ಕ್ಷೇತ್ರದ ಅಭ್ಯರ್ಥಿಗಳ ವೃತ್ತಿ, ಶಿಕ್ಷಣ ಏನು?
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ರಾಜ್ಯದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಈ ಬಾರಿ 19 ಮಂದಿ ಹುರಿಯಾಳುಗಳು ಅಖಾಡದಲ್ಲಿದ್ದಾರೆ. ಇದರಲ್ಲಿ 8 ಮಂದಿ ಪಕ್ಷೇತರರು ಮತ್ತು 11 ಮಂದಿ ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಲು ಬಯಸುತ್ತಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಕಸಬು ಏನು ಎನ್ನುವ ಕುತೂಹಲ ಸಹಜ.
ಮಾಜಿ ಮುಖ್ಯಮಂತ್ರಿಗಳಿಬ್ಬರ ಪೈಪೋಟಿ ಕಾರಣವಾಗಿ ಇಡೀ ರಾಜ್ಯದ ಗಮನ ಸೆಳೆದಿದೆ. ನರೇಂದ್ರ ಮೋದಿ ಅಲೆಯಲ್ಲಿ ಮಾಜಿ ಸಚಿವರು ಅಗ್ನಿಪರೀಕ್ಷೆಗೆ ಧುಮುಕಿರುವುದು ಮತ್ತಷ್ಟು ರೋಚಕತೆಗೆ ಕಾರಣವಾಗಿದೆ. ನಗರದ ವಾಪಸಂದ್ರದ ನಿವಾಸಿ ಯಾಕೂಬ್ ಶರೀಫ್ ವಕೀಲರು. ಇವರು ಬೆಂಗಳೂರಿನ ಶೇಷಾದ್ರಿಪುರಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದು, ಬಹುಜನ ಮುಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರು ಇದೀಗ ರಾಜಕೀಯದಲ್ಲಿ ಯಶಸ್ಸನ್ನು ಕಾಣಲು ಮುಂದಾಗಿದ್ದಾರೆ.
ಗೌರಿಬಿದನೂರು ತಾಲೂಕಿನ ದಂಡಿಗಾನಹಳ್ಳಿಯ ಡಿ.ಎನ್. ನರಸಿಂಹಮೂರ್ತಿ ಚಾಲಕರಾಗಿದ್ದಾರೆ. ಓದಿರುವುದು ಎಸ್ಎಸ್ಎಲ್ಸಿ. ಆರ್ಥಿಕವಾಗಿ ಸ್ಥಿತಿವಂತರಲ್ಲ. ಆದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹೊಸಕೋಟೆಯ ದೊಡ್ಡಳಗೆರೆಯ ಡಿ.ಟಿ. ವೆಂಕಟೇಶ್ ವಿದ್ಯಾರ್ಹತೆ ಬಿಎ, ವೃತ್ತಿ ವ್ಯವಸಾಯ. ಇವರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ನೆಲಮಂಗಲ ತಾಲೂಕಿನ ಕೆ.ಜಿ.ಶ್ರೀನಿವಾಸಪುರದ ನಂಜಪ್ಪ ಓದಿರುವುದು 7 ನೇ ತರಗತಿ. ಕೃಷಿಕರಾಗಿದ್ದಾರೆ. ಯಲಹಂಕ ಉಪ ನಗರದ ಬೊಮ್ಮಸಂದ್ರದ ನಿವಾಸಿ ಕೆ.ಎಸ್. ಸ್ವಾಮಿ ಬಿ.ಎ ಪದವಿ ಪಡೆದಿದ್ದು ಸಮಾಜಸೇವಕರು ಮತ್ತು ಪತ್ರಕರ್ತರಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿ ಹೊಸಕೋಟೆಯ ತತ್ತನೂರು ಗ್ರಾಮದ ಟಿ.ವಿ. ಮಂಜುನಾಥ್ ಗೌಡ ಓದಿರುವುದು 10 ನೇ ತರಗತಿ. ಕೃಷಿಕರಾಗಿದ್ದಾರೆ. ದೇವನಹಳ್ಳಿಯ ಸಿಂಗ್ರಹಳ್ಳಿಯ ಜಯಪ್ರಕಾಶ್ ಯಾದವ್ ಸ್ವಯಂ ಉದ್ಯೋಗಿ. 10 ನೇ ತರಗತಿ ಓದಿರುವ ಇವರು ಸ್ವಯಂ ಉದ್ಯೋಗದಲ್ಲಿದ್ದಾರೆ. ಗೌರಿಬಿದನೂರಿನ ಗೊಟಕಣಾಪುರದ ನಿವಾಸಿ ಜಿ.ಎನ್. ರವಿ ಚಿಕ್ಕಬಳ್ಳಾಪುರದಲ್ಲಿ ಐಟಿಐ ತರಬೇತಿ ಮುಗಿಸಿದ್ದಾರೆ. ಈಗ ಪಕ್ಷೇತರ ಅಭ್ಯರ್ಥಿ. ಸಮಾಜಸೇವಕರು, ಜೊತೆಗೆ ವ್ಯವಸಾಯಗಾರರಾಗಿದ್ದಾರೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ. ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು. ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿಯೇ ಹಿರಿಯರು. ಬೆಂಗಳೂರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿದ್ದು ಸ್ವತಃ ಕವಿಗಳೂ ಆಗಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ. ಮಾಜಿ ಮುಖ್ಯಮಂತ್ರಿ, ಬೆಂಗಳೂರಿನ ಜೆಪಿ ನಗರದಲ್ಲಿ ವಾಸ. ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿದ್ದು, ಕೃಷಿಕರು ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ನ ಪ್ರಭಾವಿ ಮುಖಂಡರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಹೊಸಕೋಟೆಯ ತಮ್ಮೇಗೌಡ ಬಡಾವಣೆಯಲ್ಲಿ ವಾಸವಾಗಿದ್ದು, ಕಾನೂನು ಪದವಿ ಪಡೆದಿದ್ದಾರೆ. ಸಾರ್ವಜನಿಕ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿದ್ದಾರೆ.
ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಸಿಪಿಎಂ ಅಭ್ಯರ್ಥಿ. ಬಾಗೇಪಲ್ಲಿ ಪಟ್ಟಣದ 7 ನೇ ವಾರ್ಡಿನಲ್ಲಿ ವಾಸ. ಸಾರ್ವಜನಿಕ ಸೇವೆಯಲ್ಲಿದ್ದಾರೆ. ಜೆಡಿಯು ಅಭ್ಯರ್ಥಿ ಜಿ.ಕೆ.ಸಿ. ರೆಡ್ಡಿ. ಬೆಂಗಳೂರಿನ ಜೆಪಿ ನಗರದಲ್ಲಿ ವಾಸ. ಶಿಕ್ಷಣ ತಜ್ಞರು ಮತ್ತು ಬೆಂಗಳೂರು ಬನಶಂಕರಿಯ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಮತ್ತು ಟೆಕ್ನಾಲಜಿಯ ಉಪಾಧ್ಯಕ್ಷರಾಗಿದ್ದಾರೆ. ಜವಹಾರಲಾಲಲ್ನೆಹರೂ ವಿಶ್ವ ವಿದ್ಯಾಲಯದಿಂದ ಪಿ.ಎಚ್ಡಿ ದಕ್ಕಿಸಿಕೊಂಡಿದ್ದಾರೆ. ಮಂಗಳೂರು ಮೂಲದ ರಾಬಿನ್ ಮ್ಯಾಥೂಸ್ ನರೇಕಟ್ಟು ಸಮಾಜವಾದಿ ಪಾರ್ಟಿಯ ಅಭ್ಯಥಿ. ಎಂಜಿನಿಯರ್ ಆಗಿದ್ದಾರೆ. ಎಂ.ಎಸ್ಸಿ ಓದಿದ್ದಾರೆ. ಗೌರಿಬಿದನೂರು ತಾಲೂಕಿನ ದಿನ್ನೇಹುಣಸೇನಹಳ್ಳಿಯ ಎಚ್.ಎನ್. ರಾಮಕೃಷ್ಣಾರೆಡ್ಡಿ. ಪಿರ್ಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಚುನಾವಣೆಗೆ ನಿಂತಿದ್ದು ಓದಿರುವುದು 10 ನೇ ತರಗತಿ. ಸಮಾಜಸೇವೆ ಮತ್ತು ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಹೊಸಕೋಟೆಯ ಭುವನಹಳ್ಳಿಯ ಬಿ.ಎನ್. ಗೋಪಾಲಗೌಡ ಎಂಜಿನಿಯರಿಂಗ್ ಮುಗಿಸಿದ್ದಾರೆ. ಆದರೆ, ಈಗ ವ್ಯವಸಾಯ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿದ್ದು ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.
ಖಾಸಗೀ ಸಂಸ್ಥೆಯಲ್ಲಿ ಲೆಕ್ಕಪರಿಶೋಧಕರಾಗಿರುವ ಚಿತ್ರಪ್ರಸಾದ್ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ. ಭಾರತೀಯ ವಿದ್ಯಾಭವನದಲ್ಲಿ ಪಿಜಿ ಇನ್ ಡಿಐಆರ್ ಪಿಎಂ ವ್ಯಾಸಂಗ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲುಚಿನ್ನಪ್ಪನಹಳ್ಳಿಯ ಜಿ.ಸಿ. ವೆಂಕಟರಮಣಪ್ಪ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿದ್ದು 7 ನೇ ತರಗತಿ ಓದಿ ವ್ಯವಸಾಯಗಾರರಾಗಿದ್ದಾರೆ. ಕೊನೆಯದಾಗಿ ನರಹಂತಕ ವೀರಪ್ಪನ್ರನ್ನು ಹಿಡಿಯುವ ಕಾರ್ಯಾಚರಣೆಯ ಒಂದು ಹಂತದಲ್ಲಿ ಭಾಗವಹಿಸಿದ್ದ ಕೆ. ಆರ್ಕೇಶ್ ಎಎಪಿಯ ಅಭ್ಯರ್ಥಿ. ಸಿಆರ್ಪಿಎಫ್ ನಿವೃತ್ತ ಪೊಲೀಸ್ ಅಧಿಕಾರಿ. ಎಂ.ಎ. ಪದವಿ ವ್ಯಾಸಂಗ ಮಾಡಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಯಲಹಂಕದಲ್ಲಿ ವಾಸವಾಗಿದ್ದಾರೆ.
ಕನಿಷ್ಠ ವಿದ್ಯಾರ್ಹತೆ 7 ನೇ ತರಗತಿ ಫೇಲ್ನಿಂದ ಪಿ.ಎಚ್ಡಿ ವರೆಗಿನ ಅಭ್ಯರ್ಥಿಗಳಿದ್ದು ಪಕ್ಷೇತರರಾಗಿ ಸ್ಪರ್ಧಿಸಿರುವ ಜಯಪ್ರಕಾಶ್ ಯಾದವ್ ಅಭ್ಯರ್ಥಿಗಳಲ್ಲಿ ಕಡಿಮೆ ವಯಸ್ಸಿನ (29) ಹುರಿಯಾಳು ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

