ಜಿಲ್ಲಾಸ್ಪತ್ರೆಯಲ್ಲಿ ನೀರಿಗೆ ಬರ; ರೋಗಿಗಳ ಪರದಾಟ
ಕೋಲಾರ: ಬಡ ರೋಗಿಗಳ ಅನುಕೂಲಕ್ಕಾಗಿ ಮೈಸೂರಿನ ರಾಜ ಮನೆತನದ ದೊರೆ ಶ್ರೀ ನರಸಿಂಹರಾಜ ಒಡೆಯರ್ ಅವರು ಕೋಲಾರದಲ್ಲಿ 1937ರಲ್ಲಿ ಕಟ್ಟಿಸಿದ ಜಿಲ್ಲಾ ಆಸ್ಪತ್ರೆಯಲ್ಲೀಗ ನೀರಿಗೆ ಬರ. ರೋಗಿಗಳ ಪರದಾಟ ಹೇಳತೀರದು.
ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವು ತಿಂಗಳಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಆಡಳಿತ ಮಂಡಳಿಯು ಶುದ್ಧವಾದ ನೀರು ಒದಗಿಸಲಾಗುತ್ತಿಲ್ಲ. ಹಾಗಾಗಿ ರೋಗಿಗಳು ಮತ್ತವರ ಕಡೆಯವರು ಆಸ್ಪತ್ರೆಯ ಹೊರಗಡೆ ಕಾಸು ಕೊಟ್ಟು ನೀರು ಖರೀದಿ ಮಾಡಬೇಕು. ಆಸ್ಪತ್ರೆಗಾಗಿ ಕೊರೆಸಲಾಗಿದ್ದ ಮೂರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅಂತರ್ಜಲ ಅಭಿವೃದ್ಧಿಯಾಗಹುದೆಂಬ ನಂಬಿಕೆಯಿಂದ ಸಾವಿರಾರು ರುಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ವಾಟರ್ಫಿಲ್ಟರ್ಗಳು ಕಾರ್ಯ ನಿರ್ವಹಿಸುತ್ತಿಲ್ಲ.
ಶೌಚಾಲಯಗಳು ನೀರಿಲ್ಲದೆ ಗಬ್ಬು ನಾರುತ್ತಿವೆ. ಒಳ ರೋಗಿಗಳು ಮಲ ಮೂತ್ರ ವಿಸರ್ಜನೆಗಾಗಿ ಆಸ್ಪತ್ರೆಯಿಂದ ಹೊರ ಬಂದು ಆಸ್ಪತ್ರೆ ಆವರಣದಲ್ಲಿರುವ ಸುಲಭ ಶೌಚಾಲಯಕ್ಕೆ 5 ಪಾವತಿ ತಮ್ಮ ಕೆಲಸ ಮುಗಿಸಿಕೊಳ್ಳವ ಪರಿಸ್ಥಿತಿ ಇದೆ. ಕುಡಿಯಲು ನೀರು ಸಿಗದೆ ರೋಗಿಗಳು ಮಾತ್ರೆ, ಆಹಾರ ಸೇವನೆಗಾಗಿ ಮನೆಯ ನೀರು ಇಲ್ಲವೇ ದುಡ್ಡು ಕೊಟ್ಟು ಮಿನರಲ್ ವಾಟರ್ ಖರೀದಿಸುತ್ತಿದ್ದಾರೆ.
ಆನೆ ಹೊಟ್ಟೆಗೆ ಅರೆ ಕಾಸು ಮಜ್ಜಿಗೆ: ಕಳೆದ ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ತಾರಕಕ್ಕೆ ಏರಿದೆ. ಆಸ್ಪತ್ರೆಯ ಆಡಳಿತ ವರ್ಗ ಮತ್ತು ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಜಿಲ್ಲಾಧಿಕಾರಿಗಳು ಪ್ರತಿದಿನ ಐದು ಟ್ಯಾಂಕರ್ಗಳ ಮೂಲಕ ನೀರು ಸಂಗ್ರಹಣೆ ಮಾಡಿಕೊಂಡು ರೋಗಿಗಳಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.
