ಕೋಲಾರ

ಬಿಸಿಲು ಬೇಗೆ: ದಾಹ ತೀರುವುದು ಹೇಗೆ?

Published On :

ಚಿಂತಾಮಣಿ: ಬಿಸಲಿನ ತಾಪ ಮಿತಿ ಮೀರುತ್ತಿದ್ದಂತೆ ತಾಲೂಕಿನಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೆರೆಗಳು ಬತ್ತಿ ಹೋಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ತಿನ್ನಲು ಮೇವಿಲ್ಲ. ರೈತರು ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕು ಕೇಂದ್ರಗಳ ಪೈಕಿ ಚಿಂತಾಮಣಿ ತಾಲೂಕು ದೊಡ್ಡ ಜನಸಂಖ್ಯೆಯುಳ್ಳ ಕೇಂದ್ರವಾಗಿದೆ. ಬಹುತೇಕ ಕೆರೆ, ಕುಂಟೆಗಳು ಕಳೆದ 3 ವರ್ಷಗಳಿಂದ ವರುಣ ಕೃಪೆ ತೋರಿಲ್ಲ. ರೈತರ ಜೀವನಾಡಿಗಳಾದ ಜಾನುವಾರಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಮೇವು ದೊರೆಯುತ್ತಿಲ್ಲ. ಮತ್ತೊಂದೆಡೆ ಮಳೆಯಾಗಲಿ ಎಂದು ಜನರು ಕತ್ತೆಗಳ ಮದುವೆ, ದೇವರ ಹರಿಕೆ, ಪೂಜೆ ಕೈಗೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಹಗಲು ಬೆವರು ಸುರಿಸಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಕೂಡಾ ದೊರೆಯುತ್ತಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ರೈತರು ಮೋಸ ಹೋಗಿ ಹಾಕಿದ ಬಂಡವಾಳಕ್ಕೆ ನ್ಯಾಯ ದೊರೆಯುತ್ತಿಲ್ಲ. ಚಿಂತಾಮಣಿ ನಗರದಲ್ಲಿ ಸುಮಾರು 1 ಲಕ್ಷಕ್ಕಿಂತ ಜನ ಸಂಖ್ಯೆ ಇದೆ. 31 ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ತಲೆದೋರಿದೆ. ಮಿನಿ ಕಾವೇರಿಯೇ ಎಂದು ಪ್ರಸಿದ್ಧಿ ಹೊಂದಿದ ಕನಂಪಲ್ಲಿ ಕೆರೆ ಕೂಡಾ ಬರಿದಾಗಿದೆ. ಇಲ್ಲಿನ ಜನರು ನೀರಿಗಾಗಿ ನಗರದ ಕಿಶೋರ್ ವಿದ್ಯಾ ಸಂಸ್ಥೆ ಮುಂಭಾಗದ ನಗರಸಭೆಯ ಪಂಪ್ ಹೌಸ್‌ನಿಂದ ಹಾಗೂ ಮಾಳಪ್ಪಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಬಿಂದಿಗೆಗೆ 5 ಮತ್ತು ಟ್ಯಾಂಕರ್‌ಗೆ 300ರಿಂದ 400 ತೆರಬೇಕಾಗಿದೆ.
ನೀರಿಗೂ ರಾಜಕೀಯ!: ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಸುಧಾಕರ್ ಬೆಂಬಲಿಗರು ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನಲ್ಲಿ ರಾಜಕೀಯ ದುರುದ್ದೇಶದಿಂದ ನೀರಿನ ಸಮಸ್ಯೆಯನ್ನು ಜನರಿಗೆ ಮನವರಿಕೆ ಮಾಡದೆ ರಾಜಕೀಯ ಪ್ರತಿಷ್ಟೆಯಿಂದ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಇದರ ನಡುವೆ ವಿದ್ಯುತ್ ಸಮಸ್ಯೆ ಕೂಡಾ ಆರಂಭವಾಗಿದೆ. ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಶಾಶ್ವತ ಪರಿಹಾರ ಕೈಗೊಳ್ಳಬೇಕಿದೆ. ಕೋಲಾರ, ಚಿಕ್ಕಬಳ್ಳಾಪುರ ನೀರಿನ ಹೋರಾಟಕ್ಕೆ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಆಗ ಮಾತ್ರ ಪರಿಹಾರ ಕೊಂಡುಕೊಳ್ಳಲು ಸಾಧ್ಯ.
ವರದಾದ್ರಿ ಬೆಟ್ಟಕ್ಕೆ ಕರೆಂಟ್ ಶಾಪ!
