ಚಿನ್ನದ ಗಣಿ ಕಾರ್ಮಿಕರ ಬದುಕು ಕಬ್ಬಿಣ!
ಕೆಜಿಎಫ್: ಕಾರ್ಮಿಕರ ನಾಡು ಎಂಬ ಖ್ಯಾತಿ ಪಡೆದ ಚಿನ್ನದ ಗಣಿ ಪ್ರದೇಶದಲ್ಲಿ ಬಿಜಿಎಂಎಲ್ ಕಾರ್ಮಿಕರ ಬಾಳು ಅಂಧಕಾರವಾಗಿದೆ.
ಕೇಂದ್ರ ಸರ್ಕಾರ 2001ರಲ್ಲಿ ಚಿನ್ನದ ಗಣಿಗಳನ್ನು ಮುಚ್ಚಿದ ನಂತರ ಕಾರ್ಮಿಕರ ಕುಟುಂಬಗಳು ಶೇ.100 ಸರ್ವಿಸ್ ಗ್ರಾಚ್ಯುಟಿ ಹಣ ಪಡೆಯಲು ಸುಮಾರು 12 ವರ್ಷಗಳ ನಿರಂತರ ಹೋರಾಟ ನಡೆಸುತ್ತಿದ್ದರೂ ಬೇಡಿಕೆಗಳು ಈಡೇರಿಲ್ಲ.
ಸುಮಾರು 10 ಸಾವಿರ ಕಾರ್ಮಿಕರು ಪರ್ಯಾಯ ಉದ್ಯೋಗ ಇಲ್ಲದೆ ಅವರ ಕುಟುಂಬಗಳು ಬೀದಿಪಾಲಾಗಿದ್ದು, 2001ರಲ್ಲಿ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆಯದೇ ಶೇ.100 ವಿಆರ್ಆಸ್ಗಾಗಿ ಸತತ ಹೋರಾಟ ಪುನರ್ವಸತಿ ಹಾಗೂ ಪರ್ಯಾಯ ಉದ್ಯೋಗಕ್ಕೆ ಹಲವು ರೀತಿಯ ಹೋರಾಟ ನಡೆಸಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. 2007ರಲ್ಲಿ ಕೇಂದ್ರ ಸರ್ಕಾರ ಹಳೆಯ ವಿಆರ್ಎಸ್ ಪ್ಯಾಕೇಜ್ಗೆ ಸರಿಹೊಂದುವ ಎಸ್ಟಿಬಿಪಿ ಯೋಜನೆಯನ್ನು ಕಾರ್ಮಿಕರಿಗೆ ವಿಆರ್ಎಸ್ ಹಣ ಮತ್ತು ಜಾಗತಿಕ ಟೆಂಡರ್ ಮೂಲಕ ಚಿನ್ನದ ಗಣಿಗಳ ಪುನರಾರಂಭ ಮತ್ತು ಹಾಲಿ ಕಾರ್ಮಿಕರಿಗೆ ವಾಸ ಇರುವ ಮನೆಗಳನ್ನು ಸ್ವಂತವಾಗಿ ನೀಡಲು ಕ್ಯಾಬಿನೆಟ್ ತೀರ್ಮಾನದಂತೆ 2007ರಲ್ಲಿ 3,100 ಕಾರ್ಮಿಕರು ಎಸ್ಟಿಬಿಪಿ ಯೋಜನೆಯಡಿ ಪರಿಹಾರದ ಹಣ ಪಡೆದರೂ ಕಾರ್ಮಿಕರ ಪ್ರಮುಖ ಬೇಡಿಕೆಯಾದ ಶೇ.100 ವಿಆರ್ಎಸ್ ಬಡ್ಡಿ ಹಣ ಯೋಜನೆಗೆ ಸಮಾನವಾದ ಪರಿಹಾರ ದೊರೆಯದೆ ಈವರೆಗೆ 154 ಕಾರ್ಮಿಕರು ಬಡತನದಿಂದ ಮೃತಪಟ್ಟಿದ್ದಾರೆ.
ಬಿಜಿಎಂಎಲ್ ಕಾರ್ಮಿಕರು ಸೇರಿದಂತೆ ಕ್ಷೇತ್ರದ ಸಾವಿರಾರು ನಿರುದ್ಯೋಗಿಗಳು ದಿನ ಗೂಲಿಗಾಗಿ ಪ್ರತಿದಿನ ಬೆಂಗಳೂರು ಸೇರಿದಂತೆ ಇತರೆ ತಾಲೂಕುಗಳಿಗೆ ಹೋಗಿ ದುಡಿಯಬೇಕಾದ ಸ್ಥಿತಿ ಉಂಟಾಗಿದೆ. ಕೆಜಿಎಫ್ನ ಬೆಮೆಲ್ ಸಾರ್ವಜನಿಕ ಉದ್ದಿಮೆಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಬಡವರು ತಾತ್ಕಾಲಿಕ ಕೂಲಿ ಕಾರ್ಮಿಕರಾಗಿ 20 ವರ್ಷಗಳಿಂದ ಕಾಯಂ ಇಲ್ಲದೆ ಕಡಿಮೆ ಕೂಲಿಗೆ ಕೆಲಸ ಮಾಡುತ್ತಿದ್ದು ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಹಲವು ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ.
ಬಿಜಿಎಂಎಲ್ ಕಾರ್ಖಾನೆಯ ಸುಮಾರು 1,190 ಎಕರೆ ಭೂಮಿಯನ್ನು ಗುತ್ತಿಗೆ ಪಡೆದ ಬೆಮೆಲ್ ಆಡಳಿತ ಮಂಡಳಿ ರೈಲ್ವೆ ಪ್ಯಾಬ್ರಿಕೇಷನ್ ಘಟಕ ಆರಂಭಿಸಿ ಈ ಘಟಕದಲ್ಲಿ ಬಿಜಿಎಂಎಲ್ ಕಾರ್ಮಿಕರಿಗೆ ಅವರ ಕುಟುಂಬದ ಅವಲಂಬಿತರಿಗೆ ಕಾಯಂ ಉದ್ಯೋಗ ನೀಡದೆ ಅನ್ಯಾಯವಾಗಿದೆ. ಬೆಮೆಲ್ ಕಾರ್ಖಾನೆಯ ಅರೆ ಕಾಲಿಕ ಗುತ್ತಿಗೆ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ, ಕ್ಯಾಂಟೀನ್ ವ್ಯವಸ್ಥೆ ಹಾಗೂ ಇತರ ಮೂಲ ಸೌಲಭ್ಯಗಳಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ 2001ರಿಂದ ಬಿಜಿಎಂಎಲ್ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೆ ಸುಳ್ಳು ಭರವಸೆಗಳನ್ನು ನೀಡುತ್ತಾ ವಂಚಿಸುತ್ತಿದ್ದಾರೆ ಎಂಬುದು ಕಾರ್ಮಿಕ ಸಂಘಗಳ ಆರೋಪ.
ಆರ್. ರಜನೀಕಾಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

