ಎಎಪಿ ಪ್ರಣಾಳಿಕೆ ಬಿಡುಗಡೆ
ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಆರ್ಕೇಶ್ ಬುಧವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕೇವಲ ಸುಳ್ಳು ಭರವಸೆಗಳ ದೊಡ್ಡ ಪಟ್ಟಿಯನ್ನು ನೀಡಿ ಜನರನ್ನು ವಂಚಿಸುವುದಕ್ಕಿಂತ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗಿದೆ ಎಂದು ಒತ್ತಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುಡಿಯುವ ನೀರನ್ನು ಮತ್ತು ಒಳ್ಳೆಯ ಆರೋಗ್ಯವನ್ನು ಜನರಿಗೆ ಒದಗಿಸುವುದೇ ಎಎಪಿಯ ಪ್ರಮುಖ ಆದ್ಯತೆಯಾಗಿದ್ದು ಪರಮಶಿವಯ್ಯ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಯ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ, ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಕಾರ ಸಹ ಗಂಭೀರವಾಗಿ ತೆಗೆದುಕೊಳ್ಳದಿರುವುದರಿಂದ ನೀರಿನ ಸಮಸ್ಯೆಗೆ ಜನರು ಇಲ್ಲಿ ಹೆಚ್ಚಿಗೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದರು.
ಕ್ಷೇತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆಯಿಂದ ಅಂತರ್ಜಲ ಬತ್ತಿ ಹೋಗುತ್ತಿದೆ. ಒಂದು ಕಡೆ ಮರಳನ್ನು ಲೂಟಿ ಮಾಡುತ್ತ ಹಲವರು ಅಂತರ್ಜಲದ ಬಗ್ಗೆ ಮಾತನಾಡುತ್ತಿರುವಂತಹುದು ದುರದೃಷ್ಟಕರ. ಇದಕ್ಕೆ ಕಡಿವಾಣ ಹಾಕಬೇಕು. ಮಳೆ ಕೊಯ್ಲು, ನೀರು ಇಂಗಿಸುವಿಕೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಅಂತರ್ಜಲವನ್ನು ಮತ್ತು ನೀರಾವರಿ ಮೂಲಗಳನ್ನು ಕಾಪಾಡಬೇಕಾಗಿದೆ ಎಂದರು.
ಬೆಂಗಳೂರಿಗೆ ಸಮೀಪವಿರುವ ಕ್ಷೇತ್ರದಲ್ಲಿ ದಲ್ಲಾಳಿಗಳು ರೈತರನ್ನು ವಂಚಿಸುತ್ತಿದ್ದಾರೆ. ಕಡಿಮೆ ಬೆಲೆಗೆ ಭೂಮಿಯನ್ನು ತೆಗೆದುಕೊಂಡು ಬೇರೆಯವರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಇದರಿಂದ ರೈತರಿಗೆ ಸಿಗಬೇಕಾದ ಲಾಭ ದಲ್ಲಾಳಿಗಳಿಗೆ ಸಿಗುತ್ತಿದೆ ಎಂದು ಆರೋಪಿಸಿದರು.
ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಯತ್ನ, ಕೈಗಾರೀಕರಣ, ಯುವ ಸಬಲೀಕರಣ, ಉದ್ಯೋಗಾವಕಾಶ ಹೆಚ್ಚಳ, ದಲ್ಲಾಳಿಗಳ ಭೂ ಕಬಳಿಕೆಯನ್ನು ತಡೆಗಟ್ಟೆ ರೈತರಿಗೆ ನ್ಯಾಯ ಒದಗಿಸುವುದು, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ದೊರಕಿಸಿಕೊಡುವುದು ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶೋಭಾದೇವಿ, ಶಶಿ, ಎ.ಕೆ. ನಾಗರಾಜ್, ಜಬೀರ್, ಸುಭಾನ್, ಮಂಜುನಾಥ್, ಅಭಿಲಾಷ್ ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

