ಕೋಲಾರ

ಡಿಸಿಸಿ ಬ್ಯಾಂಕ್‌ನಿಂದ 95.96 ಲಕ್ಷ ಸಾಲ

Published On :

ಕೋಲಾರ: ರೈತರನ್ನು ಖಾಸಗಿ ಮೀಟರ್ ಬಡ್ಡಿ ಸಾಲದ ಶೂಲದಿಂದ ಪಾರು ಮಾಡಿ ಶೂನ್ಯ ಬಡ್ಡಿಯ ಸಾಲ ವಿತರಿಸಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ. ಆದರೆ ಸಾಲ ಪಡೆದವರು ಮರುಪಾವತಿಯಲ್ಲೂ ಜವಾಬ್ದಾರಿ ತೋರಬೇಕೆಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ತಿಳಿಸಿದರು.
ಡಿಸಿಸಿ ಬ್ಯಾಂಕಿನ ಕೋಲಾರ ಶಾಖೆ ಆವರಣದಲ್ಲಿ ಗುರುವಾರ ರೇಷ್ಮೆ ಬೆಳೆಗಾರರಿಗೆ ಸಾಲ ವಿತರಿಸುವ ಸಲುವಾಗಿ ತಾಲೂಕಿನ ವಡಗೂರು ರೈತರ ಹಾಗೂ ರೇಷ್ಮೆ ಬೆಳೆಗಾರರ ಸಹಕಾರ ಸಂಘಕ್ಕೆ 95.96 ಲಕ್ಷ ರು.ಗಳನ್ನು ವಿತರಿಸಿಅವರು ಮಾತನಾಡುತ್ತಿದ್ದರು.
ವಡಗೂರು ಸೊಸೈಟಿ ಸಾಲ ಮರುಪಾವತಿಯಲ್ಲಿ ಇತರೆ ಸೊಸೈಟಿಗಳಿಗೆ ಆದರ್ಶವಾಗಿದ್ದು, ಇದೀಗ ಅದರ ವ್ಯಾಪ್ತಿಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರು.ಗಳವರೆಗೂ ಸಾಲದ ಸೌಲಭ್ಯ ವಿತರಿಸಲು ಡಿಸಿಸಿ ಬ್ಯಾಂಕ್ ಶಕ್ತವಾಗಿದೆ ಎಂದರು. ಇತರೆ ಸೊಸೈಟಿಗಳು ಸಹಾ ತಮ್ಮ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಸಾಲ ಮರುಪಾವತಿಗೆ ಅಗತ್ಯ ಕ್ರಮ ಕೈಗೊಂಡು ಹೊಸ ಸಾಲ ಪಡೆಯಬೇಕು, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ಮಾಡಬೇಕೆಂದು ಸೂಸೈಟಿಗಳ ಆಡಳಿತ ಮಂಡಳಿಗಳಿಗೆ ಕರೆ ನೀಡಿದರು. ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೂ ಹಾಗೂ ಶೇ.3ರ ಬಡ್ಡಿ ದರದಲ್ಲಿ 10ಲಕ್ಷದವರೆಗೂ ಸಾಲ ನೀಡಲು ಅನುವಾಗುವಂತೆ ಎಲ್ಲಾ ಸೊಸೈಟಿಗಳು ಕಾರ್ಯಕ್ರಮ ರೂಪಿಸಿ ಇದರ ಜೊತೆ ಜೊತೆಯಲ್ಲೇ ಸಾಲ ಮರುಪಾವತಿಗೂ ಕ್ರಮ ತೈಗೊಳ್ಳುವ ಮೂಲಕ ಡಿಸಿಸಿ ಬ್ಯಾಂಕಿನ ಸದಾಶಯ ಸಕಾರಗೊಳಿಸಬೇಕೆಂದರು. ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಈಗ ಚೈತನ್ಯ ಹೊಂದುತ್ತಿದೆ. ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಬ್ಯಾಂಕಿನ ಹೊಸ ಆಡಳಿತ ಮಂಡಳಿ ಕಂಕಣ ತೊಟ್ಟಿದ್ದು, ಸಮರ್ಪಕ ಸಾಲ ಮರುಪಾವತಿಸುವ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಸಾಲ ನೀಡಲು ಬ್ಯಾಂಕ್ ಸದಾಸಿದ್ಧವಾಗಿದೆ ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ಆನ್‌ಲೈನ್ ವ್ಯವಸ್ಥೆಗೆ ಸಜ್ಜುಗೊಳ್ಳುತ್ತಿದೆ, ಐಎಫ್‌ಎಸ್ ಕೋಡ್ ಬಂದಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ  ಜಿಲ್ಲೆಗಳ ಶಾಖೆಗಳು ಈ ನಿಟ್ಟಿನಲ್ಲಿ ಬ್ಯಾಂಕ್ ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿ ಅಭಿವೃದ್ದಿಗೊಳ್ಳುತ್ತಿದೆ ಎಂದರು. ಗ್ರಾಹಕರಿಗೆ ಅವರಿಗೆ ಅಗತ್ಯವಾದ ಸಾಲ ಸೌಲಭ್ಯ ನೀಡಲಾಗುತ್ತದೆ, ವಾಹನ ಸಾಲ 25 ಲಕ್ಷದವರೆಗೂ ನೀಡಲು ಅವಕಾಶವಿದೆ ಎಂದ ಅವರು, ಬ್ಯಾಂಕಿನ ಆರ್ಥಿಕ ಸ್ಥಿತಿ ಕುರಿತು ಯಾವುದೇ ಅನುಮಾನಗಳಿಗೆ ಎಡೆಯಿಲ್ಲ ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೇಶಕರಾದ ಸತ್ಯನಾರಾಯಣ ಮಹೇಶ್, ಕಡಗಟ್ಟೂರು ದಯಾನಂದ್, ಎಪಿಎಂಸಿ ಅಧ್ಯಕ್ಷ ವಡಗೂರು ರಾಮು, ವಡಗೂರು ಸೊಸೈಟಿ ಮಾಜಿ ಅಧ್ಯಕ್ಷ ಸಹಕಾರಿ ಅಬ್ಬಣಿ ಶಂಕರ್, ಹಾಲಿ ಅಧ್ಯಕ್ಷ ತಂಬಳ್ಳಿ ರಮೇಶ್, ಬ್ಯಾಂಕ್ ಕೋಲಾರ ಶಾಖೆ ವ್ಯವಸ್ಥಾಪಕ ರಾಮಚಂದ್ರ, ವಡಗೂರು ಸೊಸೈಟಿ ಸಿಇಒ ಬಿ.ಎಸ್. ವಿಜಯಕುಮಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.