10 ವರ್ಷ ಬಳಿಕ ಜಿಲ್ಲೆಗೆ ಸೋನಿಯಾ
9ರಂದು ಮುನಿಯಪ್ಪ, ಮೊಯ್ಲಿ ಪರ ಪ್ರಚಾರ ಟಿ 2004ರಲ್ಲಿ ಕೋಲಾರಕ್ಕೆ ಬಂದಿದ್ದರು
ಕನ್ನಡಪ್ರಭ ವಾರ್ತೆ, ಕೋಲಾರ, ಏ.6
ಏ.17 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕೋಲಾರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಎಂ. ವೀರಪ್ಪಮೊಯ್ಲಿ ಪರ ಮತಯಾಚನೆಗಾಗಿ ಏ.9ರಂದು ಕೋಲಾರಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುತ್ತಿದ್ದು ಸೋನಿಯಾ ಗಾಂಧಿಯವರ ಭದ್ರತಾ ಸಿಬ್ಬಂದಿಯ ಸೂಚನೆಗಳಂತೆ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.
ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಸೋನಿಯಾ ಗಾಂಧಿಯ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ಕ್ರೀಡಾಂಗಣಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಇದಕ್ಕೂ ಮುನ್ನ ಅಲ್ ಅಮಿನ್ ಕಾಲೇಜಿನ ಕ್ರೀಡಾಂಗಣಕ್ಕೆ ತೆರಳಿ ಹೆಲಿಪ್ಯಾಡ್ ವ್ಯವಸ್ಥೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಬೇಕು, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಬೇಕು, ಕ್ರೀಡಾಂಗಣದ ಸಮೀಪದ ಕಟ್ಟಡಗಳ ಮೇಲೆ ಬಂದೂಕುಧಾರಿ ಪೊಲೀಸರನ್ನು ಕವಾಲುಗಾಗಿ ನಿಯೋಜಿಸಿ, ಸಾಮಾಜಘಾತುಕ ಶಕ್ತಿಗಳ ಮೇಲೆ ನಿಗಾವಹಿಸಲು ಬೈನಾಕ್ಯುಲರ್ಗಳನ್ನು ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿಯವರಿಗೆ ಸೂಚಿಸಿದರು. ವೇದಿಕೆಯ ಮೇಲೆ ಸೋನಿಯ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಅಭ್ಯರ್ಥಿಗಳು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ವೇದಿಕೆಯಲ್ಲಿ ಯಾವುದೇ ಗೊಂದಲ, ದೋಷ ಇಲ್ಲದಂತೆ ಎಚ್ಚರವಹಿಸಬೇಕು. ಅಗತ್ಯವಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಳೆಯ ರೌಡಿಗಳನ್ನು ಠಾಣೆಗೆ ಕರೆಸಿಕೊಂಡು ಎಚ್ಚರಿಕೆ ನೀಡಬೇಕು. ಹೆದ್ದಾರಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳ ಮೇಲೆ ನಿಗಾವಹಿಸಿ ಅನುಮಾನಸ್ಪದ ವ್ಯಕ್ತಿಗಳು ಮತ್ತು ಅವರ ಬಳಿ ಇರುವ ವಸ್ತುಗಳನ್ನು ತಪಾಸಣೆ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.
ಬಿಜೆಪಿ ಪರ ಮೋದಿ ಪ್ರಚಾರ?
ಬಿಜೆಪಿ ಅಭ್ಯರ್ಥಿ ಪರ ನರೇಂದ್ರ ಮೋದಿಯವರನ್ನು ಪ್ರಚಾರಕ್ಕೆ ಕರೆತರಲು ಪ್ರಯತ್ನ ನಡೆಯುತ್ತಿದೆ. ರಾಜ್ಯಕ್ಕೆ ಮೋದಿ ಏ.13 ಅಥವಾ 15 ರಂದು ಭೇಟಿ ನೀಡುವ ನಿರೀಕ್ಷೆಗಳಿದ್ದು, ಕೋಲಾರದಲ್ಲಿ ಮೋದಿ ಸಭೆಗಾಗಿ ಬಿಜೆಪಿಯ ನಾಯಕರು ಗಂಭೀರವಾಗಿ ಪ್ರಯತ್ನಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

