ಅಪರಿಚಿತರ ಜತೆ ಗಲಾಟೆ: ಉದ್ರಿಕ್ತ ಪರಿಸ್ಥಿತಿ
ಚಿಕ್ಕಬಳ್ಳಾಪುರ: ಗ್ರಾಮಕ್ಕೆ ತಡರಾತ್ರಿ ಬಂದ ಅಪರಿಚತರು ಹಾಗೂ ಗ್ರಾಮಸ್ಥರ ಮಧ್ಯೆ ಗಲಾಟೆಯಿಂದಾಗಿ ತಾಲೂಕಿನ ಗುಂತಪ್ಪನಹಳ್ಳಿ ಗೇಟ್ ಬಳಿ ಕೆಲವು ಸಮಯ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ಅಪರಿಚಿತರು ದರೋಡೆಗೆ ಸಂಚು ರೂಪಿಸುತ್ತಿದ್ದರು. ಇಲ್ಲವೇ ಕೊಲೆ ಸುಪಾರಿ ಪಡೆದುಕೊಂಡು ಬಂದಿದ್ದರು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಗ್ರಾಮಾಂತರ ಠಾಮೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಏನಾಗಿತ್ತು?: ಭಾನುವಾರ ರಾತ್ರಿ 12 ಗಂಟೆ ಸಮಯದಲ್ಲಿ ಗುಂತಪ್ಪನಹಳ್ಳಿ ಗೇಟ್ ಸಮೀಪ 15 ಮಂದಿ ಎರಡು ಕಾರುಗಳನ್ನು ನಿಲ್ಲಿಸಿಕೊಂಡು ಯಾವುದೋ ಯೋಜನೆ ರೂಪಿಸುತ್ತಿದ್ದರು. ಇದನ್ನು ಕಂಡ ಗ್ರಾಮದ ಕೆಲವರು ವಾಹನದ ಬಳಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಕಾರಿನಲ್ಲಿದ್ದವರು ಯಾರೋ ಸಾಲ ಕೊಡಬೇಕಾಗಿದ್ದು, ಅದನ್ನು ವಸೂಲಿ ಮಾಡಲು ಬೇರೆ ಕಡೆ ತೆರಳುತ್ತಿದ್ದೇವೆ ಎಂದಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕಾರಿನಲ್ಲಿ ಮಾರಕಾಯುಧಗಳಿರುವುದು ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ದರೋಡೆಕೋರರು ನಡುರಾತ್ರಿಯಲ್ಲಿ ಹೊಂಚು ಹಾಕಿ ಅನೇಕ ಮನೆಗಳ ಮೇಲೆ ದಾಳಿ ನಡೆಸಿ ನಗನಾಣ್ಯಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದು, ಕಾರಿನಲ್ಲಿದ್ದವರು ನಮ್ಮ ಊರಿಗೆ ದರೋಡೆ ಮಾಡಲು ಬಂದಿರಬಹುದೆಂದುಕೊಂಡು ಭಾವಿಸಿ ಕೂಗಿಕೊಂಡಿದ್ದಾರೆ. ತಕ್ಷಣ ಕಕ್ಕಾಬಿಕ್ಕಿಯಾದ ಕಾರಿನಲ್ಲಿದ್ದವರು ಅವರೊಂದಿಗೆ ಮಾತಿನ ಚಕಮಕಿ ನಡೆಸಿ ಹಲ್ಲೆಗೆ ಮುಂದಾಗಿದ್ದಾರೆ. ತಮ್ಮ ಬಳಿಯಿದ್ದ ಮಾರಕಾಯುಧಗಳನ್ನು ತೋರಿಸಿ ಬೆದರಿಸಿದ್ದಾರೆ. ಆದರೆ, ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಕೆಲವರು ಗ್ರಾಮಕ್ಕೆ ತೆರಳಿ ಜನರನ್ನು ಕರೆದುಕೊಂಡು ಬಂದು, ಕಾರಿನ ಗಾಜುಗಳನ್ನು ಪುಡಿ ಮಾಡಿದ್ದಾರೆ. ಇದರಿಂದ ಗಲಿಬಿಲಿಗೊಂಡ ದುಷ್ಕರ್ಮಿಗಳು ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಲು ಮುಂದಾಗಿದ್ದಾರೆ. ಆಗ ಗ್ರಾಮಸ್ಥರು 15 ಮಂದಿ ದುಷ್ಕರ್ಮಿಗಳಲ್ಲಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಕಿರಣ್, ರೋಹಿತ್, ಆನಂದ್ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ನೆಲಮಂಗಲದವರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

