ಕೋಲಾರ

ಈ ಗೇಟ್‌ನ ವನವಾಸ ಅಂತ್ಯ ಯಾವಾಗ?

Published On :

ಕೆಜಿಎಫ್: ಮಾರಿಕುಪ್ಪಂ ರೇಲ್ವೆ ನಿಲ್ದಾಣದ ಬಳಿ ಇರುವ ಗೇಟ್‌ಗೆ ಸುಮಾರು ವರ್ಷಗಳಿಂದ ಬೀಗ ಹಾಕಲಾಗಿದ್ದು, ಇದರಿಂದ ಸುತ್ತಮುತ್ತಲಿನ ಜನ ಭಾರಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಗೇಟ್ ಸಂಚಾರಕ್ಕೆ ಮುಕ್ತವಾಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆದರೆ, ಈ ಬಗ್ಗೆ ರೇಲ್ವೆ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸುತ್ತಿಲ್ಲ.
12 ವರ್ಷದಿಂದ ಮುಚ್ಚಿರುವ ಈ ಗೇಟ್‌ನಿಂದ ಮಾರಿಕುಪ್ಪಂ, ಆ್ಯಂಡರ್ಸನ್ ಪೇಟೆ, ಚಾಂಪಿಯನ್‌ರೀಫ್ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಸ್ಥರು ಮದುವೆ ಸಮಾಂರಭ, ಜಾತ್ರೆಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಆಸ್ಪತ್ರೆಗೆ ಹೋಗಬೇಕಾದರೆ, ಯಾರಾದರೂ ಮೃತಪಟ್ಟರೆ ಅವರ ಶವಗಳನ್ನು ಸಾಗಿಸಬೇಕಾದರೆ ಈ ಮಾರ್ಗದಲ್ಲಿ ಯಾವುದೇ ವಾಹನಗಳು ಹೋಗಲು ಬರಲು ಪರದಾಡುವಂತಾಗಿದೆ. ಹತ್ತಾರು ಮೈಲಿಗಳು ಸುತ್ತಿಕೊಂಡು ಹೋಗಬೇಕಾಗಿದೆ.
ಇದರಿಂದ ಇಲ್ಲಿನ ಜನತೆ ವಿವಿಧ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಕೇಂದ್ರ ಸಚಿವರಾಗಲಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಇಲ್ಲಿನ ಸಾವಿರಾರು ಜನರ ಆರೋಪ.
ಕಳವಿಗೆ ಏನು ಕಾರಣ?
2001ರಲ್ಲಿ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಮಾರಿಕುಪ್ಪಂ ಪ್ರದೇಶದಲ್ಲಿರುವ ಬಿಜಿಎಂಎಲ್ ಚಿನ್ನದ ಗಣಿಗೆ ಸೇರಿದ ಮೈಸೂರು ಮಿಲ್‌ನೊಳಗೆ ಚಿನ್ನದ ಅದಿರು ಸೇರಿದಂತೆ ಇತರೇ ವಸ್ತುಗಳ ಕಳ್ಳತನಕ್ಕಾಗಿ ಕಳ್ಳರು ಇದೇ ಗೇಟ್ ಮೂಲಕ ಬರಬೇಕಿತ್ತು. ಚಿನ್ನದ ಗಣಿ ಅಧಿಕಾರಿಗಳು, ಬಿಜಿಎಂಎಲ್ ಭದ್ರತಾಧಿಕಾರಿಗಳು ಹಾಗೂ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ವಾಹನದಲ್ಲಿ ಬರುವಾಗ ರೇಲ್ವೆ ಗೇಟ್ ಮುಚ್ಚಿದರೆ ಕಳ್ಳರಿಗೆ ಒಳ ನುಗ್ಗಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಈ ಗೇಟ್ ಕೀಲಿ ಕೈ ಆಗಾಗ ಕಳುವಾಗುತ್ತಿತ್ತು ಎನ್ನಲಾಗಿದೆ.
ಯಾಕೆ ಈ ರೇಲ್ವೆ ಗೇಟ್ ಮುಚ್ಚಲಾಗಿದೆ?
ಮಾರಿಕುಪ್ಪಂ ಮಾರ್ಗವಾಗಿ ರೈಲು ಬರುವಾಗ ಈ ಗೇಟ್ ಅನ್ನು ಮುಚ್ಚಲಾಗುತ್ತಿತ್ತು. ರೈಲು ಹೋದ ನಂತರ ಮತ್ತೆ ತೆಗೆಯಲಾಗುತ್ತಿತ್ತು. ರೈಲು ಬಂದಾಗ ಈ ಗೇಟ್‌ಗೆ ದೊಡ್ಡ ಕೀಲಿಯನ್ನು ಹಾಕಲಾಗುತ್ತಿತ್ತು. ವಿಶೇಷ ಎಂದರೆ, ಈ ಗೇಟ್‌ನ ಕೀಲಿ ಕೈ ಆಗಾಗ ಕಳ್ಳತನವಾಗುತ್ತಿತ್ತು! ಈ ಬಗ್ಗೆ ಲೈನ್‌ಮೆನ್ ಬಂಗಾರಪೇಟೆ ರೇಲ್ವೆ ಪೊಲೀಸರಿಗೆ ದೂರು ನೀಡಿ ಸಾಕಾಗಿತ್ತು. ಮತ್ತೊಂದು ದೊಡ್ಡ ತೊಂದರೆ, ಹೊಸ ಕೀಲಿ ಕೈಯನ್ನು ತಮಿಳುನಾಡಿ ಕೊಯಮತ್ತೂರಿನಿಂದಲೇ ಮಾಡಿಸಿಕೊಂಡು ಬರಬೇಕಿತ್ತು. ಈ ತೊಂದರೆ ಬೇಡ ಎಂದು ಅಧಿಕಾರಿಗಳು ಈ ಗೇಟ್ ಅನ್ನು 12 ವರ್ಷಗಳಿಂದ ಶಾಶ್ವತವಾಗಿ ಮುಚ್ಚಿದ್ದಾರೆ.

ಆರ್.ರಜನೀಕಾಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.