ಚಿಂತಾಮಣಿ: ಇಲ್ಲಿನ ಪ್ರಸಿದ್ಧ ವರದಾದ್ರಿ ಬೆಟ್ಟದಲ್ಲಿ ಕಳೆದ 3 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಭಕ್ತಾಧಿಗಳು ಹಾಗೂ ನಾಗರಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಬೆಟ್ಟದಲ್ಲಿ ರಾತ್ರಿ ವೇಳೆ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಇದು ಹಲವು ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಚಿಂತಾಮಣಿಯಲ್ಲಿ ಬಿಸಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಟ್ಟದಲ್ಲಿ ಬೀಡಿ, ಸಿಗರೇಟ್ ಸೇದಿ ಎಸೆದರೆ ಬೆಂಕಿ ಬೀಳುವ ಸಾಧ್ಯತೆ ಇದ್ದು, ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ನಿವಾಸಿಗಳು ಆತಂಕಗೊಂಡಿದ್ದಾರೆ. ವಿದ್ಯುತ್ ಪೂರೈಕೆ ಇಲ್ಲದಿದ್ದರಿಂದ ಬೆಟ್ಟದಲ್ಲಿ ಬೆಳಗಿನ ಜಾವ ಸುಪ್ರಭಾತ ಗೀತೆಗಳು ಕೂಡಾ ಕೇಳುತ್ತಿಲ್ಲ. ಈ ಅವ್ಯವಸ್ಥೆಗೆ ಸ್ಥಳೀಯ ನಗರಸಭೆ ಬೇಜವಾಬ್ದಾರಿ ಕಾರಣವೆಂದು ಜನರು ಆರೋಪಿಸುತ್ತಿದ್ದಾರೆ. ಆದ್ದರಿಂದ ಭಕ್ತಾಧಿಗಳು ಹಾಗೂ ಸಾರ್ವಜನಿಕರ ಹಿತಾಸಕ್ತಿಯಿಂದ ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.
ಬಂಗಾರಪೇಟೆ: ಸುಡು ಬಿಸಿಲು
ಬಂಗಾರಪೇಟೆ: ತಾಲೂಕಲ್ಲಿ ಬಿಸಿಲಿನ ತಾಪ ವಿಪರೀತ ಹೆಚ್ಚಳವಾಗಿದೆ. ಶುಕ್ರವಾರ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಜನರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಕೆಲವು ಭಾಗಗಳಲ್ಲಿ ಕಳೆದ ವಾರ ಬಿದ್ದ ಮಳೆ ದಾಹದಿಂದ ಬೆಂದಿದ್ದ ಜನತೆಯಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ, ನಂತರ ಬಂದ ಮಳೆ ಅಷ್ಟೇ ವೇಗವಾಗಿ ಮಾಯವಾಗುವ ಮೂಲಕ ನಿರಾಶೆ ಮೂಡಿಸಿದೆ.ಬಿಸಿಲಿನ ತಾಪದಿಂದ ಜನ ಕಂಗಟ್ಟಿದ್ದು ವಿದ್ಯುತ್ ಅಭಾವ ಒಂದೆಡೆ ಕಾಡುತ್ತಿದೆ. ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಕಾಡತೊಡಗಿದೆ. ಸ್ನಾನಕ್ಕೂ ನೀರು ದೊರೆಯುತ್ತಿಲ್ಲ! ಸಿಂಥೆಟಿಕ್ ಟ್ಯಾಂಕ್‌ಗಳಲ್ಲಿ ನೀರನ್ನು ಕಾಯಿಸುವ ಅಗತ್ಯವೇ ಇಲ್ಲ. ಬೆಳಗ್ಗೆ 7 ಗಂಟೆ ಹೊತ್ತಿಗೆಲ್ಲಾ ನಲ್ಲಿಗಳಲ್ಲಿ ಬಿಸಿ ನೀರೇ ಹರಿದು ಬರುತ್ತಿದೆ ಕ್ಷೇತ್ರದ ಜನಪ್ರತಿನಿಧಿಗಳಿಗೆ ಬರಗಾಲ, ಕುಡಿಯುವ ನೀರಿನ ಸಂಕಷ್ಟ ಎದುರಾದಾಗ ಇವರ ಕಣ್ಣಿಗೆ ಕಾಣುವುದು ಒಂದೇ ಮಾರ್ಗ. ಅದು ಕೊಳವೆ ಬಾವಿ ಕೊರೆಯುವುದು. ತಮ್ಮ ಬೆಂಬಲಿಗ ಬೋರ್‌ವೆಲ್ ಹಾಗೂ ಪಂಪ್ ಮೋಟಾರ್‌ಗಳ ಕಾಂಟ್ರಾಕ್ಟರ್‌ಗಳಿಗೆ ಕೆಲಸ ಕೊಡಿಸುತ್ತಾರೆ ಅಷ್ಟೇ!  ರಾಜ್ಯದಲ್ಲೆ ಹೆಚ್ಚು ಕೊಳವೆ ಬಾವಿಗಳನ್ನು ಕೊರೆದಿರುವ ಕ್ಷೇತ್ರವೆಂಬ ಅಪಖ್ಯಾತಿಗೂ ಒಳಗಾಗಿದೆ. ಜಿಲ್ಲೆಯಲ್ಲಿ ಹನಿ ನೀರಿಗೂ ಪ್ರತಿ ವರ್ಷ ಸಂಕಷ್ಟ ಅನುಭವಿಸುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಒಮ್ಮತದಿಂದ ಶಾಶ್ವತ ನೀರಾವರಿಗೆ ಹೋರಾಟ ಮಾಡುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಎನ್.ಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.