ಯುವ ಜನರ ಸಾಧನೆ ಸಾಧ್ಯತೆ ಅಮಿತ
ಶಿಡ್ಲಘಟ್ಟ: ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಈ ದೇಶದ ಪರಿಸ್ಥಿತಿಯನ್ನೇ ಬದಾಲಾಯಿಸಬಹುದು ಎಂದು ಉಪನ್ಯಾಸಕ ಮುರಳೀಧರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, 'ಯುವಜನ ಮನಸ್ಸು ಮಾಡಿದರೆ ಏನ್ನನ್ನಾದರೂ ಸಾಧಿಸಬಹುದು. ಯಾವ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ವಿದ್ಯಾಭ್ಯಾಸ ಮಾಡಲು ಗುರಿಯಿರಬೇಕು' ಎಂದರು.
ಶಿಡ್ಲಘಟ್ಟದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಇನ್ಫೋಸಿಸ್ ನಾರಾಯಣಮೂರ್ತಿ ನಮಗೆ ಮಾದರಿಯಾಗಬೇಕು. ಅವರು ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ಕಲಿಕೆಗೆ ಬೇಕಾದ ಯಾವ ಸೌಲಭ್ಯಗಳೂ ಇರಲಿಲ್ಲ. ಆದರೂ ಅವರಲ್ಲಿದ್ದ ಏಕಾಗ್ರತೆಯಿಂದಾಗಿ ಅವರು ಇಂದು ಪ್ರಪಂಚದಲ್ಲಿ ಹೆಸರುವಾಸಿಯಾಗಿದ್ದಾರೆ. ಯುವಜನತೆ ಹೆಚ್ಚು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚಾಗಿ ಮೊಬೈಲ್, ಎಸ್ಎಂಎಸ್, ಚಾಟ್ಗಳು, ಯೂಟೂಬ್, ವಾಪ್ಟ್ಆಫ್ನಲ್ಲಿ ಮಗ್ನರಾಗಿದ್ದಾರೆ ಎಂದರು. ಪ್ರಾಂಶುಪಾಲ ನಾರಾಯಣಸ್ವಾಮಿ, ಉಪನ್ಯಾಸಕ ರಾಮಚಂದ್ರಪ್ಪ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮುಂದಿನ ತಿಂಗಳು ಅಂಬೇಡ್ಕರ್ ಜಯಂತಿ ಆಚರಣೆ: ಸೂಲಿಕುಂಟೆ
ಬಂಗಾರಪೇಟೆ: ಮುಂದಿನ ತಿಂಗಳು ಪಟ್ಟಣದಲ್ಲಿ ಅದ್ದೂರಿಯಾಗಿ ಡಾ ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಕರ್ನಾಟಕ ದಲಿತ ಸಮಾಜ ಸೇನೆ ನಿರ್ಧರಿಸಿದೆ ಎಂದು ಸೇನೆಯ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ತಿಳಿಸಿದ್ದಾರೆ.
ಪಟ್ಟಣದ ಡಾ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೇನೆಯ ಎಲ್ಲಾ ಅಧ್ಯಕ್ಷರ, ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, 'ತಾಲೂಕು ಆಡಳಿತ ಲೋಕಸಭೆ ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಜಯಂತಿಯನ್ನು ಆಚರಿಸದೆ ಕಡೆಗಣಿಸಿದೆ. ಆದ್ದರಿಂದ ಪಟ್ಟಣದಲ್ಲಿ ಅದ್ದೂರಿಯಾಗಿ ಮುಂದಿನ ತಿಂಗಳು ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಸೇನೆ ತೀರ್ಮಾನಿಸಿದೆ' ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎ.ಎಲ್.ಎನ್.ಸ್ವಾಮಿ, ಮುಖಂಡರಾದ ಮಂಜುನಾಥ್, ಹುಣಸನಹಳ್ಳಿ ರಮೇಶ್ ಅವರು ಮಾತನಾಡಿದರು. ಸಭೆಯಲ್ಲಿ ತಾಲೂಕು ಅಧ್ಯಕ್ಷ ದೇವಗಾನಹಳ್ಳಿ ಯತೀಶ್, ಆಟೋ ಜಾನ್, ಗಿರೀಶ್, ನಾಗರಾಜ್, ಗೋವಿಂದ, ಮುನಿಸ್ವಾಮಿ, ಮಹಿಳಾ ಘಟಕದ ನಗರಾಧ್ಯಕ್ಷೆ ರಾಧಾ, ಶಾಂತಿ, ಸಂಗೀತ ಮುಂತಾದವರು ಹಾಜರಿದ್ದರು.
