುದಾನ, ದಾನಿಗಳ ದೇಣಿಗೆ ಹಾಗೂ ಹೆತ್ತವರನ್ನು ಸಾಕಾಲಾಗದೆ ವೃದ್ಧಾಶ್ರಮಕ್ಕೆ ದೂಡುವ ಸ್ವಾರ್ಥ ಪರರು ನೀಡುವ ಹಣಕ್ಕಾಗಿಯೇ ತಲೆ ಎತ್ತಿ ನಿಂತಿವೆ.
ಇಲ್ಲಿ ನೆಲೆಸುವ ಹಿರಿಯರಿಗೆ ನಿಜವಾದ ವಾತ್ಸಲ್ಯ, ಮಮಕಾರ, ಪ್ರೀತಿಯನ್ನು ನೀಡುವುದು ಹೇಗೆ ಸಾಧ್ಯ ಎಂಬುದನ್ನು ಹಿರಿಯರ ಕಡೆಯವರು ಯೋಚಿಸಿ, ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಬೆಲೆ ನೀಡಿದಲ್ಲಿ ಹಿರಿಯ ಚೇತನಗಳು ಬದುಕಿರುವಷ್ಟು ಕಾಲ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ.
ಪ್ರಾಮಾಣಿಕತೆ, ದಕ್ಷತೆ ಮೆರೆಯಬೇಕಿದೆ: ರಾಜ್ಯ ಸರ್ಕಾರ ವೃದ್ಧಾಶ್ರಮಗಳಿಗೆ ನೀಡುತ್ತಿದ್ದ ರು.1.96 ಲಕ್ಷ ಅನುದಾನವನ್ನು 8 ಲಕ್ಷಕ್ಕೆ ಏರಿಕೆ ಮಾಡಿದೆ. ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಅನುದಾನ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ನೀಡುವ ಅನುದಾನ ಜೊತೆಗೆ ದಾನಿಗಳು ಸಹ ವೃದ್ಧಾಶ್ರಮಗಳಿಗೆ ದೇಣಿಗೆ ನೀಡುವುದರಿಂದ ಸ್ವಯಂ ಸೇವಾ ಸಂಸ್ಥೆಗಳು ಲಾಭ ನಿರೀಕ್ಷೆ ಮಾಡದೆ ಹಿರಿಯರ ಜೀವನದಲ್ಲಿ ಮಂದಹಾಸ ಮೂಡಿಸಿ ಬದುಕಿನ ಪಯಣ ನೆಮ್ಮದಿಯಿಂದ ಸಾಗಲು ಅವಕಾಶ ಕಲ್ಪಿಸಬೇಕಾಗಿದೆ. ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್, ಗುರುತಿನ ಚೀಟಿ, ವೈದ್ಯಕೀಯ ಸೌಲಭ್ಯ, ಸಹಾಯವಾಣಿ ಸಹಕಾರ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಅರ್ಹರಿಗೆ ಈ ಸವಲತ್ತುಗಳು ಸಿಗುತ್ತಿದೆಯೇ ಎಂಬುದರ ಮೇಲೆ ನಿಗಾ ವಹಿಸದಿದ್ದರೆ ಹಿರಿಯರ ಪಾಲು ಉಳ್ಳವರ ಪಾಲಾಗುವುದರಲ್ಲಿ ಸಂಶಯವಿಲ್ಲ.
