ಕಾಡುವ ಸೆಕೆಗೆ ತಂಪೆರೆಯುತ್ತಿರುವ ಈಜುಕೊಳ
ಚಿಕ್ಕಬಳ್ಳಾಪುರ: ಸುಡು ಬಿಸಿಲಿಗೆ ಮೈ ಬೆವರಿಳಿಸುತ್ತಿರುವ ಸಂದರ್ಭದಲ್ಲಿ ನಗರದ ಸರ್.ಎಂ.ವಿ. ಕ್ರೀಡಾಂಗಣದ ಈಜುಕೊಳ ಹಲವರನ್ನು ಆಕರ್ಷಿಸುತ್ತಿದೆ. ಈಜು ಕಲಿಯುವುದರ ಜೊತೆಗೆ ಸೆಖೆಯಿಂದ ತಪ್ಪಿಸಿಕೊಳ್ಳಲು ಅನೇಕರಿಗೆ ಈಜುಕೊಳ ಸಹಕಾರಿಯಾಗಿದೆ.
ನಗರದ ಸರ್.ಎಂ.ವಿ. ಕ್ರೀಡಾಂಗಣಕ್ಕೆ ಪ್ರತಿನಿತ್ಯ ಕ್ರೀಡಾಪಟುಗಳು ಫುಟ್‌ಬಾಲ್, ವಾಲೀಬಾಲ್, ಕ್ರಿಕೆಟ್, ಟೆನ್ನಿಸ್ ಸೇರಿದಂತೆ ಬೇರೆ ಬೇರೆ ಕ್ರೀಡೆಗಳನ್ನು ಆಡಲು, ತರಬೇತಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದರ ಜೊತೆಗೆ ಕ್ರೀಡಾಂಗಣದಲ್ಲಿನ ಈಜುಕೊಳ ಆಕರ್ಷಣೀಯವಾಗಿದೆ.
ಬೇಸಿಗೆ ಕಾಲವಾಗಿರುವ ಈಗ ಬಿಸಿಲಿನ ತಾಪ ಹೆಚ್ಚಾಗಿದೆ. ಇನ್ನೂ ಬೆಳಿಗ್ಗೆ 9 ಗಂಟೆ ಕಳೆಯುತ್ತಿದೆ ಎನ್ನುವಷ್ಟರಲ್ಲಿ ಮೈ ಬೆವರಿನಿಂದ ತುಂಬಿರುತ್ತದೆ. ಸ್ನಾನ ಮಾಡಿದರೂ ಬೆವರು ಹನಿ ಮೈಯಿಂದ ಹೊರ ಬರುವುದು ತಪ್ಪಲ್ಲ. ಇಂತಹ ಸಂದರ್ಭದಲ್ಲಿ ಈಜುಕೊಳದಲ್ಲಿ ಅನೇಕರು ಗಂಟೆಗಟ್ಟಲೇ ಕಾಲವನ್ನು ಕಳೆದು ಈಜು ಕಲಿಯುತ್ತಿದ್ದರೆ, ಇನ್ನೂ ಹಲವರು ಬೆವರಿನ ಕಿರಿಕಿರಿಯಿಂದ ಸ್ವಲ್ಪ ಮುಕ್ತಿಯನ್ನು ಪಡೆಯುತ್ತಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಈಜು ಕಲಿಸುವ, ಪ್ರೋತ್ಸಾಹಿಸಲು ಹೈಟೆಕ್ ಮಾದರಿಯಲ್ಲಿ ಈಜು ಕೊಳ ನಿರ್ಮಿಸಬೇಕೆಂಬ ಒತ್ತಾಯದಿಂದ ಜಿಲ್ಲಾಡಳಿತ ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಿದ್ದು ಪ್ರಾರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೂ ಗುತ್ತಿಗೆದಾರರ ನಿರ್ಲಕ್ಷ್ಯ, ನಿರ್ವಹಣೆ ವೆಚ್ಚದ ಸಮಸ್ಯೆಯಿಂದ ಈಜುಕೊಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹಲವರು ಈಜುಕೊಳವನ್ನು ಪುನಾರಂಭಿಸಬೇಕೆಂದು ತೀವ್ರ ಒತ್ತಡ ಹಾಕಿದ್ದು ಕಳೆದ 25 ದಿನಗಳ ಹಿಂದೆ ಹೊಸ ಗುತ್ತಿಗೆದಾರರಿಗೆ ಗುತ್ತಿಗೆಯನ್ನು ನೀಡಿ ನಿರ್ವಹಣೆಯನ್ನು ಕೈಗೊಳ್ಳುತ್ತಿದ್ದು ಈಜುಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈಜುಕೊಳದಲ್ಲಿ ಪ್ರತಿದಿನ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಎಂದು ಪ್ರತ್ಯೇಕ ಬ್ಯಾಚ್‌ಗಳನ್ನು ನಿಗದಿಪಡಿಸಲಾಗಿದೆ. ಮಹಿಳೆಯರಿಗಾಗಿ ಸಂಜೆ 5 ಗಂಟೆಗೆ ಪ್ರತ್ಯೇಕ ಬ್ಯಾಚ್ ವ್ಯವಸ್ಥೆ ಕಲ್ಪಿಸಲಾಗಿದೆ.
ನಿರ್ವಹಣೆ ಸುಧಾರಣೆಯಾಗಬೇಕು: ಈಜುಕೊಳದಲ್ಲಿ ಈಜಾಡುವ ಮೊದಲು ಸ್ನಾನ ಮಾಡಿ ಈಜುಕೊಳಕ್ಕೆ ಇಳಿಯಬೇಕು ಎಂಬ ನಿಯಮವಿದೆ. ಈಜುಕೊಳದ ಆವರಣದಲ್ಲಿರುವ ಶೌಚಾಲಯಗಳನ್ನು ನೀರಿನ ಕೊರತೆಯಿಂದ ಬಂದ್ ಮಾಡಿರುವುದರಿಂದ ಪರದಾಡುವಂತಾಗಿದೆ. ಈಜುಕೊಳಕ್ಕೆ ಎಂದೇ ಪ್ರತ್ಯೇಕವಾಗಿ ಕೊಳವೆಬಾವಿ ಕೊರೆಸಲಾಗಿದ್ದು, ಕೊಳವೆಬಾವಿಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದರಿಂದ ಈಜುಕೊಳದ ಗುತ್ತಿಗೆದಾರರು ಸುಮಾರು 8 ಲಕ್ಷ ಲೀಟರ್ ಸಾಮರ್ಥ್ಯವಿರುವ ಈಜುಕೊಳಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸಬೇಕಾಗಿದೆ. ಇದರಿಂದ ಸಂಬಂಧಪಟ್ಟ ಇಲಾಖೆ ಈಜುಕೊಳ ನಿರ್ವಹಣೆಯಲ್ಲಿ ಸುಧಾರಣೆ ತರಬೇಕು. ಈಜುಪಟುಗಳಿಗೆ ತೊಂದರೆಯಾಗದಿರಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