ಅಂಚೆ ಕಚೇರಿ ನೆಲಮಹಡಿಗೆ ಸ್ಥಳಾಂತರಿಸಲು ಆಗ್ರಹ
ಅಂಗವಿಕಲರು, ವೃದ್ಧರಿಗೆ ಭಾರಿ ತೊಂದರೆ
ಬಂಗಾರಪೇಟೆ: ಪಟ್ಟಣದ ಪ್ರಧಾನ ಅಂಚೆ ಕಚೇರಿ ಮಹಡಿಯ ಮೇಲಿದ್ದು, ಹತ್ತಿ ಇಳಿಯಲಾಗದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕಚೇರಿಯನ್ನು ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಂದಿ ಮೆಡಿಕಲ್ ವೃತ್ತದಿಂದ ಸ್ವಲ್ಪ ಮುಂದೆ ಇರುವ ಪ್ರಧಾನ ಅಂಚೆ ಕಚೇರಿಯು ಮಹಡಿಯ ಮೇಲಿದೆ. ವೃದ್ಧಾಪ್ಯ ವೇತನ, ಉಳಿತಾಯ ಖಾತೆಗೆ ಹಣ ಪಾವತಿಸಲು ಹಾಗೂ ಇತರೇ ಅನೇಕ ಕೆಲಸಗಳಿಗೆ ಬರುವ ವೃದ್ಧರು, ಅಂಗವಿಕಲರಿಗೆ ತೀವ್ರ ತೊಂದರೆಯಾಗುತ್ತಿದೆ. ಅನೇಕ ಸಂಘಟನೆಗಳು ಈ ಬಗ್ಗೆ ಪ್ರತಿಭಟನೆಯನ್ನು ಮಾಡಿ, ಅಂಚೆ ಕಚೇರಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನೆಲ ಮಹಡಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಆದಾಯ ತೆರಿಗೆ ಇಲಾಖೆ ಕಚೇರಿ, ವೃತ್ತಿ ತೆರಿಗೆ ಕಚೇರಿ, ಮಕ್ಕಳ ಮತ್ತು ಕಲ್ಯಾಣ ಇಲಾಖೆಯ ಕಚೇರಿ, ಗ್ರಾಮೀಣ ಬ್ಯಾಂಕ್, ಮಹಡಿಯ ಮೇಲಿರುವ ಕಾರಣದಿಂದ ಫಲಾನುಭವಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಂಬೇಡ್ಕರ್ ಮಾನವತಾವಾದಿ:ಬೈಚಪ್ಪ ಅಭಿಮತ
ಮಾಲೂರು: ಶೋಷಿತ ವರ್ಗಗಳ ಅಭಿವೃದ್ಧಿಗೆ ತಮ್ಮ ಜೀವನ ಮುಡುಪಾಗಿಟ್ಟ ಡಾ.ಅಂಬೇಡ್ಕರ್ ದೇಶ ಕಂಡ ಮಹಾನ್ ಮಾನವತವಾದಿ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ತಾಲೂಕು ಅಧ್ಯಕ್ಷ ಭೈಚಪ್ಪ ಹೇಳಿದರು.
