ಐತಿಹಾಸಿಕ ಕೆರೆ ಮಲೀನ
ಕ.ಪ್ರ.ವಾರ್ತೆ ಗುಡಿಬಂಡೆ ಏ.1
ತಾಲೂಕಿನ ಜನತೆಯ ಜೀವನಾಡಿ ಮತ್ತು ಶತಮಾನಗಳ ಇತಿಹಾಸ ಹೊಂದಿರುವ ಅಮಾನಿ ಬೈರ ಸಾಗರದ ಕೆರೆ ಸುತ್ತ ಮುತ್ತಲಿನ ಪರಿಸರ ತ್ಯಾಜ್ಯ ವಸ್ತುಗಳ ವಿಲೇವಾರಿ ಪ್ರದೇಶವಾಗಿ ಮಾರ್ಪಟ್ಟಿದೆ.
ಕೆರೆಯ ಉಸ್ತುವಾರಿ ನೋಡಿಕೊಳ್ಳಬೇಕಾದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಐತಿಹಾಸಿಕ ಕೆರೆ ವಿನಾಶದಂಚಿನಲ್ಲಿದೆ. ಪಟ್ಟಣದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿರುವ ಕೆಲವರು ಅಂಗಡಿಯ ತ್ಯಾಜ್ಯವನ್ನು ತಂದು ಕೆರೆಯ ಸುತ್ತ ಮುತ್ತ ಸುರಿಯುತ್ತಿದ್ದಾರೆ. ಇದರಿಂದಾಗಿ ಕೆರೆಯಲ್ಲಿರುವ ಅಲ್ಪ ಸ್ವಲ್ಪ ನೀರು ಮಲೀನಗೊಂಡು ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಮತ್ತೊಂದೆಡೆ ತ್ಯಾಜ್ಯ ವಸ್ತುಗಳಲ್ಲಿರುವ ಮಾಂಸದ ಚೂರುಗಳನ್ನು ತಿನ್ನುವ ಸಲುವಾಗಿ ಅಪಾರ ಪ್ರಮಾಣದಲ್ಲಿ ಅಲ್ಲಿ ಸೇರುವ ಬೀದಿ ನಾಯಿಗಳ ಕಾಟದಿಂದಾಗಿ ಕೆರೆ ಏರಿ ಮೇಲೆ ಸಂಚರಿಸುವ ವಾಹನ ಸವಾರರು, ಹಾಗೂ ವಾಯು ವಿಹಾರಿಗಳು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೆರೆ ಅಂಚಿನಲ್ಲಿ ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಗಳು ಅನಧಿಕೃತವಾಗಿ ತಲೆ ಎತ್ತಿದ್ದು, ಈ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು, ಅದೇ ಜಾಗದಲ್ಲಿ ಅಕ್ರಮವಾಗಿ ಹಂದಿಗಳ ಸಾಕಣೆಯನ್ನೂ ಮಾಡುತ್ತಿದ್ದಾರೆ.
ಹೀಗಾಗಿ ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳೂ ಸಹ ಕೆರೆ ನೀರಿನಲ್ಲಿ ಮಿಶ್ರಗೊಂಡು ಇನ್ನಷ್ಟು ಮಾಲಿನ್ಯಕ್ಕೆ ಕಾರಣವಾಗಿವೆ. ಇವೆಲ್ಲದರ ನಡುವೆ ಕೆರೆ ಏರಿ ತುಂಬಾ ಹೇರಳವಾಗಿ ಮುಳ್ಳುಪೊದೆ, ಗಿಡ ಗೆಂಟೆಗಳು ಬೆಳೆದು ನಿಂತಿದ್ದು ವಾಹನಗಳ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಅದರೆ ಸಮಸ್ಯೆ ನಿವಾರಿಸಬೇಕಾದ ಅಧಿಕಾರಿಗಳು ಮಾತ್ರ ಎಂದಿನಂತೆ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ.
ಹೂಳೇ ಜಾಸ್ತಿ: ಈ ಕೆರೆ ತುಂಬಾ ಹೂಳೇ ಇದೆ. ಆರ್‌ಆರ್‌ಆರ್ ಯೋಜನೆಯಲ್ಲಿ ಲಕ್ಷಾಂತರ ರುಪಾಯಿ ಕೆರೆಯ ಹೂಳು ತೆಗೆಯಲು ವೆಚ್ಚ ಮಾಡಿದ್ದರೂ ಸಹ ಕೆರೆಯ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚಾಗಿಲ್ಲ. ಆ ಹಣ ಸೂಕ್ತ ರೀತಿಯಲ್ಲಿ ಬಳಕೆಯಾಗಿಲ್ಲ ಎಂಬುದು ಸಾರ್ವಜನಿಕರ ದೂರು. ಈ ಮಧ್ಯೆ ಪಟ್ಟಣದಲ್ಲಿ ಉಂಟಾಗಿರುವ ನೀರಿನ ಅಭಾವವನ್ನು ಪರಿಹರಿಸಲು ಮುಂದಾಗಿರುವ ಸ್ಥಳೀಯ ಪಪಂ ಕೆರೆ ನೀರನ್ನು ಸಾರ್ವಜನಿಕ ಬಳಕೆಗೆ ಒದಗಿಸಲು ಸಿದ್ಧತೆ ನಡೆಸಿದೆ. ಆದರೆ, ಅದಕ್ಕೂ ಮೊದಲು ನಾಗರಿಕರ ಆರೋಗ್ಯದ ಹಿತ ದೃಷ್ಟಿಯಿಂದ ನೀರಿನ ಸರಿಯಾದ ಶುದ್ಧೀಕರಣ, ಕೆರೆ ಪ್ರದೇಶದ ಸ್ವಚ್ಚತೆ ಮತ್ತು ನೈರ್ಮಲ್ಯದ ಕಡೆ ಗಮನ ಹರಿಸಬೇಕಾದ ಅವಶ್ಯಕತೆ ಸಾಕಷ್ಟಿದೆಯೆಂಬ ಅಭಿಪ್ರಾಯ ಸಾರ್ವಜನಿಕರದ್ದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

