ಕೋಲಾರ

ಕೋಳಿ ಸಾಕಾಣಿಕೆದಾರರ ಪ್ರತಿಭಟನೆ

Published On :

ಚಿಕ್ಕಬಳ್ಳಾಪುರ: ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಬಹಳಷ್ಟು ಮಂದಿ ರೈತರು ಕೋಳಿ ಸಾಕಾಣಿಕೆಯನ್ನೂ ಸಹ ಕೈಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಕೋಳಿ ಸಾಕಾಣಿಕೆಯನ್ನು ಕೃಷಿ ಉಪ ಕಸಬನ್ನಾಗಿ ಘೋಷಿಸಬೇಕೆಂದು ಕೋಳಿ ಸಾಕಾಣಿಕೆದಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಎಪಿಎಂಸಿ ಯಾರ್ಡ್‌ನಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಕೋಳಿ ಸಾಕಾಣಿಕೆದಾರರು, ಶಿಡ್ಲಘಟ್ಟ ವೃತ್ತದಲ್ಲಿ ಧರಣಿ ಕುಳಿತರು. ಇದೇ ವೇಳೆ ಕೋಳಿಗಳನ್ನಿಡಿದುಕೊಂಡೇ ಧಿಕ್ಕಾರ ಕೂಗಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಇದರಲ್ಲೇ ಬದುಕು ಕಾಣುತ್ತಿದ್ದಾರೆ: ಇತ್ತೀಚಿನ ದಿನಗಳಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಸಂದರ್ಭದಲ್ಲಿ ಮಳೆ ಆಭಾವ, ಅಂತರ್ಜಲ ಮಟ್ಟ ಕುಸಿತ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ, ಬೆಲೆ ಏರಿಕೆ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಅನುಭವಿಸುತ್ತ ಆರ್ಥಿಕ ಲಾಭವನ್ನು ಗಳಿಸುವಲ್ಲಿ ತೊಂದರೆಗೆ ಗುರಿಯಾಗುತ್ತಿದ್ದಾರೆ. ಈ ನಡುವೆ ತಮ್ಮ ಕೃಷಿ ಜಮೀನುಗಳಲ್ಲಿ ಕೋಳಿ ಸಾಕಾಣಿಕೆ  ಕೈಗೊಂಡ ರೈತರು ಲಾಭವನ್ನು ಗಳಿಸುತ್ತಿದ್ದಾರೆ. ಆದರೆ, ಕೋಳಿ ಸಾಕಾಣಿಕೆಗೆ ಅಗತ್ಯವಿರುವ ಪ್ರೋತ್ಸಾಹವು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಏನೇನು ಬೇಡಿಕೆಗಳು: ಕೋಳಿ ಸಾಕಾಣಿಕೆಯು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು ಇದನ್ನು ರೈತರು ಕೈಗೊಂಡಾಗ ಆರ್ಥಿಕವಾಗಿ ಲಾಭವನ್ನು ಗಳಿಸಬಹುದು ಎಂದ ಅವರು, ಕೋಳಿ ಸಾಕಾಣಿಕೆ ಕೃಷಿಯ ಉಪ ಕಸಬು ಎಂದು ಘೋಷಿಸಬೇಕು. ಅಲ್ಲದೇ ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಸರ್ಕಾರ ನೀಡುವ ವಿಶೇಷ ಸವಲತ್ತುಗಳನ್ನು ಕೋಳಿ ಸಾಕಾಣಿಕೆಗೂ ನೀಡಬೇಕು. ಪ್ರೋತ್ಸಾಹ ಧನವನ್ನು ಸಹ ನಿಗದಿಪಡಿಸಬೇಕು. ವಿಶೇಷ ಸಬ್ಸಿಡಿ ದರದಲ್ಲಿ ಇನ್ನೂ ಹೆಚ್ಚಿಗೆ ಸಾಲ ಸೌಲಭ್ಯಗಳನ್ನು ದೊರಕಿಸಿ ಕೊಡುವ ಮೂಲಕ ಕೋಳಿ ಸಾಕಾಣಿಕೆಯ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ನಿರ್ವಹಣೆ ವೆಚ್ಚ ದುಬಾರಿ: ಪ್ರಸ್ತುತ ದಿನಗಳಲ್ಲಿ ಕೋಳಿ ಸಾಕಾಣಿಕೆಯು ಲಾಭದಾಯಕವಾಗಿದ್ದರೂ,  ಸಾಕಾಣಿಕೆಯ ಕೋಳಿಗಳ ನಿರ್ವಹಣೆ ವೆಚ್ಚ ದುಬಾರಿಯಾಗಿದೆ. ಅಲ್ಲದೆ, ಕೋಳಿಗಳು ಕಾಯಿಲೆ ತಗುಲಿದಾಗ ಆರ್ಥಿಕ ಸಮಸ್ಯೆ ಎದುರಾಗುತ್ತದೆ.ಈ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆ ಕೃಷಿಯ ಉಪ ಕಸಬಾಗಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಭರವಸೆ: ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ವಿಶಾಲ್, ಕೋಳಿ ಸಾಕಾಣಿಕೆದಾರರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕೋಳಿ ಸಾಕಾಣಿಕೆಯ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ರಾಮಕೃಷ್ಣಪ್ಪ, ಮುಖಂಡರಾದ ಜಗದೀಶ್, ಮಧುಸೂಧನ್ಚಾರಿ, ನಂಜುಂಡಪ್ಪ, ಜಿ.ವೆಂಕಟೇಶ್, ಮುನೇಗೌಡ, ಬಿ.ವಿ.ಅಶ್ವತ್ಥರೆಡ್ಡಿ, ಶ್ರೀನಿವಾಸ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.