ಅಂಬೇಡ್ಕರ್ ಜನ್ಮದಿನಾಚರಣೆಯ ಅಂಗವಾಗಿ ಸೋಮವಾರ ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ವಿತರಿಸಿ ಮಾತನಾಡಿದರು. ಸಮಾನತೆಯ ಸಮಾಜ ನಿರ್ಮಿಸಬೇಕೆಂಬ ಅಂಬೇಡ್ಕರ್ ರವರ ಆಶಯ ಈಡೇರಬೇಕಾದರೆ ದೇಶದ ಪ್ರತಿಯೊಬ್ಬರು ಅವರ ರಚಿಸಿದ ಸಂವಿಧಾನಕ್ಕೆ ಗೌರವ ನೀಡುವಂತೆ ನಡೆದುಕೊಳ್ಳಬೇಕು ಎಂದರು. ಅಕಾಡೆಮಿಯ ರಾಜ್ಯ ಕಾರ್ಯದರ್ಶಿ ಪ್ರತಾಪ್, ಅಂಜನಿ ಸೋಮಣ್ಣ, ಚಿಕ್ಕಇಗ್ಗಲೂರು ಕೇಶವ, ಎಸ್.ಟಿ.ನಾರಾಯಣಯನ್ ಇದ್ದರು. ಇದಕ್ಕೂ ಮುನ್ನ ಬಸ್ ನಿಲ್ದಾಣ ಬಳಿಯ ಉದ್ಯಾವನವದಲ್ಲಿರುವ ಡಾ.ಅಂಬೇಡ್ಕರ್ ಪುತ್ಧಳಿಗೆ ಮಾಲಾರ್ಪಣೆ ಮಾಡಿಲಾಯಿತು.
ರೋಗಿಗಳಿಗೆ ಹಣ್ಣು ವಿತರಣೆ
ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ, ಏ.21
ಚಿಲಕಲನೇರ್ಪು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್ ಅವರ 40ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಣ್ಣು ಹಂಪಲು ವಿತರಿಸಿದರು.
ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಸಲಾಗಿತ್ತು. ಬಳಿಕ ಮಾತನಾಡಿದ ಪೃಥ್ವಿರಾಜ್ ಅವರು, 'ತಾಲೂಕಿನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಶಿಧರ್ ಅವರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ರೀತಿಯ ಸೇವಾ ಕಾರ್ಯಗಳನ್ನು ಮಾಡಿದ್ದಾರೆ' ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಎಂ.ಅಬ್ದುಲ್ಗಫೂರ್, ಬಾಂಬೆ ನವಾಜ್, ಫಿಲೇಚರ್ ಬಡಾವಣೆಯ ಬೂತ್ ಮಟ್ಟದ ಉಪಾಧ್ಯಕ್ಷ ಮುಜಾಹಿದ್, ಜಬೀವುಲ್ಲಾ, ಝಾಕೀರ್, ಬಶೆಟ್ಟಹಳ್ಳಿ ಸಮೀಉಲ್ಲಾ, ಸೈಯದ್ ಉಮ್ಮರ್, ಸೈಯದ್ ಮುಬಾರಕ್, ಕಲೀಂ ಪಾಷಾ, ತಬ್ರೇಜ್ ಪಾಷಾ, ತಾಲೂಕು ಕಾರ್ಯನಿರತ ಪತ್ರಕರ್ತರ ಮಾಜಿ ಉಪಾಧ್ಯಕ್ಷ ಎಂ.ಎ.ತಮೀಮ್ ಪಾಷಾ ಮತ್ತಿರರು ಇದ್ದರು.
ಕಾಡು ಜೇನುನೊಣ ದಾಳಿಗೆ ಯುವಕ ಬಲಿ
ಚಿಂತಾಮಣಿ: ಮದುವೆಗೆ ಬಂದ ಯುವಕನೊಬ್ಬ ಜೇಣುನೊಣಗಳ ದಾಳಿಗೆ ಬಲಿಯಾಗಿ ಇನ್ನಿಬ್ಬರು ತೀವ್ರ ಗಾಯಗೊಂಡ ಘಟನೆ ನಗರದ ಹೊರ ವಲಯದ ಕನಂಪಲ್ಲಿ ಬೆಟ್ಟದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತ ಯುವಕನನ್ನು ವಿನಾಯಕ ಎಂದು ಗುರುತಿಸಲಾಗಿದೆ. ಗಂಗಾಧರ್, ತೌಫಿಕ್ ಗಾಯಗೊಂಡವರು.
