ಬಾಲ್ಯ ವಿವಾಹ ಪದ್ಧತಿ ನಿಷೇಧಕ್ಕೆ ಸಹಕಾರ ಅಗತ್ಯ
ಬಾಗೇಪಲ್ಲಿ: ಬಾಲ್ಯ ವಿವಾಹ ಪದ್ಧತಿಯನ್ನು ಬೇರು ಸಮೇತ ಕಿತ್ತು ಹಾಕಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಸಿವಿಲ್ ನ್ಯಾಯಾಧೀಶ ಎಂ.ಎನ್. ರಮೇಶ್ ಕರೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ಬಾಲ್ಯ ವಿವಾಹ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಪದ್ಧತಿಯಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಧಕ್ಕೆ ಉಂಟಾಗುತ್ತಿದೆ. ಎಳೆ ವಯಸ್ಸಿನಲ್ಲಿಯೇ ತಾಯಂದಿರಾಗಿ ಅನೇಕ ಹೆಣ್ಣು ಮಕ್ಕಳು ಮರಣ ಹೊಂದುತ್ತಿದ್ದಾರೆ. ಇವರಿಗೆ ಹುಟ್ಟುವ ಮಕ್ಕಳಲ್ಲಿ ಬಹುತೇಕ ಮಕ್ಕಳು ಅಂಗವಿಕಲರಾಗುತ್ತಿದ್ದಾರೆ ಎಂದರು.
ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಎ.ಜಿ. ಸುಧಾಕರ್ ಮಾತನಾಡಿ, ಆಸೆ ಆಮಿಷಗಳಿಗೆ, ರಕ್ತ ಸಂಬಂಧದ ಹೆಸರಿನಲ್ಲಿ, ವೃದ್ಧರ ಹಾಗೂ ಅನಾರೋಗ್ಯದ ಹಿರಿಯರ ಆಸೆ ಈಡೇರಿಸುವ ಹೆಸರಿನಲ್ಲಿ, ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ಕಳೆದುಕೊಳ್ಳಲು, ಬಡತನದ ಬೇಗೆ ಸೇರಿದಂತೆ ವಿವಿಧ ಕಾರಣಗಳಿಗೆ ಬಾಲ್ಯ ವಿವಾಹ ನಡೆಯುತ್ತಿದ್ದು ಈ ಅನಿಷ್ಠ ಪದ್ಧತಿಗೆ ನಮ್ಮ ದೇಶದಲ್ಲಿ ಅಮಾಯಕ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ನಾವು ಕೇವಲ ಬಾಲ್ಯ ವಿವಾಹ ನಡೆಯುತ್ತಿರುವಲ್ಲಿಗೆ ಹೋಗಿ ಮದುವೆ ನಿಲ್ಲಿಸಿದ ಮಾತ್ರಕ್ಕೆ ಈ ಪದ್ಧತಿಯನ್ನು ತೊಲಗಿಸಿದಂತಾಗುವುದಿಲ್ಲ. ಎಲ್ಲರಲ್ಲೂ ಅರಿವು ಮೂಡಿಸಿ ಮನ ಪರಿವರ್ತನೆ ಮಾಡಬೇಕಾಗಿದೆ ಎಂದರು.
ಬಾಲ್ಯ ವಿವಾಹ ಪದ್ಧತಿಯನ್ನು ತಳ ಮಟ್ಟದಿಂದಲ್ಲೇ ಕಿತ್ತು ಹಾಕುವ ನಿಟ್ಟಿನಲ್ಲಿ ಸಣ್ಣದಾಗಿ ಒಂದು ಪ್ರಯೋಗವನ್ನು ಮಾಡಲಾಗಿದೆ. ಅದರ ಭಾಗವಾಗಿ ಇಡೀ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಲು ನಿಟ್ಟಿನಲ್ಲಿ ತಾಲೂಕಿನ ಪುರೋಹಿತರು, ಪಾದ್ರಿಗಳು ಹಾಗೂ ಮೌಲ್ವಿಗಳು, ಲಗ್ನಪತ್ರಿಕೆ ಮುದ್ರಕರು, ಕಲ್ಯಾಣ ಮಂಟಪಗಳ ಮಾಲೀಕರು ಸೇರಿದಂತೆ ವಿವಾಹ ಕಾರ್ಯಕ್ರಮದಲ್ಲಿ ಒಂದಲ್ಲಾ ರೀತಿ ಭಾಗವಹಿಸುವ ವ್ಯಕ್ತಿಗಳನ್ನು ಒಂದು ವೇದಿಕೆಯಲ್ಲಿ ಸೇರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮದುವೆ ಮಾಡಿಸುವಾಗ ಮತ್ತು ಕಲ್ಯಾಣ ಮಂಟಪಗಳನ್ನು ಬಾಡಿಗೆಗೆ ಕೊಡುವಾಗ ಮದುವೆಯಾಗುವವರ ವಯಸ್ಸಿಗೆ ಸಂಬಂಧಿಸಿ ದೃಢೀಕರಣ ಪ್ರಮಾಣ ಪತ್ರಗಳನ್ನು ಪೋಷಕರಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಎ. ನಂಜುಂಡಪ್ಪ, ತಹಸೀಲ್ದಾರ್ ಎಂ.ಎ. ಪದ್ಮ ಮಾತನಾಡಿದರು. ಸರ್ಕಾರಿ ವಕೀಲೆ ಪಿ. ಕೃಷ್ಣವೇಣಿ, ತಾಪಂ ಇಒ ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

