ಜಿಪಂ ಗಾದಿ ಯಾರಿಗೆ?
ಚಿಕ್ಕಬಳ್ಳಾಪುರ: ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪಟ್ಟಿಯನ್ನು ಸರ್ಕಾರ ಹೊರಡಿಸುತ್ತಿದ್ದಂತೆ ಇಲ್ಲಿನ ಜಿಪಂನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗದರಿವೆ.
ಜೂನ್ 5 ಕ್ಕೆ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಾಧಿ ಕೊನೆಗೊಳ್ಳುತ್ತಿರುವುದರ ನಡುವೆ ಈ ಬಾರಿ ಜಿಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ (ಮಹಿಳೆ) ಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಘೋಷಣೆ ಮಾಡಿದೆ.
ಒಟ್ಟು 27 ಸದಸ್ಯರನ್ನು ಹೊಂದಿರುವ ಜಿಪಂನಲ್ಲಿ ಕಾಂಗ್ರೆಸ್ 22 ಸದಸ್ಯರನ್ನು ಹೊಂದಿ ಬಹುಮತ ಪಡೆದಿರುವ ಪಕ್ಷ. ಆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿ ಹಿಡಿಯುವಲ್ಲಿ ತಮ್ಮದೇ ಆದ ರೀತಿಯಲ್ಲಿ ತಂತ್ರ ಪ್ರತಿತಂತ್ರಗಳ ಮೂಲಕ ಆಕಾಂಕ್ಷಿಗಳು ಯತ್ನಿಸುವುದರಿಂದ ಕುತೂಹಲಕ್ಕೆ ಕಾರಣವಾಗಿದೆ. ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯ್ಲಿ ಮತ್ತು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಬಣ ಎಂಬ ಎರಡು ಗುಂಪುಗಳು ಒಂದೇ ಪಕ್ಷದಲ್ಲಿಯೇ ಪೈಪೋಟಿಗೆ ಕಾರಣವಾಗಿದೆ.
ಪ್ರಸ್ತುತ ಎಂ.ಸಿ. ಸುಧಾಕರ್ ಬಣದಲ್ಲಿ ಗುರುತಿಸಿಕೊಂಡಿರುವ ಎಸ್.ಎನ್.ಚಿನ್ನಪ್ಪ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ರಾಘವೇಂದ್ರ ಹನುಮಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದರೂ ಬೇರೆ ಪಕ್ಷಗಳ ಸದಸ್ಯರ ಬದಲಿಗೆ ಹಿಂದೆ ಕಾಂಗ್ರೆಸ್ ಪಕ್ಷದ ಸದಸ್ಯರೇ ಇವರಿಬ್ಬರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಯತ್ನಿಸಿದ್ದರು. ಬಹುಮತ ಸದಸ್ಯರ ಅಭಿಪ್ರಾಯದಂತೆ ಅವಿಶ್ವಾಸ ನಿರ್ಣಯ ಸಭೆ ಕರೆಯಲಾಯಿತಾದರೂ ಹಿರಿಯ ಮುಖಂಡರು ತಾತ್ಕಾಲಿಕ ತೇಪೆ ಹಾಕಿದ್ದರಿಂದ ಸದಸ್ಯರು ಯಾರು ಸಭೆಗೆ ಆಗಮಿಸಿರಲಿಲ್ಲ. ಇದರಿಂದ ಅವಿಶ್ವಾಸ ನಿರ್ಣಯ ಸಭೆ ಮುಂದೂಡಲಾಗಿತ್ತು.
ಇದೀಗ ಆಕಾಂಕ್ಷಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಗರೆಗೆರೆ ಕ್ಷೇತ್ರದ ಕೇಶವರೆಡ್ಡಿ, ಚಿಲಕಲನೆರ್ಪು ಕ್ಷೇತ್ರದ ನಂದನವನ ಶ್ರೀರಾಮರೆಡ್ಡಿ ಮತ್ತು ಚೀಮಂಗಲ ಕ್ಷೇತ್ರದ ಎನ್. ನಾರಾಯಣಸ್ವಾಮಿ ಹೆಸರು ಕೇಳಿ ಬರುತ್ತಿದೆ. ಉಪಾಧ್ಯಕ್ಷ ಗಾದಿಯು ಮಹಿಳೆಗೆ ಮೀಸಲಾಗಿರುವುದರಿಂದ ಮಹಿಳಾ ಸದಸ್ಯರು ಆಯ್ಕೆಯಾಗಲು ತಮ್ಮ ಗಂಡಂದಿರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕಿಸುತ್ತಿದ್ದು ನಂದಿ ಕ್ಷೇತ್ರದ ಮಂಜುಳಾ, ಬಟ್ಲಹಳ್ಳಿ ಕ್ಷೇತ್ರದ ವೀಣಾ, ಮಂಚೇನಹಳ್ಳಿ ಕ್ಷೇತ್ರದ ರಾಧಮ್ಮರವರ ಹೆಸರು ಚಾಲ್ತಿಗೆ ಬರುತ್ತಿದೆ. ಹಿಂದೆ ಬಣಗಳಿಗೆ ಸಿಕ್ಕ ಅಧಿಕಾರವನ್ನು ಆಧಾರವನ್ನಾಗಿಸಿಕೊಂಡು ಹೊಸಬರಿಗೆ ಅವಕಾಶ ಸಿಗುವಂತೆ ಮಾಡುವ ಲೆಕ್ಕಾಚಾರದಿಂದ ಆಯ್ಕೆ ಕುತೂಹಲಕ್ಕೆ ಕಾರಣವಾಗಿದೆ.
ಎನ್. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