ಮುಳಬಾಗಿಲು ತಾಲ್ಲೂಕಿನ ತಾಯಲೂರು ಗ್ರಾಮದ ಇವರು ನಗರದ ಹೊರ ವಲಯದ ಕನಂಪಲ್ಲಿ ಬೆಟ್ಟದ ಬಳಿ ಇರುವ ಪದ್ಮಶಾಲಿ ಕಲ್ಯಾಣ ಮಂದಿರದಲ್ಲಿ ಮದುವೆಗಾಗಿ ಬಂದಿದ್ದರು.
ಸೋಮವಾರ ಬೆಳಿಗ್ಗೆ ಮದುವೆ ಮುಹೂರ್ತ ಮುಗಿಯುವುದಕ್ಕೂ ಮುನ್ನ ಮೂವರು ಬೆಟ್ಟವನ್ನು ಏರಿದ್ದಾರೆ. ಅಲ್ಲಿದ್ದ ಕಾಡುಜೇನು ನೊಣಗಳು ಇವರ ಮೇಲೆ ದಾಳಿ ನಡೆಸಿವೆ. ಇದರಿಂದ ತಪ್ಪಿಸಿಕೊಳ್ಳವ ಭರದಲ್ಲಿ ವಿನಾಯಕ ಕಾಲು ಜಾರಿ ಬಂಡೆ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡಿರುವ ಗಂಗಾಧರ್, ತೌಫಿಕ್ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರದಲ್ಲಿ ಬೇಸಿಗೆ ಕ್ರೀಡಾ ಉಚಿತ ಶಿಬಿರಕ್ಕೆ ಚಾಲನೆ
ಕೋಲಾರ: ಮಕ್ಕಳಲ್ಲಿ ಕ್ರೀಡಾಭಿಮಾನದ ಜೊತೆಗೆ ವಿವಿಧ ಆಟಗಳಲ್ಲಿ ತರಬೇತಿ ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳನ್ನಾಗಿ ತಯಾರು ಮಾಡುವ ಜವಾಬ್ದಾರಿ ಸರ್ಕಾರ ಮತ್ತು ಖಾಸಗಿ ಸಂಘ ಸಂಸ್ಥೆಗಳ ಮೇಲಿದೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ ತಿಳಿಸಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ಆಯೋಜಿಸಿರುವ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಚಿಣ್ಣರಿಗೆ ಹಾಲು ಮತ್ತು ಹಣ್ಣು ವಿತರಿಸಿ ಅವರು ಮಾತನಾಡುತ್ತಿದ್ದರು. ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಸಾಧಿಸಲು ಸಾಧ್ಯವಾಗುತ್ತದೆ. ಕ್ರೀಡೆಗಳು ಉತ್ತಮ ಆರೋಗ್ಯದ ಜತೆಗೆ ಮಾನಸಿಕವಾಗಿಯೂ ಮಕ್ಕಳನ್ನು ಸಬಲರನ್ನಾಗಿಸುತ್ತವೆ. ಶೈಕ್ಷಣಿಕ ಪ್ರಗತಿಗೂ ಆತ್ಮಸ್ಥೈರ್ಯ ತುಂಬುತ್ತವೆ ಎಂದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ನಾಗರಾಜ್ ಮಾತನಾಡಿದರು. ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಮುರಳಿ ಮೋಹನ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್ ವಹಿಸಿದ್ದರು. ಎಂ.ನಾಗರಾಜ್, ಖಾದರ್ ಇಲಾಹಿ, ಲೀಲಾ, ಸಂಪತ್, ರವಿ ಸೇರಿದಂತೆ ಅನೇಕರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