ಹೆತ್ತವರು ಅಥವಾ ಅಜ್ಜ-ಅಜ್ಜಿಯರು ತಮ್ಮ ಆದಾಯದಲ್ಲಿ ಜೀವನ ನಡೆಸಲು ಅಸಾಧ್ಯವಾದವರು ತಮ್ಮ ಮಕ್ಕಳಿಂದ ಪೋಷಣಾಂಶ ಪಡೆಯಲು ಅರ್ಹರು. ಅದೇ ರೀತಿ ಮಕ್ಕಳಿಲ್ಲದ ಹಿರಿಯ ನಾಗರಿಕರು ತಮ್ಮ ಸಂಬಂಧಿಕರಿಂದ ಸಹಾಯ ಮಾಡಲು ಕಾನೂನಿನಲ್ಲಿ ಅವಕಾಶಗಳು ಇವೆ. ಆದರೆ, ಹಿರಿಯ ನಾಗರಿಕರಿಗೆ ನ್ಯಾಯ ಪ್ರಾಧಿಕಾರವು ಕೊಡಮಾಡಬಹುದಾದ ಮಾಹೆಯಾನ ಗರಿಷ್ಠ ಪೋಷಣಾಂಶ 10 ಸಾವಿರ ಮೀರತಕ್ಕದ್ದಲ್ಲ ಎಂದು ರಾಜ್ಯ ಸರ್ಕಾರ ನಿಶ್ಚಯಿಸಿರುವುದಕ್ಕೆ ಎಷ್ಟರ ಮಟ್ಟಿಗೆ ಜಯ ಸಿಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪ್ರತಿವರ್ಷ ಅಕ್ಟೋಬರ್ 1 ರಂದು ಹಿರಿಯರ ನೆನಪು ಮಾಡಿಕೊಳ್ಳುವುದರ ಜೊತೆಗೆ ಯುವ ಜನಾಂಗಕ್ಕೆ ಅರಿವು ಹೆಚ್ಚಿನ ಅರಿವು ಮೂಡಿಸಿದಾಗ ಹಿರಿಯರು ವೃದ್ಧಾಶ್ರಮಗಳಿಗೆ ಬದಲು ತಮ್ಮ ಮನೆಗಳನ್ನೇ ನಂದವನವಾಗಿ ನೋಡಬಹುದಾಗಿದೆ.
ಅರಳಿಕಟ್ಟೆಯೇ ಆಶ್ರಯ...
ಕೋಲಾರದ ಕಠಾರಿ ಪಾಳ್ಯದ ಸಮೀಪ ಇರುವ ಕಠಾರಿ ಗಂಗಮ್ಮ ದೇವಾಲಯ ಹಿಂಭಾಗದ ಅರಳಿಕಟ್ಟೆಯ ಮೇಲೆ 82 ವರ್ಷ ವಯಸ್ಸಿನ ವೃದ್ಧ ನಂಜುಂಜಪ್ಪ ಕಳೆದ ಹತ್ತಾರು ವರ್ಷಗಳಿಂದ ಜೀವನಕ್ಕಾಗಿ ಆಶ್ರಯ ಪಡೆದುಕೊಂಡಿದ್ದಾರೆ.
ಬಾಳಿಗೆ ಉರುಗೋಲು ಆಗಿದ್ದ ಪತ್ನಿಯನ್ನು ಕಳೆದು ಕೊಂಡಿರುವುದಲ್ಲದೆ, ಇದ್ದ ಒಬ್ಬ ಮಗನ ಅಗಲಿಕೆಯಿಂದಾಗಿ ಪ್ರಸ್ತುತ ಹೆಣ್ಣು ಮಕ್ಕಳ ಮನೆಯಲ್ಲಿ ಆಶ್ರಯ ಪಡೆದಿದ್ದರೂ ಪ್ರತಿನಿತ್ಯ ಬೆಳಿಗ್ಗೆ 8.30 ರಿಂದ ಸಂಜೆ 5ಗಂಟೆಯವರಿಗೆ ಬಿಸಿಲು, ಗಾಳಿ, ಮಳೆ ಲೆಕ್ಕಿಸದೆ ಅರಳಿಕಟ್ಟೆಯ ಮೇಲೆ ಕುಳಿತು ತರಕಾರಿ ಮತ್ತು ಹಣ್ಣುಗಳ ಮಾರಾಟ ಮಾಡಿ ಅದರಲ್ಲಿ ಬಂದ ಹಣವನ್ನು ಹೆಣ್ಣು ಮಕ್ಕಳಿಗೆ ನೀಡಿ ಬದುಕಿನ ರಥವನ್ನು ಎಳೆಯುತ್ತಿದ್ದಾರೆ. ಸರ್ಕಾರ ನೀಡುವ ಪಿಂಚಣಿ ಕೇವಲ ರು.400 ವ್ಯಾಪಾರದಿಂದ ಪ್ರತಿದಿನ ರು.50 ರಿಂದ 70 ಸಿಗುತ್ತದೆ. ದೇಹದಲ್ಲಿ ಶಕ್ತಿ ಕುಗ್ಗಿದೆ. ಇನ್ನೆಷ್ಟು ದಿನ ಸೊಂಟ ಬಗ್ಗಿಸಿ ಕೆಲಸ ಮಾಡಬೇಕೋ ಎಂದಾಗ ಹಿರಿಯ ನಾಗರಿಕ ನಂಜುಂಡಪ್ಪ ಅವರ ಕಣ್ಣಂಚಲ್ಲಿ ನೀರು ತುಂಬಿಕೊಂಡಿತು.
-ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