ಆದರೆ, ಗುತ್ತಿಗೆದಾರರು ಕೇವಲ 2 ರಿಂದ 3 ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಇದು ಆನೆ ಹೊಟ್ಟೆಗೆ ಅರೆ ಕಾಸು ಮಜ್ಜಿಗೆ ಎಂಬಂತಾಗಿದೆ. ಆಸ್ಪತ್ರೆಗೆ ಪ್ರತ್ಯೇಕ ವಿದ್ಯುತ್ ವ್ಯವಸ್ಥೆಗೆ ಅನೇಕ ವರ್ಷಗಳಿಂದ ಜನತೆ ಒತ್ತಾಯಿಸುತ್ತಿದ್ದರೂ, ಬೇಡಿಕೆ ಈಡೇರಿಕೆಗೆ ಆಡಳಿತ ಮಂಡಳಿ ಮುಂದಾಗುತ್ತಿಲ್ಲ. ಬತ್ತಿ ಹೋಗಿರುವ ಕೊಳವೆ ಬಾವಿಗಳ ಮರು ಪೂರಣಕ್ಕೆ ಯಾವುದೇ ರೀತಿಯ ಗಮನ ನೀಡುತ್ತಿಲ್ಲ. ಮಳೆ ಕೊಯ್ಲು ಯೋಜನೆ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಮೋಟಾರ್ ಕೆಟ್ಟು ವಾರಗಟ್ಟಲೆ ಕಳೆದರೂ ದುರಸ್ತಿಯಾಗಿ ಸಕಾಲಕ್ಕೆ ಬಂದು ಸೇರುತ್ತಿಲ್ಲ. ಕಳೆದ ವರ್ಷ ಆಸ್ಪತ್ರೆಯಲ್ಲಿ ಅವ್ಯವಸ್ಥೆಯನ್ನು ಖುದ್ದು ಪರೀಶಿಲಿಸಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಸಿಡಿಮಿಡಿಗೊಂಡಿದ್ದರು. ವ್ಯವಸ್ಥೆ ಸರಿಪಡಿಸದಿದ್ದರೆ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇದೇ ರೀತಿ ಉಪ ಲೋಕಾಯುಕ್ತರು ಸಹ ಆಸ್ಪತ್ರೆಗೆ ಭೇಟಿ ನೀಡಿದಾಗ ಗಮನಿಸಿದ ಕಾರ್ಮಕಾಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಆಸ್ಪತ್ರೆಯ ಸುಧಾರಣೆ ಆಗುತ್ತಿಲ್ಲ.
ಜಿಲ್ಲಾ ಸಚಿವರು ಗಮನ ಹರಿಸುವವರೇ?
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರೇ ಆರೋಗ್ಯ ಸಚಿವರೂ ಆಗಿದ್ದಾರೆ. ಪ್ರಾರಂಭದಲ್ಲಿ ಆಸ್ಪತ್ರೆಯ ಬಗ್ಗೆ ತೋರಿದ ಕಾಳಜಿ ಈಗಿಲ್ಲ. ಕೇವಲ ಧ್ವಜಾರೋಹಣದ ಅತಿಥಿಯಾಗಿರುವ ಸಚಿವರು ಜಿಲ್ಲಾ ಆಸ್ಪತ್ರೆಯಲ್ಲಿನ ಸಮಸ್ಯೆಗಳ ನಿವಾರಣೆಗೆ ವಿಶೇಷ ಗಮನ ನೀಡಬೇಕೆಂಬುದು ಜನತೆಯ ಒತ್ತಾಸೆ. ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹತ್ತಾರು ಹೆರಿಗೆಗಳು, ವಿವಿಧ ಶಸ್ತ್ರ ಚಿಕಿತ್ಸೆ ನಡೆಯುತ್ತವೆ. ಇದಕ್ಕೆ ನೀರಿನ ಅವಶ್ಯಕತೆ ಹೆಚ್ಚಿದೆ. ನಗರಸಭೆಯವರು ಕನಿಷ್ಟ 5 ಟ್ಯಾಂಕರ್ಗಳಲ್ಲಿ ನೀರು ಒದಗಿಸಿ ಅದನ್ನು ಸಂಪುಗಳ ಮೂಲಕ ಸರಬರಾಜು ಮಾಡುವ ವ್ಯವಸ್ಥೆ ಮಾಡದಿದ್ದರೆ ಜಿಲ್ಲಾ ಆಸ್ಪತ್ರೆಗೆ ಬರುವ ಬಡ ರೋಗಿಗಳ ಸಂಖ್ಯೆ ಕಡಿಮೆ ಆಗುತ್ತದೆ. ಈಗಾಗಲೇ ಆರ್.ಎಲ್.ಜಾಲಪ್ಪ ಆಸ್ಪತ್ರೆಯವರು ಕೆಲವು ಉಚಿತ ಸೇವೆಗಳನ್ನು ಜಾರಿಗೆ ತಂದ ಮೇಲೆ ಅನೇಕರು ಜಿಲ್ಲಾ ಆಸ್ಪತ್ರೆ ಬಿಟ್ಟು ಜಾಲಪ್ಪ ಆಸ್ಪತ್ರೆಗೆ ಹೋರಲಾರಂಭಿಸಿದ್ದಾರೆ. ಅಲ್ಲಿ ನೀರಿನ ಸಮಸ್ಯೆ ಇದ್ದರೂ ನಿರ್ವಹಣೆಯಲ್ಲಿ ಲೋಪಗಳು ಇಲ್ಲದಿರುವುದರಿಂದ ಸರಿತರಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಚುನಾವಣೆ ಮುಗಿದಿರುವುದರಿಂದ ಕೋಲಾರಕ್ಕೆ ಭೇಟಿ ನೀಡಿ ಆಸ್ಪತ್ರೆಗೆ ಅಗತ್ಯವಾಗಿ ಬೇಕಾದ ನೀರು ಮತ್ತಿತ್ತರ ಮೂಲ ಸೌಕರ್ಯ ಕಲ್ಪಿಸಲು ಗಮನ ನೀಡಲಿ ಎಂದು ರೋಗಿಗಳು ಆಗ್ರಹಿಸಿದ್ದಾರೆ.
ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

