ಫೋಟೋ ಬಿಲ್ಲಿಂಗ್ ಪ್ರಾಯೋಗಿಕ ಜಾರಿ
ಬಂಗಾರಪೇಟೆ: ದೋಷಯುಕ್ತ ಬಿಲ್‌ಗಳ ತೊಂದರೆಯನ್ನು ಆರಂಭಿಕ ಹಂತದಲ್ಲೇ ನಿವಾರಿಸುವ ನಿಟ್ಟಿನಲ್ಲಿ 'ಫೋಟೋ ಬಿಲ್ಲಿಂಗ್' ಎಂಬ ನೂತನ ವ್ಯವಸ್ಥೆಯನ್ನು ಬಂಗಾರಪೇಟೆ ತಾಲೂಕಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಜಾರಿಗೆ ತಂದಿದೆ.
ಬಿಲ್ ಮೊತ್ತದಲ್ಲಿ ಏರುಪೇರು ಅಥವಾ ಬಳಸಿದ ಯುನಿಟ್‌ಗಿಂತಲೂ ಹೆಚ್ಚು ಹೆಚ್ಚು ಮೌಲ್ಯದ ಬಿಲ್ ನೀಡಿದ ಅನೇಕ ಘಟನೆಗಳು ನಡೆದಿವೆ. ಇಂಥ ಪ್ರಕರಣಗಳು ಆಗಾಗ ಘಟಿಸುತ್ತಲೇ ಇರುತ್ತವೆ. ಮೀಟರ್ ರೀಡರ್‌ಗಳು ದಾಖಲೆ ಸಂಗ್ರಹಿಸುವಾಗ ಉಂಟಾಗುವ ತಪ್ಪು ಅಥವಾ ನಿರ್ಲಕ್ಷ್ಯ ಇಂತಹ ದೋಷಯುಕ್ತ ಬಿಲ್‌ಗಳಿಗೆ ಪ್ರಮುಖ ಕಾರಣ. ಈ ರೀತಿಯ ಸಮಸ್ಯೆಗಳನ್ನು ಆರಂಭದಲ್ಲೇ ನಿವಾರಿಸಲು ಫೋಟೋ ಬಿಲ್ಲಿಂಗ್ ತಂತ್ರಜ್ಞಾನ ಸಹಾಯಕವಾಗಲಿದೆ.
ಏನಿದು ವ್ಯವಸ್ಥೆ?: ಫೋಟೋ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ಮನೆಗೆ ತೆರಳಿ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸುವ ಮೀಟರ್ ರೀಡರ್‌ಗಳಿಗೆ ವಿಶೇಷ 3 ಎಂಪಿ ಕ್ಯಾಮೆರಾ ನೀಡಲಾಗುತ್ತದೆ. ಈ ಕ್ಯಾಮೆರಾ ಮೂಲಕ ಮೀಟರ್‌ಗಳ ಫೋಟೋ ತೆಗೆಯಬೇಕು. ಹೀಗೆ ತೆಗೆಯಲಾದ ಫೋಟೋ ಜಿಪಿಎಸ್ ಮೂಲದ ಉಪ ವಿಭಾಗ ಕಚೇರಿಯಲ್ಲಿ ಅಳವಡಿಸಲಾಗಿರುವ ದತ್ತಾಂಶದಲ್ಲಿ ನೇರವಾಗಿ ಸಂಗ್ರಹವಾಗುತ್ತದೆ. ನಂತರ ಬಿಲ್ ಜಾರಿಗೊಳಿಸುವ ಸಂದರ್ಭಧಲ್ಲಿ ಡಾಟಾಬೇಸ್‌ನಲ್ಲಿರುವ ಮಾಹಿತಿ ಹಾಗೂ ಮೀಟರ್ ರೀಡರ್‌ಗಳು ಸಂಗ್ರಹಿಸುವ ಅಂಕಿ ಅಂಶಘಳನ್ನು ಹೋಲಿಸಿ, ಬಿಲ್ ಮುದ್ರಿಸಲಾಗುತ್ತದೆ. ಈ ವ್ಯವಸ್ಥೆಯಿಂದ ಮೀಟರ್ ರೀಡರ್‌ಗಳು ಖುದ್ದಾಗಿ ಗ್ರಾಹಕರ ಮನೆಗೆ ತೆರೆಳಿ ಮಾಹಿತಿ ಸಂಗ್ರಹಿಸಿದ್ದಾನೆಯೇ ಎಂಬುದೂ ಕೂಡಾ ಖಚಿತವಾಗುತ್ತದೆ ಎಂದು ಇಲಾಖೆಯ ಎಇಇ ಚಲಪತಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈ ನೂತನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ತಾಲೂಕಿನಲ್ಲಿ ಜಾರಿಗೆ ತರಲಾಗಿದೆ. ಸದ್ಯ ಈಗ ಗ್ರಾಮೀಣ ಪ್ರದೇಶದಲ್ಲಿ ಜಾರಿಗೊಳಿಸಲಾಗಿದೆ. ಅಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸಿ, ನಂತರ ತಾಲೂಕಿನಾದ್ಯಂತ ವಿಸ್ತರಿಸಲಾಗುವುದು. ನಂತರ ರಾಜ್ಯದ ಇತರೇ ಕಡೆಗಳಲ್ಲಿಯೂ ಇಲಾಖೆ ಜಾರಿಗೆ ಚಿಂತನೆ ನಡೆಸಿದೆ ಎಂದು ಚಲಪತಿ ತಿಳಿಸಿದರು.
ಭಕ್ತರಿಂದ ಸಿದ್ಧಗಂಗಾಶ್ರೀ ಹುಟ್ಟುಹಬ್ಬ ಆಚರಣೆ
ಕೋಲಾರ: ನಗರದ ಗಾಂಧಿವನದಲ್ಲಿ ಹಾಗೂ ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 107 ನೇ ಹುಟ್ಟುಹಬ್ಬವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ತಾಲೂಕಿನ ಕಳ್ಳಿಪುರದ ಶ್ರೀ ಬಸವೇಶ್ವರ ಯುವಕ ಸಂಘದಿಂದ ಗಾಂಧಿವೃತ್ತದಲ್ಲಿ ಶ್ರೀ ಶಿವಕುಮಾರಸ್ವಾಮಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗುರುನಮನ ಸಲ್ಲಿಸಿದರು.
ನಂತರ ಸಂಘದ ಕಾರ್ಯಕರ್ತರು ತುಮಕೂರಿಗೆ ತೆರಳಿ ಸ್ವಾಮಿಯ ದರ್ಶನ ಭಾಗ್ಯಪಡೆದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ವಿಜಯಕುಮಾರ್, ಪದಾಧಿಕಾರಿಗಳಾದ ನಟರಾಜು, ನದೀಶ್, ವಿಜಿ, ಉಮೇಶ್ ಹಾಗೂ ಮುಖ್ಯ ಸಲಹೆಗಾರ ಸಚ್ಚಿದಾನಂದ ಇನ್ನಿತರರು ಇದ್ದರು. ನಗರದ ಅರಳೆಪೇಟೆಯ ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಸಿ. ಗಂಗಾಧರ್ ಅವರ ನೇತೃತ್ವದಲ್ಲಿ ಬಸವೇಶ್ವರ ದೇವಾಲಯದಲ್ಲಿ ಶಿವಕುಮಾರಸ್ವಾಮಿಗಳ ಹುಟ್ಟುಹಬ್ಬ ಆಚರಿಸಲಾಯಿತು. ಪದಾಧಿಕಾರಿಗಳಾದ ಮುದ್ರಾಜಾಪ್ಪ, ದೇವರಾಜ್, ಧರಣೇಶ್ವರ್, ತರುಣ್, ಅಡುಗೆ ಮಂಜುನಾಥ್, ಆರ್ಚಕರಾದ ಯಡಿಯೂರಪ್ಪ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

